

Murder: ಮಹಾರಾಷ್ಟ್ರದ ರತ್ನಗಿರಿಯಲ್ಲಿ ವ್ಯಕ್ತಿಯೊಬ್ಬನನ್ನು ಮತ್ತೊಬ್ಬ ಹುಡುಗಿ ಜೊತೆ ಮದುವೆಯಾಗಲು ಅಡ್ಡಿಯಾಗುತ್ತಾಳೆ ಎಂಬ ಕಾರಣಕ್ಕೆ ತನ್ನ ಪ್ರೇಯಸಿಯನ್ನು ಕೊಂದು, ಶವವನ್ನು ಚರಂಡಿಗೆ ಎಸೆದ ಆರೋಪದ ಮೇಲೆ ಶನಿವಾರ ಬಂಧಿಸಲಾಗಿದೆ ಎಂದು ಭಾನುವಾರ(ಆಗಸ್ಟ್ 31) ವರದಿಯಾಗಿದೆ.
ಗೆಳತಿ ಭಕ್ತಿ ಜಿತೇಂದ್ರ ಮಾಯೇಕರ್ ನಾಪತ್ತೆಯಾದ ಎರಡು ವಾರಗಳ ನಂತರ ಆರೋಪಿ ದೂರ್ವಾಸ್ ದರ್ಶನ್ ಪಾಟೀಲ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 26 ವರ್ಷದ ಭಕ್ತಿ ಮಾಯೇಕರ್ ಆಗಸ್ಟ್ 17 ರಂದು ನಾಪತ್ತೆಯಾಗಿದ್ದಳು. ಅಂದು ಮನೆಯಿಂದ ಹೊರ ಹೋಗುವಾಗ ಗೆಳತಿಯನ್ನು ಭೇಟಿಯಾಗಲು ಹೋಗುವುದಾಗಿ ಹೇಳಿ ಹೋಗಿದ್ದಳು ಎನ್ನಲಾಗಿದೆ.
ಈ ಕುರಿತು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು, ಮೊಬೈಲ್ ಫೋನ್ ಟ್ರೇಸ್ ಮೂಲಕ ಖಂಡಾಲಾ ಪ್ರದೇಶದ ಬಳಿಕ ಆಕೆಯ ಶವವನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆಕೆಯ ಪ್ರಿಯಕರನನ್ನು ಸಂಪರ್ಕಿಸಿ ವಿಚಾರಣೆ ನಡೆಸಿದ್ದಾರೆ.
ಆರೋಪಿ ಪ್ರಿಯಕರ ವಿಚಾರಣೆಯ ಸಮಯದಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆಕೆಯ ದೇಹವನ್ನು ಅಂಬಾ ಘಾಟ್‌ನಲ್ಲಿ ಎಸೆದಿದ್ದಾಗಿ ಹೇಳಿದ್ದಾನೆ. ಬೇರೊಬ್ಬ ಮಹಿಳೆಯೊಂದಿಗೆ ತನ್ನ ವಿವಾಹದ ಪ್ರಸ್ತಾಪದ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದ ಕಾರಣ ಆಕೆಯನ್ನು ಕೊಂದಿದ್ದಾಗಿ ಅವನು ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.
ಪೊಲೀಸರು ಮೃತ ಭಕ್ತಿ ಮಾಯೆಕರ್ ಅವರ ದೇಹವನ್ನು ವಶಪಡಿಸಿಕೊಂಡಿದ್ದು, ಆರೋಪಿ ಪಾಟೀಲ್ ಮತ್ತು ಅವನ ಇಬ್ಬರು ಸಹಾಯಕರಾದ ವಿಶ್ವಾಸ್ ವಿಜಯ್ ಪವಾರ್ ಮತ್ತು ಸುಶಾಂತ್ ಶಾಂತಾರಾಮ್ ನರಲ್ಕರ್ ಅವರನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)