

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಬೀಜಾಡಿ ಗ್ರಾಮ ಪಂಚಾಯಿತಿ ವತಿಯಿಂದ ಅಧ್ಯಕ್ಷ ಪ್ರಕಾಶ್ ಪೂಜಾರಿ ಬೀಜಾಡಿ ಅಧ್ಯಕ್ಷತೆಯಲ್ಲಿ ಸೋಮವಾರ ಮಿತ್ರಸೌಧದಲ್ಲಿ ಜರುಗಿದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹುತಾತ್ಮರಾದ ಗ್ರಾಮದ ವೀರಯೋಧ ಅನೂಪ್ ಪೂಜಾರಿ ಅವರ ಸ್ಮಾರಕವನ್ನು ಸರ್ಕಾರಿ ಸ್ಥಳದಲ್ಲಿಯೇ ನಿರ್ಮಾಣ ಮಾಡುವುದೆಂದು ಸದ್ಯಸರು ತೀರ್ಮಾನಿಸಿ ನಿರ್ಣಯಿಸಿದರು. ಈ ಸಂದರ್ಭ ಆಗಲಿದ ವೀರ ಯೋಧನಿಗೆ ಸ್ಥಳೀಯಾಡಳಿತದಿಂದ ನುಡಿನಮನ ಸಲ್ಲಿಸಲಾಯಿತು.
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿನಲ್ಲಿ ಸೇನಾ ವಾಹನ ಉರುಳಿ ಬಿದ್ದ ಅಪಘಾತದಲ್ಲಿ ಹುತಾತ್ಮರಾದ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಕೆರೆಮನೆ ನಿವಾಸಿ ಲ್ಯಾನ್ಸ್ ಹವಾಲ್ದಾರ್ ಅನೂಪ್ ಪೂಜಾರಿ ಅವರ ಉತ್ತರ ಕ್ರಿಯೆ 5ನೇ ದಿನವಾದ ಸೋಮವಾರ ಬೀಜಾಡಿ ಕಡಲ ತೀರದ ಅನೂಪ್ ಅವರ ಅಂತ್ಯಸಂಸ್ಕಾರ ನಡೆಸಿದ ಸ್ಥಳದಲ್ಲಿ ಕುಟುಂಬಿಕರು ಆರಂಭಿಸಿದ್ದಾರೆ.
ಬಿಲ್ಲವ ಸಾಮುದಾಯದ ಪದ್ಧತಿಯಂತೆ ಗುರಿಕಾರ ರಾಮ ಪೂಜಾರಿ ನೇತೃತ್ವದಲ್ಲಿ ಅನೂಪ್ ಸಹೋದರ ಸಂಬಂಧಿ ತಿಲಕ್ ಮತ್ತು ಶಿವರಾಮ್ ನೇತೃತ್ವದಲ್ಲಿ ಉತ್ತರ ಕ್ರಿಯೆ ಪದ್ಧತಿಗಳನ್ನು ಆರಂಭಿಸಲಾಗಿದೆ.
11-ಮರಾಠ ಲೈಟ್ ಇನ್ಫೆಂಟ್ರಿ ರೆಜೆಮೆಂಟ್ ಯೂನಿಟ್ ಮೇಜರ್ ನಿಖಿಲ್ ಹಾಗೂ ನಾಯಬ್ ಸುಬೇದರ್ ಶಂಕರ ಗೌಡ ಪಾಟೀಲ್ ಅನೂಪ್ ಮನೆಗೆ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವನ ಹೇಳಿದರು. ನಿವೃತ್ತ ಸೈನಿಕ ರವಿ ಶೆಟ್ಟಿ ತೆಕ್ಕಟ್ಟೆ ಮೊದಲಾದವರಿದ್ದರು.
ನಮ್ಮ ಯೂನಿಟ್‌ನಲ್ಲಿ ಅನೂಪ್ ಅತಿ ಹೆಮ್ಮೆ ಪಡುವ ಸೈನಿಕ. ಅನೂಪ್ ಹೋಗುತ್ತಿದ್ದ ಸೇನಾ ವಾಹನದ ಹಿಂದೆಯೇ ನನ್ನ ವಾಹನವಿತ್ತು. ಅತಿ ಆಳವಾದ ಕಂದಕಕ್ಕೆ ಬಿದ್ದ ವಾಹನದಿಂದ ಅನೂಪ್ ಅವರನ್ನು ಮೇಲೆ ತರಲು ಬಹಳ ಹರಸಾಹಸ ಪಡಬೇಕಾಯಿತು. ಅತಿ ಶೀಘ್ರವಾಗಿ ವಿಶೇಷ ಕಾರ್ಯಾಚರಣೆ ನಡೆಸಿ ಆಸ್ಪತ್ರೆಗೆ ತಂದು ಸೇರಿಸಿದರೂ ಬದುಕಿಸಿಕೊಳ್ಳುವುದು ಕಷ್ಟವಾಯಿತು. ಅನೂಪ್ ಅಪಘಾತದಲ್ಲಿ ಮಡಿದದ್ದಲ್ಲ. ಯುದ್ಧ ಮಾಡಿ ಗೆದ್ದು ವೀರಮರಣ ಹೊಂದಿದ್ದಾರೆ ಎಂಬ ಭಾವನೆ ನಮ್ಮಲ್ಲಿರಲಿ. ಅವರು ದೇಶಕ್ಕೆ ಪ್ರಾಣಕೊಟ್ಟ ಮಗ. ಇಡೀ ಕುಟುಂಬ ಒಂದಾಗಿರಿ. ನಿಮ್ಮ ಜತೆ ಇಡೀ ಸೇನಾ ಪಡೆಯೇ ನಿಂತಿದೆ. ಸರ್ಕಾರದಿಂದ ಸಿಗುವ ಎಲ್ಲ ಪರಿಹಾರ ಹಾಗೂ ಪತ್ನಿಗೆ ಸರ್ಕಾರಿ ಕೆಲಸ ಸಿಗುವ ಎಲ್ಲ ಕಾರ್ಯಗಳನ್ನು ನಮ್ಮ ಇಲಾಖೆಯಿಂದಲೂ ಶ್ರಮ ವಹಿಸಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುತ್ತೇವೆ. -ಮೇಜರ್ ನಿಖಿಲ್, 11-ಮರಾಠ ಲೈಟ್ ಇನ್ಫೆಂಟ್ರಿ ರೆಜೆಮೆಂಟ್ ಯೂನಿಟ್ https://www.vijayavani.net/sri-vikhyathananda-swamijis-condolences https://www.vijayavani.net/sanskrithothsava-in-udupi-rajangana