

ಬೆಂಗಳೂರು: 'ವ್ಯಾಲೆಂಟೈನ್ಸ್ ಡೇ' ಸಿದ್ಧತೆಯಲ್ಲಿರುವ ಜೋಡಿಗಳಿಗೆ ಇಂದು ಕೂಡ ವಿಶೇಷ ದಿನ. ಪರಸ್ಪರ ಪ್ರೀತಿ ಮತ್ತು ವಿಶ್ವಾಸದ ಸಂಬಂಧವನ್ನು ಜೀವನದುದ್ದಕ್ಕೂ ನಡೆಸುವುದಾಗಿ ಪ್ರಮಾಣ ಮಾಡಲು ಇವತ್ತು ಸುದಿನ! ಏಕೆಂದರೆ, 'ವಾಲೆಂಟೈನ್ಸ್ ವೀಕ್'ನ ಐದನೇ ದಿನವಾದ ಫೆಬ್ರವರಿ 11ಅನ್ನು ಯುವಜನರು 'ಪ್ರಾಮಿಸ್ ಡೇ' ಆಗಿ ಆಚರಿಸುತ್ತಾರೆ.
ಆದರ್ಶ ಜೋಡಿಯಾಗುವ ಆಸೆಯಲ್ಲಿ ಕೊನೆ ಉಸಿರಿರುವವರೆಗೆ ಪ್ರೀತಿಸಿದವರೊಂದಿಗೆ ಬದುಕುವುದಾಗಿ ಮಾಡುವ ಪ್ರಮಾಣಗಳಿಗೆ ಈ ದಿನ ಫೇಮಸ್. ಸಂತೋಷದಲ್ಲಿ ಜೊತೆಗಿರುವಂತೆಯೇ ಕಷ್ಟಸಮಯದಲ್ಲಿ ಕೂಡ ಬೆಂಬಲವಾಗಿ ನಿಲ್ಲುವುದಾಗಿ ಪ್ರಾಮಿಸ್ ಮಾಡಿ ತಮ್ಮ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಲೂ ಇದುವೇ ಅವಕಾಶ. ಆದರೆ ಭಾವಪರವಶತೆಯಲ್ಲಿ ಇಡೀ ಜಗತ್ತನ್ನೇ ಮರೆತು ಪರಸ್ಪರ ಪ್ರೇಮದಲ್ಲಿ ಮುಳುಗುವುದಾಗಿ ಪ್ರಾಮಿಸ್ ಮಾಡುವ ಮುಂಚೆ ತಂದೆತಾಯಿ, ಬಂಧುಮಿತ್ರರ ಕಡೆಗೆ ನಿಮಗಿರುವ ಜವಾಬ್ದಾರಿಯ ಕಲ್ಪನೆಯೂ ಇರಲಿ.
ಪ್ರೇಮಿಗಳು ಪರಸ್ಪರ ಮಾಡಬಹುದಾದ ಪ್ರಾಮಿಸ್ಗಳ ಅರ್ಥಗರ್ಭಿತ ವಾಕ್ಯಗಳ ಮಹಾಪೂರವೇ ಸಾಮಾಜಿಕ ಜಾಲತಾಣಗಳಲ್ಲಿ ಇಂದು ಹರಿದಾಡುತ್ತಿದೆ. ಹಾಗಂತ, ಇದು ಕೇವಲ ಪ್ರೇಮಿಗಳಿಗೆ ಮೀಸಲಾದ ದಿನವಲ್ಲ. ಗಂಡ - ಹೆಂಡತಿ ಪರಸ್ಪರ ಮಾಡಬಹುದಾದ ಪ್ರಾಮಿಸ್ಗಳು, ಸ್ನೇಹಿತರು ಮಾಡುವ ಪ್ರಾಮಿಸ್ಗಳೂ ಮೂಡಿಬಂದಿವೆ.
ಅಷ್ಟೇ ಅಲ್ಲ, ಟ್ವಿಟರ್ನಲ್ಲಿ ಜನರು ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗೆ ಸದಾ ಕಾಲ ಬೆಂಬಲವಾಗಿ ನಿಲ್ಲುವುದಾಗಿ ಕೂಡ ಪ್ರಾಮಿಸ್ ಮಾಡುತ್ತಿದ್ದಾರೆ! ಚಿತ್ರರಂಗದ ನಟನಟಿಯರಿಗೆ, ಕ್ರಿಕೆಟ್ ತಾರೆಯರ ಅಭಿಮಾನಪೂರ್ವಕವಾದ ಪ್ರಾಮಿಸ್ಗಳು ಹಲವಾದರೆ, ಕೆಲವರು ದೇಶಪ್ರೇಮದ ಪ್ರಾಮಿಸ್ಗಳನ್ನೂ ಮಾಡಿದ್ದಾರೆ. ಮತ್ತೆ ಕೆಲವರು ಸ್ಟಾರ್ ದಂಪತಿಗಳ ಫೋಟೋಗಳನ್ನು ಹಾಕಿ ಪ್ರಾಮಿಸ್ ನಿಭಾಯಿಸುವುದು ಅಂದರೆ ಹೀಗೆ ಅಂತ ಕಾಮೆಂಟ್ ಪೋಸ್ಟ್ ಮಾಡಿದ್ದಾರೆ. ಸ್ವಂತ ಏಳಿಗೆಗೂ ಗಮನ ಕೊಡಿ ಅನ್ನೋ ಸಂದೇಶಗಳೂ ಇವೆ - "ಮೊದಲು ನಿಮ್ಮನ್ನು ನೀವೇ ಪ್ರೀತಿಸಿಕೊಳ್ಳುವುದಾಗಿ ಪ್ರಾಮಿಸ್ ಮಾಡಿಕೊಳ್ಳಿ. ಅದೂ ತುಂಬಾ ಮುಖ್ಯ" ಎಂದು ಹೇಳಿದೆ ಒಂದು ಟ್ವೀಟ್!
ಆದರೆ ನ್ಯೂ ಇಯರ್ ರೆಸಲ್ಯೂಷನ್ ತರಹ ಪ್ರಾಮಿಸ್ ಕೂಡ ಕಾಲ ಕಳೆದಂತೆ ರಂಗು ಕಳೆದುಕೊಂಡರೆ ಉಪಯೋಗವಿಲ್ಲ. ಇಂಗ್ಲೀಷಿನಲ್ಲಿ "ಪ್ರಾಮಿಸಸ್ ಆರ್ ಮೆಂಟ್ ಟು ಬಿ ಬ್ರೋಕನ್" ಅಂತ ಮಾತಿದೆ. ಅರ್ಥಾತ್ ಪ್ರಾಮಿಸ್ ಇರುವುದೇ ಮುರಿಯುವುದಕ್ಕೋಸ್ಕರ ಅಂತ! ಹಾಗಾಗಿ ಮುರಿಯಲು ಸುಲಭವಾದ ಪ್ರಾಮಿಸ್ಗಳನ್ನು ಮಾಡದೆ, ನಿಭಾಯಿಸಬಹುದಾದ ಒಳ್ಳೆಯ ಅರ್ಥವುಳ್ಳ ಪ್ರಾಮಿಸ್ ಮಾಡಿ. ಹ್ಯಾಪಿ ಪ್ರಾಮಿಸ್ ಡೇ!(ಏಜೆನ್ಸೀಸ್)