ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಹಾಗೂ ಸಹಚರರು ಅರೆಸ್ಟ್ ಆಗಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಡಿ-ಗ್ಯಾಂಗ್ನ ಕೃತ್ಯ ತಿಳಿದು ಎಲ್ಲರು ಶಾಕ್ ಆಗಿದ್ದಾರೆ. ಸ್ಟಾರ್ ನಟನೊಬ್ಬ ಇಂತಹ ಹೇಯ ಕೃತ್ಯ ಎಸಗಿದ್ದಾನೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದ್ಯ ಈ ಪ್ರಕರಣ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಾಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡವಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಸದ್ಯ ದರ್ಶನ್ ಮತ್ತು ಪವಿತ್ರಾ ಪೊಲೀಸ್ ಕಸ್ಟಡಿಯಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಸಾಕಷ್ಟು ಸಂಗತಿಗಳು ಸಹ ಹೊರಬರುತ್ತಿವೆ. ಅಭಿಮಾನಿಗಳು ಸಹ ಆತಂಕದಲ್ಲಿದ್ದಾರೆ. ಇದರ ನಡುವೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹಳೆಯ ಘಟನೆಗಳನ್ನು ನೆನೆದು ದರ್ಶನ್ ಜನ್ಮವನ್ನು ಜಾಲಾಡುತ್ತಿದ್ದಾರೆ. ಇಷ್ಟು ದಿನ ತನ್ನ ಒಡಲಲ್ಲಿ ಸಹಿಸಿಕೊಂಡಿದ್ದನ್ನು ಇದೀಗ ಸ್ಫೋಟಿಸುತ್ತಿದ್ದಾರೆ. ಅವರು ಮಾತುಗಳನ್ನು ಕೇಳಿದರೆ ದರ್ಶನ್ ಇಂತಹ ವ್ಯಕ್ತಿಯ ಅಂತಾ ಅನಿಸದೇ ಇರದು.
ಕಾಟೇರ ಸಿನಿಮಾ ಬಿಡುಗಡೆಯಾಗಿ ಸಕ್ಸಸ್ ಆದ ಬಳಿಕ ದರ್ಶನ್ ಮತ್ತು ಉಮಾಪತಿ ನಡುವೆ ವಿವಾದವೊಂದು ಹುಟ್ಟಿಕೊಂಡಿತ್ತು. ಕಾಟೇರ್ ಕತೆಯನ್ನು ನಾನೇ ಬರಿಸಿದ್ದೇ ಮತ್ತು ಟೈಟಲ್ ಕೂಡ ನಾನೇ ರಿಜಿಸ್ಟರ್ ಮಾಡಿಸಿದ್ದೇ ಎಂದು ಉಮಾಪತಿ ಹೇಳಿದ್ದರು. ಕಾಟೇರ ಸಿನಿಮಾದ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ್ದ ದರ್ಶನ್, ಉಮಾಪತಿ ಮೇಲೆ ಗರಂ ಆಗಿ ಅಯ್ಯೋ ತಗಡೇ ನಿನಗೆ ರಾಬರ್ಟ್ ಕತೆ ಕೊಡಿಸಿದ್ದೇ ನಾನು, ಯಾಕೆ ನಮ್ಮತ್ರ ಬಂದು ಗುಮ್ಮುಸ್ಕೋತೀಯಾ ಎಂದು ಟಾಂಗ್ ನೀಡಿದ್ದರು.
ಬಳಿಕ ದರ್ಶನ್ ಅವರ ತಗಡು ಹೇಳಿಕೆಗೆ ಪ್ರತಿಕ್ರಿಯಿಸಿದ ಉಮಾಪತಿ ಗೌಡ, ಜೀವನದಲ್ಲಿ ಎಲ್ಲರು ನಮ್ಮ ಕೊಂಡಾಡಬೇಕು ಹಾಗೂ ಮರ್ಯಾದೆ ಕೊಡಬೇಕು ಅಂದ್ರೆ ಅಂತಹ ಗೌರವವನ್ನು ನಾವು ಸಂಪಾಸಿದಬೇಕು. ನಾನಿವತ್ತು ತಗಡೇ ಇರಬಹುದು, ಆದರೆ, ಮುಂದೊಂದು ದಿನ ಚಿನ್ನದ ತಗಡು ಆಗಬಹುದು. ಜೀವನ ಇದೇ ರೀತಿ ಇರುವುದಿಲ್ಲ, ಮೇಲಿದ್ದವರು ಕೆಳಗೆ ಬೀಳಲೇ ಬೇಕು ಮತ್ತು ಕೆಳಗಿದ್ದವರು ಮೇಲೆ ಏಳಲೇಬೇಕು. ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದು ತಾಳ್ಮೆಯ ಉತ್ತರನ್ನು ನೀಡಿದ್ದರು.
