ರಕ್ತದ ಮಡುವಿನಲ್ಲಿ ಬಿದ್ದಿದ್ದವನ ರಕ್ಷಣೆ

15kolar1B-narayana
Published on

ಕೋಲಾರ: ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ-75 ಚುಂಚದೇನಹಳ್ಳಿ ಗೇಟ್​ ಸಮೀಪ ಭಾನುವಾರ ಮಧ್ಯರಾತ್ರಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಕೋಲಾರ ಗ್ರಾಮಾಂತರ ಠಾಣೆಯ ಇನ್​ಸ್ಪೆಕ್ಟರ್​ ಕೆ.ಕಾಂತರಾಜ್​ ಹಾಗೂ ಪಿಎಸ್​ಐ ವಿ.ಭಾರತಿ ರಕ್ಷಿಸಿದ್ದಾರೆ.

ಮಧ್ಯರಾತ್ರಿ 1.15 ಗಂಟೆ ಸುಮಾರಿನಲ್ಲಿ ಪಿಎಸ್​ಐ ಭಾರತಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಚುಂಚದೇನಹಳ್ಳಿ ಗೇಟ್​ ರಸ್ತೆಯ ಪಕ್ಕದಲ್ಲಿ ತಾಲೂಕಿನ ಮಲ್ಲಸಂದ್ರ ನಿವಾಸಿ ನಾಗೇಶ್​ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಗಮನಿಸಿ ಕೂಡಲೇ ಇನ್​ಸ್ಪೆಕ್ಟರ್​ ಕಾಂತರಾಜ್​ಗೆ ಮಾಹಿತಿ ನೀಡಿದ್ದಾರೆ. ನಗರಠಾಣೆಯ ಇನ್​ಸ್ಪೆಕ್ಟರ್​ ಎಂ.ಸದಾನಂದ ಜತೆ ಕಾಂತರಾಜ್​ ಸ್ಥಳಕ್ಕೆ ಭೇಟಿ ಕೂಡಲೇ ನಗರದ ಆರ್​.ಎಲ್​.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ನಾಗೇಶ್​, ಏಳೆಂಟು ವರ್ಷಗಳ ಹಿಂದೆ ವಾನರಾಶಿ ಗ್ರಾಮದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದರು. ಇದರಿಂದ ಯುವತಿ ಕುಟುಂಬದ ನಡುವೆ ಮನಸ್ತಾಪವಿತ್ತು. ಆದ್ದರಿಂದಲೇ ನನ್ನನ್ನು ಕೊಲೆ ಮಾಡಲು ಪತ್ನಿಯ ಕುಟುಂಬದವರು ಸಂಚು ರೂಪಿಸಿ, ರಮೇಶ್​ ಎಂಬಾತನಿಗೆ ಮದ್ಯಪಾನ ಮಾಡಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ಕೂಡಲೇ ನಾನು ಸತ್ತು ಹೋಗಿದ್ದೆಂದು ತಿಳಿದು ಸ್ಥಳದಿಂದ ಹಲ್ಲೆಕೋರರು ಹೊರಟು ಹೋಗಿದ್ದಾರೆ ಎಂದು ಗಾಯಾಳು ನಾಗೇಶ್​ ಪೊಲೀಸರಿಗೆ ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದವನ ಜೀವ ಉಳಿಸಿದ ಖುಷಿ ಇದೆ. ಇದು ನಮ್ಮ ವೃತ್ತಿ ಜೀವನದಲ್ಲಿ ಹೆಮ್ಮೆಯ ವಿಚಾರ. ಆರೋಪಿ ರಮೇಶ್​ ಬಂಧನಕ್ಕೆ ತನಿಖೆ ನಡೆಸುತ್ತಿದ್ದೇವೆ ಎಂದು ಇನ್​ಸ್ಪೆಕ್ಟರ್​ ಕಾಂತರಾಜ್​ ತಿಳಿಸಿದರು.

  • 10 ಸಾವಿರ ಬಹುಮಾನ
    ಹಲ್ಲೆ ಮಾಡಿದ ಆರೋಪಿ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಗಾಯಗೊಂಡಿದ್ದ ನಾಗೇಶ್​ಗೆ ಚಿಕಿತ್ಸೆ ಕೊಡಿಸುವ ಮೂಲಕ ಪೊಲೀಸರು ಜವಾಬ್ದಾರಿ ಮೆರೆದಿದ್ದಾರೆ ಎಂದು ಎಸ್ಪಿ ಎಂ.ನಾರಾಯಣ ಪ್ರಶಂಸಿಸಿದ್ದಾರೆ. ರಕ್ತದ ಮಡುವಿನಲ್ಲಿದ್ದ ನಾಗೇಶ್​ಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಕೆ.ಕಾಂತರಾಜ್​, ಎಂ.ಸದಾನಂದ, ವಿ.ಭಾರತಿ, ಸಿಬ್ಬಂದಿ ಗಂಗಾಧರ್​, ನಾಗರಾಜ್​ ಕಾರ್ಯವೈಖರಿ ಬಗ್ಗೆ ಕೇಂದ್ರ ವಲಯ ಐಜಿಪಿ ಬಿ.ಆರ್​.ರವಿಕಾಂತೇಗೌಡ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ ಪ್ರಶಂಸೆ ವ್ಯಕ್ತಪಡಿಸಿ 10 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net