More

    ಸರ್ಕಾರಿ ನೌಕರರಿಗೆ ಕಡ್ಡಾಯ ಬಡ್ತಿ; ಜ್ಯೇಷ್ಠತೆ ಹೊಂದಿದ ಎಲ್ಲ ವರ್ಗದವರಿಗೂ 6 ತಿಂಗಳಿಗೊಮ್ಮೆ ಮುಂಬಡ್ತಿ..

    | ಕೀರ್ತಿನಾರಾಯಣ ಸಿ. ಬೆಂಗಳೂರು

    ಸ್ವಂತ ಅರ್ಹತೆ ಮೇಲೆ ನೇಮಕವಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಮೀಸಲಾತಿ ಕೋಟಾದಡಿ ಪರಿಗಣಿಸದೆ ಸಾಮಾನ್ಯ ವರ್ಗದಲ್ಲೇ ಮುಂಬಡ್ತಿ ಕೊಡಲು ಆದೇಶಿಸುವ ಮೂಲಕ ಸಿಹಿಸುದ್ದಿ ಕೊಟ್ಟಿದ್ದ ರಾಜ್ಯ ಸರ್ಕಾರ, ಈಗ ಎಲ್ಲ ವರ್ಗದ ಸರ್ಕಾರಿ ನೌಕರರಿಗೂ 6 ತಿಂಗಳಿಗೊಮ್ಮೆ ಕಡ್ಡಾಯವಾಗಿ ಮುಂಬಡ್ತಿ ಕೊಡುವ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ. ಇದರಿಂದಾಗಿ ಬಡ್ತಿಗಾಗಿ ಕಾಯುವ ಸಂಕಷ್ಟ ತಪ್ಪಲಿದೆ. ಜತೆಗೆ, ಎಲ್ಲ ಇಲಾಖೆಗಳಿಗೂ ಒಂದೇ ರೀತಿಯ ಸಾಮಾನ್ಯ ವೃಂದ ಮತ್ತು ನೇಮಕಾತಿ ನಿಯಮ ಅನುಷ್ಠಾನಕ್ಕೂ ಸರ್ಕಾರ ಒಲವು ತೋರಿದೆ.

    ಕರ್ನಾಟಕ ನಾಗರಿಕ ಸೇವೆಗಳ ನಿಯಮಾವಳಿಗಳ (ಕೆಸಿಎಸ್​ಆರ್) ಪ್ರಕಾರ ಪ್ರತಿವರ್ಷ ಸರ್ಕಾರಿ ನೌಕರರ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ, ಅರ್ಹತೆಗೆ ಅನುಗುಣವಾಗಿ ಮುಂಬಡ್ತಿ ಕೊಡಲೇಬೇಕು. ಆದರೆ, ಕೆಲವೊಂದು ಇಲಾಖೆಗಳನ್ನು ಹೊರತುಪಡಿಸಿ ಬಹುತೇಕ ಪ್ರಮುಖ ಇಲಾಖೆಗಳಲ್ಲಿ ಸಮರ್ಪಕ ವಾಗಿ ಮುಂಬಡ್ತಿ ನಿಯಮ ಪಾಲನೆ ಆಗದಿರುವ ಬಗ್ಗೆ ನೌಕರರ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಸರ್ಕಾರಿ ನೌಕರರ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಅ.28ರಂದು ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯಲ್ಲಿ ಹೊಸ ವ್ಯವಸ್ಥೆ ಜಾರಿ ಬಗ್ಗೆ ಚರ್ಚೆ ನಡೆಯಿತು. ಸಭೆಯ ನಡಾವಳಿಯ ಅನುಸಾರ ಕೂಡಲೇ ಕ್ರಮ ಕೈಗೊಂಡು ಅನುಪಾಲನಾ ವರದಿ ಕಳುಹಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನ.15ರಂದು ಸಂಬಂಧಪಟ್ಟವರಿಗೆ ಸೂಚನೆ ನೀಡಿದೆ.

