ಆಸ್ತಿ ತೆರಿಗೆ ಶೇ.3ರಷ್ಟು ಹೆಚ್ಚಳ

pura meet
ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಆಸ್ತಿ ತೆರಿಗೆ ಶೇ.3 ಹೆಚ್ಚಿಸಲು ಹಾಗೂ 3 ವರ್ಷಗಳಿಗೊಮ್ಮೆ ಪರಿಷ್ಕರಿಸುವ ವಾಣಿಜ್ಯ ವ್ಯವಹಾರ ಪರವಾನಗಿ ಶುಲ್ಕ ಶೇ.10 ಹೆಚ್ಚಿಸುವ ಬಗ್ಗೆ ಬುಧವಾರ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

*ಹೆದ್ದಾರಿ ಯೋಜನಾ ನಿರ್ದೇಶಕ ಗೈರಿಗೆ ಆಕ್ಷೇಪ: ಪುರಸಭೆ ವ್ಯಾಪ್ತಿಯಲ್ಲಿನ ಹೆದ್ದಾರಿ ಸಮಸ್ಯೆ ಕುರಿತು ಚರ್ಚಿಸಲು ನಾಲ್ಕು ವರ್ಷಗಳಿಂದ ಪತ್ರ ಬರೆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರು ಸಭೆಗೆ ಗೈರು ಹಾಜರಾಗುತ್ತಿರುವ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಹೆದ್ದಾರಿ ಸಮಸ್ಯೆ ಗಂಭೀರವಾಗಿದೆ. ಸಮಸ್ಯೆ ಬಗ್ಗೆ ಚರ್ಚಿಸಲು, ಅಹವಾಲು ಪಡೆಯಲು ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ಬರಬೇಕಿದೆ. ಪುರಸಭೆ ಸಾಮಾನ್ಯ ಸಭೆ ನಿರ್ಲಕ್ಷಿಸುವುದು ಬೇಡ. ಸಭೆ ತಪ್ಪಿಸುವ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಟೋಲ್ ಸೇಫ್ಟಿ ಮ್ಯಾನೇಜರ್‌ಗೆ ಎಚ್ಚರಿಕೆ ನೀಡಿದರು.

ಕಾಪು ಪುರಸಭೆ ವ್ಯಾಪ್ತಿ ಮೂಳೂರಿನಿಂದ ಪಾಂಗಾಳದವರೆಗಿನ ರಾ.ಹೆ 66ರಲ್ಲಿ ವಿವಿಧ ಸಮಸ್ಯೆಗಳಿದ್ದು, ಅದರ ಬಗ್ಗೆ ನಾಲ್ಕು ವರ್ಷಗಳಿಂದಲೂ ಚರ್ಚೆ ನಡೆಯುತ್ತಿದೆ. ಆದರೆ ಸಮಸ್ಯೆ ಬಗೆಹರಿದಿಲ್ಲ. ಹೆದ್ದಾರಿ ಇಲಾಖೆ ಪುರಸಭೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಸದಸ್ಯರು ದೂರಿದರು. ಉತ್ತರಿಸಲು ಮುಂದಾದ ಟೋಲ್ ಸೇಫ್ಟಿ ಮ್ಯಾನೇಜರ್ ಅವರಲ್ಲಿ ನಮ್ಮ ಸಮಸ್ಯೆ ಬಗ್ಗೆ ನಿಮ್ಮ ಜತೆ ಮಾತನಾಡಿ ಪ್ರಯೋಜನವಿಲ್ಲ. ನಿಮ್ಮ ಮೇಲಧಿಕಾರಿಗಳು ಬಂದು ಉತ್ತರಿಸಲಿ ಎಂದು ಆಗ್ರಹಿಸಿದರು. ಪುರಸಭೆ ವ್ಯಾಪ್ತಿಯಲ್ಲಿರುವ ಹೆದ್ದಾರಿ ಸಮಸ್ಯೆ ಬಗ್ಗೆ ಪಟ್ಟಿ ಮಾಡಿಕೊಡುವಂತೆ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರಿಗೆ ಶಾಸಕರು ಸೂಚನೆ ನೀಡಿದರು.

