ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿರುವುದು ಒಂದು ಕಡೆಯಾದರೆ, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ತುಂಬಾ ಟ್ರೆಂಡಿಂಗ್ನಲ್ಲಿದ್ದಾರೆ. ಅದಕ್ಕೆ ಕಾರಣ ಅಂದು ದರ್ಶನ್ ಬಗ್ಗೆ ಉಮಾಪತಿ ಆಡಿದ ಆ ಒಂದು ಮಾತು. ಉಮಾಪತಿ ಅವರು ಹಳೆಯ ಘಟನೆಗಳನ್ನು ನೆನೆದು ದರ್ಶನ್ ಜನ್ಮವನ್ನು ಜಾಲಾಡುತ್ತಿದ್ದಾರೆ. ಇಷ್ಟು ದಿನ ತನ್ನ ಒಡಲಲ್ಲಿ ಸಹಿಸಿಕೊಂಡಿದ್ದನ್ನು ಇದೀಗ ಸ್ಫೋಟಿಸುತ್ತಿದ್ದಾರೆ.
ಸಾಲು ಸಾಲು ಮಾಧ್ಯಮ ಸಂದರ್ಶನಗಳಲ್ಲಿ ಉಮಾಪತಿ ಅವರು ದರ್ಶನ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೆ, ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ದರ್ಶನ್ ಅವರ ಇಂದಿನ ಸ್ಥಿತಿಗೆ ಕರ್ಮದ ಫಲವೇ ಕಾರಣ ಎನ್ನುತ್ತಿದ್ದಾರೆ. ಹೀಗಾಗಿ ಉಮಾಪತಿ ವಿರುದ್ಧ ದರ್ಶನ್ ಅಭಿಮಾನಿಗಳು ಮುಗಿಬಿದ್ದಿದ್ದು, ಕೆಟ್ಟ ಭಾಷೆಗಳಲ್ಲಿ ನಿಂದಿಸುತ್ತಿದ್ದಾರೆ. ಉಮಾಪತಿ ವಿರುದ್ಧ ಬೈಕ್ ಜಾಥಾ ಮಾಡುತ್ತಾರೆ ಎಂಬ ಮಾಹಿತಿಯು ಕೂಡ ಇತ್ತೀಚೆಗೆ ಹರಿದಾಡಿತ್ತು.
ವಿಜಯವಾಣಿ ಸಂದರ್ಶನದ ವೇಳೆ ದರ್ಶನ್ ಅಭಿಮಾನಿಗಳಿಂದ ಏನಾದರೂ ಬೆದರಿಕೆ ಕರೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಉಮಾಪತಿ, ನನಗೆ ಬೆದರಿಕೆ ಹಾಕುವಷ್ಟು ಧಮ್ ಅವರ ಬಳಿ ಇಲ್ಲ. ಯಾರೋ ನಾಯಿ-ನರಿಗಳಿಗೆಲ್ಲ ಕೇರ್ ಮಾಡುವ ಅವಶ್ಯಕತೆ ಇಲ್ಲ. ನಾನು ದುಡ್ಡಾಕಿದ್ದೀನಿ ಮತ್ತು ಸಿನಿಮಾ ಮಾಡಿದ್ದೀನಿ. ನಾನು ಇವರಿಗೆ ಪುಕ್ಸಟ್ಟೆ ಸಿನಿಮಾ ತೋರಿಸಿಲ್ಲ. ಟಿಕೆಟ್ಗೆ ದುಡ್ಡು ತೆಗೆದುಕೊಂಡ ಬಳಿಕವೇ ಸಿನಿಮಾ ತೋರಿಸಿದ್ದೀನಿ. ಯಾರಿಗೂ ಯಾರನ್ನು ಹೆದರಿಸುವಂತಹ ಶಕ್ತಿ ಇಲ್ಲ. ಹೆದರಿಸಿದವರು ಇಂದು ಎಲ್ಲಿದ್ದಾರೆ ಎನ್ನುವ ಮೂಲಕ ದರ್ಶನ್ ಅಭಿಮಾನಿಗಳಿಗೆ ಉಮಾಪತಿ ಶ್ರೀನಿವಾಸ್ ಟಾಂಗ್ ನೀಡಿದರು.
ಯಾರನ್ನೂ ಬೆದರಿಸುವ ಕೆಲಸವನ್ನು ಮಾಡಬಾರದು. ಒಂದು ವೇಳೆ ಬೆದರಿಕೆ ಹಾಕಿದರು ಯಾವ ರೀತಿ ಬುದ್ಧಿ ಕಲಿಸಬೇಕೆಂಬುದು ನನಗೆ ಗೊತ್ತಿದೆ. ನಾನು ಎಂತೆಂಥವರಿಗೆ ಬುದ್ಧಿ ಕಲಿಸಿದ್ದೇನೆ, ಇವರಿಗೆಲ್ಲ ಕೇರ್ ಮಾಡ್ತೀನಾ ನಾನು. ನಾಯಿನೇ ಪಕ್ಕಕ್ಕೆ ಹೊಡೆದಾಯ್ತು ಇನ್ನು ಬಾಲಗಳನ್ನು ಕಟ್ ಮಾಡಿ ಪಕ್ಕಕ್ಕೆ ತಳ್ಳೋದು ಎಷ್ಟೊತ್ತು. ನನ್ನ ವಿರುದ್ಧ ಸೈಕಲ್ ಜಾಥ ಮಾಡೋದಾದ್ರೆ ಮಾಡಲಿ ನಾನೇ ಸೈಕಲ್ ತೆಗೆದುಕೊಡುತ್ತೇನೆ ಎಂದು ತಿರುಗೇಟು ನೀಡಿದರು.