    12 ವರ್ಷದಿಂದ ಇಲ್ಲ ಬಡ್ತಿ: ಸಾರಿಗೆ ಇಲಾಖೆಗೆ ಒಟ್ಟಾರೆ 2650 ಹುದ್ದೆ ಮಂಜೂರಾಗಿವೆ. ಸದ್ಯ 1609 ಹುದ್ದೆ ಭರ್ತಿಯಾಗಿದ್ದು, 1041 ಹುದ್ದೆ ಹಲವು ವರ್ಷಗಳಿಂದ ಖಾಲಿ ಉಳಿದಿವೆ. 2008ರಲ್ಲಿ ಸೇವೆಗೆ ಸೇರಿದ ಬ್ರೇಕ್ ಇನ್​ಸ್ಪೆಕ್ಟರ್​ಗಳು ಹಾಗೂ ಇತರ ನೌಕರರಿಗೆ 12 ವರ್ಷಗಳಿಂದ ಮುಂಬಡ್ತಿ ಕೊಟ್ಟಿಲ್ಲ. ಹಿರಿಯ ಮೋಟಾರು ವಾಹನ ನಿರೀಕ್ಷಕ ಹುದ್ದೆಯಿಂದ ಕೆಲವರಿಗೆ ಸಹಾಯಕ ಪ್ರಾದೇಶಿಕ ಅಧಿಕಾರಿ ಹುದ್ದೆಗೆ ಬಡ್ತಿ ಕೊಡಲಾಗಿದೆ. ಉಳಿದಂತೆ ಬಹುತೇಕರಿಗೆ ಸ್ವತಂತ್ರ ಪ್ರಭಾರ ಹುದ್ದೆಯಲ್ಲೇ ಮುಂದುವರಿಸಲಾಗಿದೆ.

    ಹುದ್ದೆಗಳ ಆಧರಿಸಿ ಬಡ್ತಿ: ಬಹುತೇಕ ಇಲಾಖೆಗಳಲ್ಲಿ ಹುದ್ದೆ ಖಾಲಿ ಉಳಿದಿರುವುದರಿಂದ ಮುಂಬಡ್ತಿ ಕೊಡಲು ತೊಂದರೆಯಾಗುತ್ತಿದೆ. ಅದೇ ಕಾರಣಕ್ಕೆ ಇಲಾಖೆಗೆ ಮಂಜೂರಾಗಿರುವ ಒಟ್ಟಾರೆ ಹುದ್ದೆ ಪರಿಗಣಿಸದೆ ಪ್ರಸ್ತುತ ಭರ್ತಿಯಾಗಿರುವ ಹುದ್ದೆಗಳನ್ನಷ್ಟೇ ಆಧರಿಸಿ ಮುಂಬಡ್ತಿ ನೀಡಲು ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಇದೂ ಕೂಡ ಮುಂಬಡ್ತಿ ಪ್ರಕ್ರಿಯೆಗೆ ಅನುಕೂಲವಾಗಲಿದೆ.

    ಕೆಲ ಇಲಾಖೆಗಳಲ್ಲಿ ಮುಂಬಡ್ತಿ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಅದೇ ಕಾರಣಕ್ಕೆ ನೌಕರರ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ 6 ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಮುಂಬಡ್ತಿ ಕೊಡಬೇಕು ಎಂಬ ಮನವಿಯನ್ನು ಸರ್ಕಾರ ಸ್ವೀಕರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ರೂಪಿಸಿ, ಸುತ್ತೋಲೆ ಹೊರಡಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚಿಸಿದೆ.

    | ಸಿ.ಎಸ್.ಷಡಕ್ಷರಿ ಅಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಸಂಘ

    ಸೂಚನೆ ಏನು?

    • ಆಯಾ ಇಲಾಖೆಗಳು ಪ್ರತಿವರ್ಷ ಜನವರಿಯಲ್ಲಿ ಅಧಿಕಾರಿಗಳು ಹಾಗೂ ನೌಕರರ ಜ್ಯೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಬೇಕು
    • ಖಾಲಿ ಉಳಿದಿರುವ ಮುಂಬಡ್ತಿ ಹುದ್ದೆಗಳನ್ನು ಗುರುತಿಸಿ, ಜ್ಯೇಷ್ಠತಾ ಪಟ್ಟಿ ಅನುಸಾರ ಅರ್ಹತೆ ಇರುವವರಿಗೆ 6 ತಿಂಗಳಿಗೆ ಒಮ್ಮೆ ಕಡ್ಡಾಯವಾಗಿ ಸ್ಥಾನಪನ್ನ ಮುಂಬಡ್ತಿ ಕೊಡಬೇಕು
    • ಈ ಸಂಬಂಧ ಮಾರ್ಗಸೂಚಿ ತಯಾರಿಸಿ, ಹೊರಡಿಸಬೇಕು , ಒಂದು ವೇಳೆ ಸ್ಥಾನಪನ್ನ ಮುಂಬಡ್ತಿಗೆ ಹುದ್ದೆ ಖಾಲಿ ಇರದಿದ್ದರೆ ಕೆಸಿಎಸ್​ಆರ್ ನಿಯಮ 32ರ ಅನ್ವಯ ಬಡ್ತಿಗೆ ಅರ್ಹತೆ ಹೊಂದಿರುವ ಅಧಿಕಾರಿ ಅಥವಾ ನೌಕರನನ್ನು ಸ್ವತಂತ್ರ ಪ್ರಭಾರದಲ್ಲಿರಿಸಬೇಕು, 6 ತಿಂಗಳಿಗೂ ಹೆಚ್ಚಿನ ಅವಧಿವರೆಗೂ ಸ್ವತಂತ್ರ ಪ್ರಭಾರ ಹುದ್ದೆಯಲ್ಲೇ ಮುಂದುವರಿಸಲು ಅವಕಾಶ ಕಲ್ಪಿಸಬೇಕು

