

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ನಾಯಕ ಹಾಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೋಲಿನಿಂದ ಕೋಪಗೊಂಡಿರುವ ಬೆಂಬಲಿಗರು ಯುಎಸ್ ಕ್ಯಾಪಿಟಲ್ (ಕ್ಯಾಪಿಟಲ್ ಕಟ್ಟಡವು ಯುಎಸ್ ಕಾಂಗ್ರೆಸ್ ಹೊಂದಿದ್ದು, ಯುಎಸ್ ಸರ್ಕಾರದ ಶಾಸಕಾಂಗ ಶಾಖೆಯ ಸ್ಥಾನವಾಗಿದೆ) ಕಟ್ಟಡಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪೊಲೀಸರು ಮತ್ತು ಬೆಂಬಲಿಗರ ನಡುವೆ ಉಂಟಾದ ಗಲಾಟೆಯಲ್ಲಿ ಓರ್ವ ವ್ಯಕ್ತಿ ಗುಂಡೇಟಿಗೆ ಬಲಿಯಾಗಿದ್ದಾರೆ.
ಭಾರತೀಯ ಕಾಲಮಾನ 4.15ರ ಸುಮಾರಿಗೆ ಟ್ರಂಪ್ ಬೆಂಬಲಿಗರ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯ ಭಾಗವಾಗಿದ್ದ ಮಹಿಳೆಯೊಬ್ಬಳು ಕ್ಯಾಪಿಟಲ್ ಕಟ್ಟಡದ ಒಳಗಡೆ ಗುಂಡಿನ ಚಕಮಕಿಯ ನಂತರ ರಕ್ತಸ್ರಾವ ಬಿದ್ದಿರುವ ವಿಡಿಯೋವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ಭುಜಕ್ಕೆ ಗುಂಡೇಟು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
ಡೊನಾಲ್ಡ್ ಟ್ರಂಪ್ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡವನ್ನು ಮುತ್ತಿಗೆ ಹಾಕಿದರೆ, ಇನ್ನೊಂದೆಡೆ ಡೆಮೋಕ್ರೆಟಿಕ್ ಪಕ್ಷದ ಜೋ ಬೈಡೆನ್ ಗೆಲುವನ್ನು ರದ್ದುಗೊಳಿಸುವ ಅಧ್ಯಕ್ಷರ ಬೇಡಿಕೆಯನ್ನು ತಮ್ಮದೇ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಮೈಕ್ ಪೆನ್ಸ್ ನಿರಾಕರಿಸಿದರು ಮತ್ತು ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು ಒತ್ತಾಯಿಸಿರುವ ಟ್ರಂಪ್ ಬೆಂಬಲಿಗರ ನಡೆಯನ್ನು ಖಂಡಿಸಿದರು.
ಪ್ರತಿಭಟನಾಕಾರರು ಕ್ಯಾಪಿಟಲ್ ಕಟ್ಟಡ ಸುತ್ತ ಇದ್ದ ಬ್ಯಾರಿಕೇಡ್ಗಳನ್ನು ಉರುಳಿಸಿದರು. ಬಳಿಕ ಕ್ಯಾಪಿಟಲ್ ಮೈದಾನದಲ್ಲಿ ಪೊಲೀಸರೊಂದಿಗೆ ಘರ್ಷಣೆಗಿಳಿದರು. ನವೆಂಬರ್ 3ರ ಚುನಾವಣೆಯಲ್ಲಿ ಟ್ರಂಪ್ ವಿರುದ್ಧದ ಬೈಡೆನ್ ವಿಜಯವನ್ನು ಔಪಚಾರಿಕವಾಗಿ ಪ್ರಮಾಣೀಕರಿಸಲು ಶಾಸಕರು ಕ್ಯಾಪಿಟಲ್ ಕಟ್ಟಡ ಒಳಗೆ ಹೋಗುವಾಗ ಟ್ರಂಪ್ ಬೆಂಬಲಿಗರ ಆಕ್ರೋಶ ಭುಗಿಲೆದ್ದವು. ಈ ವೇಳೆ ಪೊಲೀಸರು ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಹೆಣಗಾಡಿದರು.
ರಿಪಬ್ಲಿಕನ್ ಶಾಸಕರ ತಂಡವು ಟ್ರಂಪ್ ಪರ ತಂದಿದ್ದ ಬೈಡೆನ್ ಅವರ ವಿಜಯದ ಬಗ್ಗೆ ಆಕ್ಷೇಪಣೆಗಳನ್ನು ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ವ್ಯಕ್ತಪಡಿಸಲಾಯಿತು. ಟ್ರಂಪ್‌ರ ಅಧ್ಯಕ್ಷತೆಯ ನಾಲ್ಕು ವರ್ಷಗಳ ಅವಧಿಯಲ್ಲಿ ನಿಷ್ಠಾವಂತ ಉಪಾಧ್ಯಕ್ಷರಾಗಿದ್ದ ಪೆನ್ಸ್, ನವೆಂಬರ್ 3ರ ಚುನಾವಣಾ ಗೆಲುವನ್ನು ಔಪಚಾರಿಕವಾಗಿ ಪ್ರಮಾಣೀಕರಿಸಲು ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಪ್ರಾರಂಭಿಸಿದರು. ಈ ವೇಳೆ ರಿಪಬ್ಲಿಕನ್ ಶಾಸಕರ ತಂಡವು ಫಲಿತಾಂಶಗಳ ಮೇಲೆ ಅನುಮಾನ ವ್ಯಕ್ತಪಡಿಸಿ ಅನೇಕ ಪ್ರಶ್ನೆಗಳನ್ನು ಕೇಳಿದರು.
ಈ ವೇಳೆ ಮಧ್ಯ ಪ್ರವೇಶಸಿದ ಸೆನೆಟ್ ಬಹುಸಂಖ್ಯಾತ ನಾಯಕ ಮಿಚ್ ಮೆಕ್‌ಕಾನ್ನೆಲ್, "ಈ ಚುನಾವಣೆಯನ್ನು ಸೋತವರ ಇಲ್ಲಸಲ್ಲದ ಆರೋಪಗಳಿಂದ ರದ್ದುಗೊಳಿಸಿದರೆ, ನಮ್ಮ ಪ್ರಜಾಪ್ರಭುತ್ವವು ಸಾವಿನ ಸುರುಳಿಯನ್ನು ಪ್ರವೇಶಿಸುತ್ತದೆ" ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿ ಬೇಸರ
ಗಲಭೆ ಸುದ್ದಿ ತಿಳಿಯುತ್ತಿದ್ದಂತೆ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ ಮತ್ತು ಹಿಂಸಾಚಾರದ ಸುದ್ದಿ ನೋಡಿ ಬೇಸರವಾಯಿತು. ಅಧಿಕಾರದ ಕ್ರಮಬದ್ಧ ಮತ್ತು ಶಾಂತಿಯುತ ವರ್ಗಾವಣೆ ಮುಂದುವರಿಯಬೇಕು. ಕಾನೂನುಬಾಹಿರ ಪ್ರತಿಭಟನೆಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮಟ್ಟಹಾಕಲು ಸಾಧ್ಯವಿಲ್ಲ ಎಂದಿದ್ದಾರೆ. (ಏಜೆನ್ಸೀಸ್)