ಏನಿದು ತಗಡು ವಿವಾದ?
ಕಾಟೇರ ಸಿನಿಮಾ ಬಿಡುಗಡೆಯಾಗಿ ಸಕ್ಸಸ್ ಆದ ಬಳಿಕ ದರ್ಶನ್ ಮತ್ತು ಉಮಾಪತಿ ನಡುವೆ ವಿವಾದವೊಂದು ಹುಟ್ಟಿಕೊಂಡಿತ್ತು. ಕಾಟೇರ್ ಕತೆಯನ್ನು ನಾನೇ ಬರಿಸಿದ್ದೇ ಮತ್ತು ಟೈಟಲ್ ಕೂಡ ನಾನೇ ರಿಜಿಸ್ಟರ್ ಮಾಡಿಸಿದ್ದೇ ಎಂದು ಉಮಾಪತಿ ಹೇಳಿದ್ದರು. ಕಾಟೇರ ಸಿನಿಮಾದ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ್ದ ದರ್ಶನ್, ಉಮಾಪತಿ ಮೇಲೆ ಗರಂ ಆಗಿ ಅಯ್ಯೋ ತಗಡೇ ನಿನಗೆ ರಾಬರ್ಟ್ ಕತೆ ಕೊಡಿಸಿದ್ದೇ ನಾನು, ಯಾಕೆ ನಮ್ಮತ್ರ ಬಂದು ಗುಮ್ಮುಸ್ಕೋತೀಯಾ ಎಂದು ಟಾಂಗ್ ನೀಡಿದ್ದರು.
ಬಳಿಕ ದರ್ಶನ್ ಅವರ ತಗಡು ಹೇಳಿಕೆಗೆ ಪ್ರತಿಕ್ರಿಯಿಸಿದ ಉಮಾಪತಿ ಗೌಡ, ಜೀವನದಲ್ಲಿ ಎಲ್ಲರು ನಮ್ಮ ಕೊಂಡಾಡಬೇಕು ಹಾಗೂ ಮರ್ಯಾದೆ ಕೊಡಬೇಕು ಅಂದ್ರೆ ಅಂತಹ ಗೌರವವನ್ನು ನಾವು ಸಂಪಾಸಿದಬೇಕು. ನಾನಿವತ್ತು ತಗಡೇ ಇರಬಹುದು, ಆದರೆ, ಮುಂದೊಂದು ದಿನ ಚಿನ್ನದ ತಗಡು ಆಗಬಹುದು. ಜೀವನ ಇದೇ ರೀತಿ ಇರುವುದಿಲ್ಲ, ಮೇಲಿದ್ದವರು ಕೆಳಗೆ ಬೀಳಲೇ ಬೇಕು ಮತ್ತು ಕೆಳಗಿದ್ದವರು ಮೇಲೆ ಏಳಲೇಬೇಕು. ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದು ತಾಳ್ಮೆಯ ಉತ್ತರನ್ನು ನೀಡಿದ್ದರು.
ಉಮಾಪತಿ ಅವರು ಹೇಳಿದಂತೆ ಇಂದು ದರ್ಶನ್ ಹೀನಾಯ ಸ್ಥಿತಿಗೆ ತಲುಪಿದ್ದಾರೆ. ಕೊಲೆ ಪ್ರಕರಣದಲ್ಲಿ ಪೊಲೀಸರ ವಶವಾಗಿದ್ದು, ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ದರ್ಶನ್ ವಿರುದ್ಧ ರಾಜ್ಯಾದ್ಯಂತ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಇದೀಗ ಮಾಧ್ಯಮ ಸಂದರ್ಶನಗಳನ್ನು ನೀಡುತ್ತಿರುವ ಉಮಾಪತಿ, ದರ್ಶನ್ ಮಾಡಿದ ಒಂದೊಂದೆ ಕರ್ಮಕಾಂಡಗಳನ್ನು ಬಿಚ್ಚಿಡುತ್ತಿದ್ದಾರೆ.
ಏನಿದು ಪ್ರಕರಣ?
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.
ಆ ಖ್ಯಾತ ನಟಿಗೆ ಮಾಡಬಾರದ್ದನ್ನು ಮಾಡಿ ದುರ್ಯೋಧನನಂತೆ ನಗುತ್ತಿದ್ದ! ದರ್ಶನ್ ವಿರುದ್ಧ ಮತ್ತೊಂದು ಆರೋಪ
ಕರೆಯದೆ ಬರುವವನು ಕೋಪ! ನಟ ದರ್ಶನ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