
ಕೋಲಾರ: ಐಪಿಎಲ್ ಸೀಸನ್ ಸಮಯದಲ್ಲಿ ಅಕ್ರಮವಾಗಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಸಂಬಂಧ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿ 10 ಪ್ರಕರಣದಲ್ಲಿ 25 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹೇಳಿದರು.
ನಗರದ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂದ್ಯಾವಳಿಗಳು ನಡೆಯುತ್ತಿದ್ದ ವೇಳೆ ಕೆಲವರು ಆನ್ಲೈನ್ ಮೂಲಕ ಅಕ್ರಮವಾಗಿ ಬೆಟ್ಟಿಂಗ್ ಅಡಿಸುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ, ಜತೆಗೆ ಕಾರ್ಯಾಚರಣೆ ನಡೆಸಿದಾಗ ಸಿಕ್ಕಿದವರು ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದರು.
ಗಲ್ಪೇಟೆ ಪೊಲೀಸರು ನಗರದ ರಹಮತ್ ನಗರದ ಉರ್ದು ಶಾಲೆಯ ಬಳಿ ಐಪಿಎಲ್ ಬೆಟ್ಟಿಂಗ್ ಆಡುತ್ತಿದ್ದ ಸ್ಥಳದಲ್ಲಿ ದಾಳಿ ಮಾಡಿದಾಗ ಮಹಾಲಕ್ಷಿ$್ಮ ಬಡಾವಣೆಯ ಸೈಯದ್ ನಿಜಾಂನನ್ನು ಬಂಧಿಸಿ ಒಂದು ಮೊಬೈಲ್ ಮತ್ತು ಪಣಕ್ಕೆ ಕಟ್ಟಿದ್ದ 3,400 ರೂ. ವಶಪಡಿಸಿಕೊಳ್ಳಲಾಗಿದೆ. ರಹಮತ್ನಗರದ ಖುತುಬ್ ಪಾಷಾ ಮತ್ತು ಶಹೀನ್ ಷಾ ನಗರದ ಇಮ್ರಾನ್, ಮುಜಾಮಿಲ್ ಪರಾರಿಯಾಗಿದ್ದು, ದೂರು ದಾಖಲಾಗಿದೆ ಎಂದರು.
ಕೋಲಾರ ನಗರ, ಗಲ್ಪೇಟೆ ಮತ್ತು ಶ್ರೀನಿವಾಸಪುರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮೂರು ಜನ ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಗಳಾದ ಶಾಮೀರ್, ಬಿ.ಎನ್.ನಾಗರಾಜ್ ಹಾಗೂ ರಾಜಶೇಖರ್ ಬಂಧಿಸಿ, 18,500 ರೂ. ಹಾಗೂ 5 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ರಹಮತ್ ನಗರದ ರೈಲ್ವೆ ಬ್ರಿಡ್ಜ್ ಬಳಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ನೂರ್ ನಗರದ ನಿವಾಸ ಜಾಕೀರ್, ಟಮಕ ಅರುಣ್ನನ್ನು ವಶಕ್ಕೆ ಪಡೆದು 1,600 ರೂ. ಮತ್ತು ಎರಡು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕೋಲಾರ ನಗರ ಠಾಣೆಯ ಪಿ.ಐ. ಎಂ.ಸದಾನಂದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವು ದೀರ್ಪಾಷಾ, ವಸೀಂ ಬೇಗ್, ಮುಜಾಯಿದ್ ಪಾಷಾನನ್ನು ಬಂಧಿಸಿ ಅವರಿಂದ ಒಂದು ಮೊಬೈಲ್, 4.600 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾ ಸೈಬರ್ ಅಪರಾಧ & ಮಾಧಕ ವಸ್ತುಗಳ ನಿಯಂತ್ರಣ ಪೊಲೀಸ್ ಠಾಣೆ ಪೊಲೀಸರು ತಾಲೂಕಿನ ಅಮ್ಮೇರಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಚಲಪತಿ ಮತ್ತು ಮುಬಾರಕ್ ಪಾಷಾನನ್ನು ದಸ್ತಗಿರಿ ಮಾಡಿ 4,400 ರೂ. ಹಾಗೂ ಎರಡು ಮೊಬೈಲ್ ಹಾಗೂ ಮತ್ತೊಂದು ಬೆಟ್ಟಿಂಗ್ ಪ್ರಕರಣದಲ್ಲಿ ಖಾಜಾನನ್ನು ಬಂಧಿಸಿ 4,200 ರೂ., ಮೊಬೈಲ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಚಿಟ್ನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಶ್ರೀನಾಥ್, ಶಿವಕುಮಾರ್ ಬಂಧಿಸಿ, 4,500 ರೂ., 2 ಮೊಬೈಲ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಮಾಲೂರು ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಜ್ವಲ್, ಮಂಜುನಾಥ ಬಂಧಿಸಿ 8000 ರೂ., ಒಂದು ಮೊಬೈಲ್ ಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಗಾಂಧಿ ನಗರದ ಬಳಿ ಅಕ್ರಮವಾಗಿ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿಸಿಕೊಂಡಿದ್ದ ತೌಸಿಪ್ ಪಾಷ, ಶಹೀನ್ನಾ, ಕುತುಬ್, ಮದನ್ ಮತ್ತು ನಿಜಾಮ್ ವಿರುದ್ಧ ರೂದು ದಾಖಲಿಸಲಾಗಿದೆ ಎಂದು ವಿವರಿಸಿದರು.