    ಎಲ್ಲರಿಗೂ ಒಂದೇ ನಿಯಮ: ವೃಂದ ಮತ್ತು ನೇಮಕಾತಿ ನಿಯಮಕ್ಕೆ ಸಂಬಂಧಿಸಿದಂತೆ ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿಯ ನಿಯಮಾವಳಿಗಳಿವೆ. ಹಲವು ವರ್ಷಗಳಿಂದ ನಿಯಮಗಳಿಗೆ ತಿದ್ದುಪಡಿ ತಂದಿಲ್ಲ. ಎಲ್ಲ ಸರ್ಕಾರಿ ನೌಕರರಿಗೂ ಅನ್ವಯಿಸುವಂತೆ ವೃಂದ ಮತ್ತು ನೇಮಕಾತಿ ನಿಯಮ ಪರಿಷ್ಕರಿಸುವ ಬಗ್ಗೆ ಜಂಟಿ ಸಮಾಲೋಚನಾ ಸಮಿತಿ ಒಲವು ತೋರಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚಿಸಿದೆ.

    ಪ್ರಮುಖ ಇಲಾಖೆಗಳಲ್ಲಿ ವಿಳಂಬ: ಪೊಲೀಸ್, ಲೋಕೋಪಯೋಗಿ, ಕೃಷಿ, ಕಂದಾಯ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕೆಪಿಟಿಸಿಎಲ್ ಸೇರಿ ಪ್ರಮುಖ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಉಳಿದಿವೆ. ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಶಿರಸ್ತೇದಾರ, ತಹಶೀಲ್ದಾರ್ ಹುದ್ದೆಗಳಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಬಡ್ತಿ ಸಿಕ್ಕಿಲ್ಲ.

    1910 ಹುದ್ದೆಗೆ ಬಡ್ತಿ ಕೊಟ್ಟಿಲ್ಲ: ಪೊಲೀಸ್ ಇಲಾಖೆಯಲ್ಲಿ 86 ಸಾವಿರ ಹುದ್ದೆ ಮಂಜೂರಾಗಿದ್ದು, ಅದರಲ್ಲಿ ಕಾನ್​ಸ್ಟೆಬಲ್ ಹುದ್ದೆ ಯಿಂದ ಸಬ್ ಇನ್​ಸ್ಪೆಕ್ಟರ್​ವರೆಗೆ 1910 ಹುದ್ದೆ ಖಾಲಿ ಉಳಿದಿವೆ. ಇದರ ಜತೆಗೆ ಇನ್​ಸ್ಪೆಕ್ಟರ್ ಹುದ್ದೆಯಿಂದ ಎಸಿಪಿ/ಡಿವೈಎಸ್ಪಿ, ಎಸ್​ಪಿ ಹುದ್ದೆಯಿಂದ ಡಿಜಿಪಿವರೆಗೂ ಸಾಕಷ್ಟು ಮುಂಬಡ್ತಿ ಹುದ್ದೆ ಖಾಲಿ ಉಳಿದಿವೆ.

    ಬಡ್ತಿ ವಿಳಂಬಕ್ಕೆ ಕಾರಣಗಳೇನು?

    • ಕೆಲ ಇಲಾಖೆಗಳಲ್ಲಿ ಶೇ.25 ಹಾಗೂ ಶೇ.50 ಹುದ್ದೆ ಭರ್ತಿಯಾಗಿಲ್ಲ
    • ಮುಂಬಡ್ತಿ ಕೊಟ್ಟರೆ ಕೆಳಹಂತದ ಹುದ್ದೆಗಳ ಕಾರ್ಯಭಾರ ಹೆಚ್ಚುತ್ತದೆಂದು ಪ್ರಕ್ರಿಯೆ ಸ್ಥಗಿತ
    • ಆಯಾ ಇಲಾಖೆಗಳ ಮುಖ್ಯಸ್ಥರಲ್ಲಿ ಇಚ್ಛಾ ಶಕ್ತಿಯ ಕೊರತೆ, ಲಂಚದ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts