ಮನೆಯಲ್ಲಿ ಹೆಂಡತಿಯೇ ಡಿಟೆಕ್ಟಿವ್! ‘ಡಿಟೆಕ್ಟಿವ್ ತೀಕ್ಷ್ಣ’ ಟ್ರೇಲರ್ ಬಿಡುಗಡೆಯಲ್ಲಿ ಉಪೇಂದ್ರ ಮಾತು

Detective Teekshana_(230)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಪ್ರಿಯಾಂಕ ಉಪೇಂದ್ರ ಅಭಿನಯದ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’. ಇತ್ತೀಚೆಗಷ್ಟೆ ನಟ, ನಿರ್ದೇಶಕ ಉಪೇಂದ್ರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ, ‘ಡಿಟೆಕ್ಟಿವ್ ಪಾತ್ರವು ಎಲ್ಲ ಹೆಂಗಸರಲ್ಲೂ ಇರುತ್ತದೆ. ಅದರಲ್ಲೂ ನನ್ನ ಮನೆಯಲ್ಲಿ ಹೆಚ್ಚಿದೆ. ಪ್ರತಿಯೊಬ್ಬ ಪತಿಗೂ ಡಿಟೆಕ್ಟಿವ್ ಹೆಂಡತಿ ಇರುತ್ತಾರೆ. ಪ್ರತಿ ಹಂತದಲ್ಲಿ ಸರಿಯಾದ ಡಿಟೆಕ್ವಿವ್ ರೋಲ್ ಸೂಪರ್ ಆಗಿ ಬಂದಿದೆ. ಟ್ರೇಲರ್ ನೋಡುತ್ತಿರುವಾಗ ಎದೆಗೆ ಹೊಡೆಯುವಂತ ಮ್ಯೂಸಿಕ್, ಅದರ ಮಧ್ಯೆ ಹೂವೇ ಹೂವೇ ಬರುತ್ತದೆ. ಪ್ರಿಯಾಂಕ 50ನೇ ಚಿತ್ರವಿದು. ನಾನಿನ್ನೂ 46ರಲ್ಲಿ ಇದ್ದೇನೆ. ಈ ಸಿನಿಮಾ ಹಿಟ್ ಆಗಲಿ. ಹೇಗೆಂದರೆ ಒಟ್ಟಿಗೆ 100 ಸಿನಿಮಾಗಳಿಗೆ ಒಮ್ಮೆಗೆ ಸಹಿ ಹಾಕುವಂತೆ ಆಗಲಿ. ನಿಮ್ಮೆಲ್ಲರ ಶ್ರಮಕ್ಕೆ ಖಂಡಿತ ಬೆಲೆ ಸಿಗುತ್ತದೆ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಾಯಕಿ ಪ್ರಿಯಾಂಕ ಉಪೇಂದ್ರ, ‘50 ಸಿನಿಮಾದಲ್ಲಿ ನಟಿಸಿದ್ದೀನಾ ಅಂತ ನೋಡಿದಾಗ 50 ಸೆಕೆಂಡ್ ಆದಂತೆ ಭಾಸವಾಗುತ್ತದೆ. ಇದಕ್ಕೆ ನಿರ್ದೇಶಕರು, ನಿರ್ಮಾಪಕರು ನನ್ನನ್ನು ಆಯ್ಕೆ ಮಾಡಿರುವುದು ಕಾರಣ. ಪ್ರತಿಯೊಂದು ಕೇಳಿಕೊಂಡು ಮಾಡುತ್ತಿದ್ದೆ. ಎಲ್ಲಾ ಕಲಾವಿದರು ತುಂಬಾ ಆಸಕ್ತಿ ವಹಿಸಿ ಕ್ಯಾಮರಾ ಮುಂದೆ ನಿಲ್ಲುತ್ತಿದ್ದರು. ಮಧ್ಯರಾತ್ರಿ 2 ಗಂಟೆಯಾದರೂ ನಾವೆಲ್ಲರೂ ಉಲ್ಲಾಸದಿಂದ ಇರುತ್ತಿದ್ದೆವು. ಭೌತಿಕವಾಗಿ ಶಕ್ತಿಶಾಲಿ ಅಲ್ಲದಿದ್ದರೂ, ಮಾನಸಿಕವಾಗಿ ಚುರುಕಾಗಿರುವ ರೋಲ್ನಲ್ಲಿ ನಟಿಸಿದ್ದೇನೆ’ ಎಂದು ಹೇಳಿಕೊಂಡರು.

ತ್ರಿವಿಕ್ರಮ ರಘು ಈ ಚಿತ್ರವನ್ನು ನಿರ್ದೇಶಿಸಿದ್ದು, ಇನ್ನೆರಡು ತಿಂಗಳಲ್ಲಿ ರಿಲೀಸ್ ಮಾಡುವ ಆಲೋಚನೆಯಲ್ಲಿದ್ದಾರೆ. ಪ್ರಿಯಾಂಕ ಜತೆ ವಿಜಯ್ ಸೂರ್ಯ, ಸಿದ್ಲಿಂಗು ಶ್ರೀಧರ್, ಶಶಿಧರ್ ತಾರಾಗಣದಲ್ಲಿದ್ದಾರೆ. ಚಿತ್ರ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬೆಂಗಾಲಿ, ಓರಿಯಾ ಹೀಗೆ ಏಳು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net