ಉಚ್ಚಿಲ ಹೆದ್ದಾರಿ ಸಮಸ್ಯೆ ಶೀಘ್ರ ಪರಿಹಾರ

uchila
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಬಡಾ ಗ್ರಾಮ ಉಚ್ಚಿಲದಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರ ಸಮಸ್ಯೆಗಳ ಕುರಿತು ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ.ಬ್ರಮನ್ಕರ್ ಸೋಮವಾರ ಸ್ಥಳ ಪರಿಶೀಲಿಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿಗೆ ಸ್ಪಂದಿಸಿ ಅವರು ಸ್ಥಳಕ್ಕಾಗಮಿಸಿದ್ದು, ಸಂಸದರು ಸಹಿತ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ತಹಸೀಲ್ದಾರ್ ಪ್ರತಿಭಾ ಆರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ.ಸಿದ್ದಲಿಂಗಪ್ಪ ಹಾಗೂ ಸ್ಥಳೀಯರು ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದರು.

ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ ಮನವಿಯನ್ನು ತಾಳ್ಮೆಯಿಂದ ಆಲಿಸಿದ ಅಧಿಕಾರಿ, ಶೀಘ್ರವೇ ಪರಿಹಾರ ನೀಡುವ ಭರವಸೆ ನೀಡಿದರು.

ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ್ ಮೆಂಡನ್, ಉಪಾಧ್ಯಕ್ಷ ದೀಪಕ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೆದ್, ರಾಷ್ಟ್ರೀಯ ಗುತ್ತಿಗೆದಾರ ಕಂಪನಿ ಪ್ರೀತಂ, ತಿಮ್ಮಯ್ಯ, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಎಂ.ಎಸ್., ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಎಂ.ಎ.ಗಫೂರ್, ಯು.ಸಿ.ಶೇಖಬ್ಬ, ಉಚ್ಚಿಲ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಸಿರಾಜ್ ಉಚ್ಚಿಲ ಮತ್ತಿತರರು ಪಾಲ್ಗೊಂಡಿದ್ದರು.

ಅಗತ್ಯವುಳ್ಳ ಕಾಮಗಾರಿಗಳು

ನಿರಂತರ ಅಪಘಾತ ಹಾಗೂ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ದಿನಗಳೆದಂತೆ ಅಪಘಾತಗಳು ಹೆಚ್ಚುತ್ತಿದ್ದು, ವ್ಯವಸ್ಥಿತ ಯೂಟರ್ನ್ ಹಾಗೂ ರಿಫ್ಲೆಕ್ಟ್ರರ್, ಹೈಮಾಸ್ಕ್, ಜೀಬ್ರಾ ಕ್ರಾಸಿಂಗ್, ಸರ್ವಿಸ್ ರಸ್ತೆಗಳಲ್ಲಿ ಸೂಕ್ತ ಹಂಪ್‌ಗಳನ್ನು ಅಳವಡಿಸುವ ಬಗ್ಗೆ, ಡ್ರೈನೇಜ್ ನಿರ್ಮಿಸುವ ಬಗ್ಗೆ ಸಂಸದ, ಶಾಸಕ ಸಹಿತ ಸ್ಥಳೀಯರು ಅಧಿಕಾರಿ ಬಳಿ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net