ಕಾಪು ತಾಲೂಕಿನಲ್ಲಿ ಪೂರ್ಣ ಪ್ರಮಾಣದಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ತೆರೆಯಲು ಜನಪರವಾಗಿರುವ ವ್ಯಕ್ತಿಗೆ ಅವಕಾಶ ಕಲ್ಪಿಸುವಂತೆ ಅರುಣ್ ಶೆಟ್ಟಿ ಶಾಸಕರಿಗೆ ಅಹವಾಲು ಸಲ್ಲಿಸಿದರು.

ಪುರಸಭೆ ಸದಸ್ಯ ಕಿರಣ್ ಆಳ್ವ ಅವರನ್ನು ಕಾಪು ನಗರ ಯೋಜನಾ ಪ್ರಾಧಿಕಾರಕ್ಕೆ ನಾಮನಿರ್ದೇಶನಗೊಳಿಸಲಾಯಿತು. ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಉಪಸ್ಥಿತರಿದ್ದರು.

ಬೇಕಾಬಿಟ್ಟಿ ಬ್ಯಾನರ್ ಅಳವಡಿಕೆ: ಪುರಸಭೆ ವ್ಯಾಪ್ತಿಯಲ್ಲಿನ ನಿಷೇಧಿತ ವಲಯ ಮತ್ತು ಅಪಘಾತ ವಲಯಗಳಲ್ಲಿ ಬೇಕಾಬಿಟ್ಟಿಯಾಗಿ ಬ್ಯಾನರ್ ಅಳವಡಿಸಿದ್ದು, ಅದನ್ನು ತೆರವುಗೊಳಿಸುವಂತೆ ಸದಸ್ಯರು ಆಗ್ರಹಿಸಿದರು. ಬ್ಯಾನರ್ ಅಳವಡಿಕೆ, ತೆರವುಗೊಳಿಸುವಿಕೆ ಬಗ್ಗೆ ಸದಸ್ಯರ ಸಹಕಾರ ಅಗತ್ಯ. ಬ್ಯಾನರ್ ಅಳವಡಿಕೆಗೆ ಪರವಾನಗಿ ಪಡೆದುಕೊಳ್ಳುವುದು, ನಿಷೇಧಿತ ವಲಯದಲ್ಲಿ ಬ್ಯಾನರ್ ಅಳವಡಿಸದಿರುವಂತೆ ರಾಜಕೀಯ ಪಕ್ಷಗಳ ಮುಖಂಡರನ್ನು ಸದಸ್ಯರು ಮನವೊಲಿಸಬೇಕು. ಈ ವಿಷಯದಲ್ಲಿ ಸದಸ್ಯರೆಲ್ಲರೂ ನಮ್ಮೊಂದಿಗೆ ಸಹಕರಿಸಬೇಕು ಎಂದು ಮುಖ್ಯಾಧಿಕಾರಿ ನಾಗರಾಜ್ ತಿಳಿಸಿದರು. ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಂತೆ, ಅಂಗಡಿ ಅಳವಡಿಸಲು ಜಾಗ ಹುಡುಕಿ ಗೊತ್ತುಪಡಿಸಿ, ಟೆಂಡರ್ ಕರೆದು ಏಜನ್ಸಿ ಮೂಲಕ ಹರಾಜು ಹಾಕುವಂತೆ ಸದಸ್ಯರು ಒತ್ತಾಯಿಸಿದರು.

ಫೆ.28ರ ವಾರದ ಸಂತೆ ರದ್ದು

ಕಾಪು ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬರುವ ಫೆ.28ರಂದು ಒಂದು ದಿನದ ಸಂತೆ ರದ್ದುಪಡಿಸುವಂತೆ ಸದಸ್ಯರು ಸಲಹೆ ನೀಡಿದರು. ಈ ಬಗ್ಗೆ ಮೊದಲೇ ಫಲಕ ಹಾಕಿ ಮಾಹಿತಿ ನೀಡಲಾಗುವುದು. ಉತ್ಸವ ಸಂದರ್ಭದ ಅಂಗಡಿ, ಸಂತೆಗೆ ಸೂಕ್ತ ಜಾಗ ಹುಡುಕಿ ನೀಡಲು ನಿರ್ಣಯಿಸಲಾಯಿತು.