ಉಮಾಪತಿ ಅವರು ಹೇಳಿದಂತೆ ಇಂದು ದರ್ಶನ್ ಹೀನಾಯ ಸ್ಥಿತಿಗೆ ತಲುಪಿದ್ದಾರೆ. ಕೊಲೆ ಪ್ರಕರಣದಲ್ಲಿ ಪೊಲೀಸರ ವಶವಾಗಿದ್ದು, ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ದರ್ಶನ್ ವಿರುದ್ಧ ರಾಜ್ಯಾದ್ಯಂತ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಇದೀಗ ಮಾಧ್ಯಮ ಸಂದರ್ಶನಗಳನ್ನು ನೀಡುತ್ತಿರುವ ಉಮಾಪತಿ, ದರ್ಶನ್ ಮಾಡಿದ ಒಂದೊಂದೆ ಕರ್ಮಕಾಂಡಗಳನ್ನು ಬಿಚ್ಚಿಡುತ್ತಿದ್ದಾರೆ. ಇದರ ನಡುವೆ ದರ್ಶನ್ ಮತ್ತು ಉಮಾಪತಿ ಬಗ್ಗೆ ಕೋಡಿಮಠದ ಶ್ರೀಗಳು ನುಡಿದಿರುವ ಭವಿಷ್ಯ ಭಾರಿ ಚರ್ಚೆಯಾಗುತ್ತಿದೆ.
ಕಾರ್ಯಕ್ರಮ ನಿಮಿತ್ತ ಚಿಕ್ಕಬಳ್ಳಾಪುರಕ್ಕೆ ತೆರಳುವ ಮುನ್ನ ದೇಶದ ಸರ್ಕಾರದ ಬಗ್ಗೆ ಮಾಧ್ಯಮಗಳ ಜತೆ ಮಾತನಾಡುವಾಗ ದರ್ಶನ್ ಪ್ರಕರಣದ ಬಗ್ಗೆಯೂ ಕೋಡಿಶ್ರೀ ಮಾತನಾಡಿದರು. ಇದೀಗ ದೇಶದಲ್ಲಿ ಕ್ರೋಧಿ ನಾಮ ಸಂವತ್ಸರ ನಡೆಯುತ್ತಿದೆ. ಕ್ರೋಧಿ ಅಂದರೆ ಕ್ರೋಧ. ಹೀಗಾಗಿ ಜಾಸ್ತಿ ಕೆಟ್ಟದ್ದೇ ಹೆಚ್ಚಾಗಿ ನಡೆಯುತ್ತಿವೆ. ದೇಶದಲ್ಲೂ ಪ್ರಾಕೃತಿಕ ವಿಕೋಪಗಳು ಸಂಭವಿಸಲಿವೆ ಎಂದರು. ಇದೇ ಸಂದರ್ಭದಲ್ಲಿ ದರ್ಶನ್ ಮತ್ತು ಉಮಾಪತಿ ಬಗ್ಗೆ ಮಾತನಾಡಿ, ದರ್ಶನ್ಗೆ ಕೋಪ ಮತ್ತು ಉಮಾಪತಿಗೆ ತಾಳ್ಮೆ ತುಂಬಾ ಇದೆ ಎಂದರು.
ಈ ಹಿಂದೆ ಕೋಡಿಮಠ ಶ್ರೀಗಳನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಕೋಪ ಕಡಿಮೆ ಮಾಡಿಕೊಳ್ಳುವಂತೆ ಮತ್ತು ತಂದೆ-ತಾಯಿ ಹೇಳಿದ ಮಾತನ್ನು ಕೇಳುವಂತೆ ಶ್ರೀಗಳು ನೀಡಿದ್ದ ಸಲಹೆಯನ್ನು ಉಮಾಪತಿ ಶ್ರೀನಿವಾಸ್ ನೆನೆದರು. ಇದನ್ನು ಉಲ್ಲೇಖಿಸಿದ ಶ್ರೀಗಳು ನಾನು ಹೇಳಿದಂತೆ ಉಮಾಪತಿ ನಡೆದುಕೊಂಡಿದ್ದಾನೆ. ಹೀಗಾಗಿಯೇ ಅವರಿಂದು ಉತ್ತಮ ಸ್ಥಾನದಲ್ಲಿದ್ದಾರೆ ಎಂದು ಹೇಳಿದ ಶ್ರೀಗಳು, ಕರೆಯದೆ ಬರುವವನು ಕೋಪ, ಬರೆಯದೆ ಓದುವವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು ಎನ್ನುವ ಮೂಲಕ ದರ್ಶನ್ ಹಾಗೂ ಉಮಾಪತಿ ನಡುವಿನ ಜಗಳದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದರು. ದರ್ಶನ್ ವಿಚಾರದಲ್ಲಿ ಮುಂದೆ ಏನಾಗುತ್ತದೋ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಇದೆ.
ಏನಿದು ಪ್ರಕರಣ?
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.
ರಜಿನಿ ಜತೆಯಿರುವ ಈ ಬಾಲಕಿ ಯಾರು ಗೊತ್ತಾ? ತಲೈವಾಗೆ ನಾಯಕಿಯಾಗಿದ್ದರು, ಕನ್ನಡದಲ್ಲೂ ನಟಿಸಿದ್ದಾರೆ!