ಹೆಬ್ರಿ: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಲ್ಲಿ ಮನೆಗಳಿಗೆ ಸೋಲಾರ್ ಅಳವಡಿಸಿಕೊಂಡು ಸಾರ್ವಜನಿಕರು ಸಬ್ಸಿಡಿ ಪಡೆಯುವುದರೊಂದಿಗೆ ಅದರಲ್ಲಿ ಸಿಗುವ ಅನೇಕ ರೀತಿಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮೆಸ್ಕಾಂ ಉಡುಪಿ ವೃತ್ತದ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯಾಯ ಹೇಳಿದರು.
ಹೆಬ್ರಿಯ ಮೆಸ್ಕಾಂ ಉಪ ವಿಭಾಗದಲ್ಲಿ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರು ವಿದ್ಯುತ್ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ 1912ಗೆ ಕರೆ ಮಾಡಿದಾಗ ತುರ್ತು ಸೇವೆ ಸಿಗುತ್ತದೆ. ಜನಸಂಪರ್ಕ ಸಭೆ ತನಕ ಕಾಯಬೇಕಾಗಿಲ್ಲ, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ನಾಡ್ಪಾಲು ಗ್ರಾಮದ ಬೊಬ್ಬರ್ಯಬೆಟ್ಟು ಎಂಬಲ್ಲಿ 11 ಕೆವಿ ವಿದ್ಯುತ್ ತಂತಿ ಲೈನ್ ಕೃಷಿ ತೋಟದ ಮಧ್ಯೆ ಹಾದು ಹೋಗಿರುವುದರಿಂದ, ಸಮಸ್ಯೆ ಉಂಟಾಗಿದೆ. ಇದು ಕೃಷಿಗೆ ಅಪಾಯಕಾರಿಯಾಗಿರುವುದರಿಂದ ಸ್ಥಳಾಂತರಿಸಿ ಎಂದು ರೈತ ನಾರಾಯಣ ಆಚಾರ್ಯ ಮನವಿ ಮಾಡಿದರು.
ಲೋ ವೋಲ್ಟೈಸ್ ಸಮಸ್ಯೆ, ಹೆಚ್ಚುವರಿ ವಿದ್ಯುತ್ ಪರಿವರ್ತಗಳ ಅಳವಡಿಕೆ, ಶಿಥಿಲಗೊಂಡ ವಿದ್ಯುತ್ ತಂತಿ ಬದಲಾವಣೆ ಬಗ್ಗೆ ಚರ್ಚೆಗಳು ನಡೆದವು.
ಕಾರ್ಕಳ ವಿಭಾಗದ ಕಾರ್ಯನಿರ್ವಾಹಕ ಸಹಾಯಕ ಇಂಜಿನಿಯರ್ ನರಸಿಂಹ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ್, ಸಹಾಯಕ ಇಂಜಿನಿಯರ್ ರಾಧಿಕಾ, ಇಂಜಿನಿಯರ್‌ಗಳಾದ ಶಿವಕುಮಾರ್, ಲಕ್ಷ್ಮೀಶ ಮಂಜಪ್ಪ ನಾಯ್ಕ, ಸಂದೀಪ, ಕರ್ಣ ಕೆ.ಎಸ್. ಮತ್ತಿತರರಿದ್ದರು.