ಈಡೇರದ ನೀರು ಸರಬರಾಜು ಭರವಸೆ

ನೀರು ಸರಬರಾಜು ಯೋಜನೆ ವಿಚಾರದಲ್ಲಿ ಮೂರು ಸಭೆಗಳಲ್ಲಿ ಚರ್ಚೆ ನಡೆಸಿದ್ದೇವೆ. ದೂರು ನೀಡಿದ್ದೇವೆ. ಆದರೆ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಸಂಬಂಧಪಟ್ಟ ಇಂಜಿನಿಯರ್‌ಗಳು ಭರವಸೆ ನೀಡುತ್ತಾರೆ ಎಂದು ಸದಸ್ಯರಾದ ಅರುಣ್ ಶೆಟ್ಟಿ, ಉಮೇಶ್ ಕರ್ಕೇರ, ವಹೀದಾ ಬಾನು, ಸುರೇಶ್ ದೇವಾಡಿಗ, ದೇವರಾಜ್ ಕೋಟ್ಯಾನ್ ದೂರಿದರು. ಜಲಮಂಡಳಿ ಇಂಜಿನಿಯರ್ ರಕ್ಷಿತ್ ರಾವ್ ಉತ್ತರಿಸಿ, ಕುರ್ಕಾಲು ಡ್ಯಾಂನಿಂದ ಕಾಪು ಪುರಸಭೆಗೆ ನೀರು ಯೋಜನೆ ಅನುಷ್ಠಾನಕ್ಕಾಗಿ ನಾಲ್ಕು ವಲಯಗಳನ್ನಾಗಿ ವಿಂಗಡಿಸಿ ಟ್ಯಾಂಕ್ ನಿರ್ಮಿಸಿ, ಪೈಪ್‌ಲೈನ್ ಜೋಡಿಸಲಾಗುತ್ತಿದೆ. ರಾಜ್ಯ ಸರ್ಕಾರದ ಅನುದಾನದಲ್ಲಿ 30 ಕಿ.ಮೀ, ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 71 ಕಿ.ಮೀ. ಪೈಪ್‌ಲೈನ್ ಜೋಡನೆಯಾಗಿದೆ. ಅಮೃತ್ ಯೋಜನೆಯಡಿ 2000 ಮನೆಗಳಿಗೆ ಕನೆಕ್ಷನ್ ಆಗಿದೆ. 2,400 ಮನೆಗಳ ಕನೆಕ್ಷನ್ ಜೋಡಣೆ ಪ್ರಗತಿಯಲ್ಲಿದೆ. ಅಲ್ಲಿ ಜಾಗದ ಸಮಸ್ಯೆ, ರಸ್ತೆ ಸಹಿತ ವಿವಿಧ ಕಾರಣ ಅಡ್ಡಿಯಾಗುತ್ತಿವೆ. ಆದಷ್ಟು ಶೀಘ್ರದಲ್ಲಿ ಪೈಪ್‌ಲೈನ್ ಜೋಡಣೆ ಪೂರ್ಣಗೊಳಿಸಲಾಗುವುದು ಎಂದರು. ಶಾಸಕ ಗುರ್ಮೆ ಸುರೇಶ್ ಮಾತನಾಡಿ, ನೀರು ಪೂರೈಕೆ ಅತಿ ಮುಖ್ಯವಾಗಿದ್ದು ಯಾವುದೇ ಅಡ್ಡಿಯಾಗದಂತೆ ಪೈಪ್‌ಲೈನ್ ಜೋಡಿಸುವಂತೆ ಸೂಚನೆ ನೀಡಿದರು. ಸದಸ್ಯರು ಸಭೆ ಮುಂದಿಟ್ಟ ಸಮಸ್ಯೆ ಬಗೆಹರಿಸಲು ಇಷ್ಟೇಕೆ ನಿರಾಸಕ್ತಿ ಎಂದು ಪ್ರಶ್ನಿಸಿದರು. ಹಿರಿಯ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಶೀಘ್ರ ಸಮಸ್ಯೆ ಬಗೆಹರಿಸಿಕೊಡುವಂತೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net