

ಕಳೆದ ಮೂರು ತಿಂಗಳುಗಳಿಂದ ಅಮೇರಿಕಾದಲ್ಲಿ ಗಂಡನ ಮನೆಯಲ್ಲಿ ಲಾಕ್ಡೌನ್ನಲ್ಲಿರುವ ಪ್ರಿಯಾಂಕಾ ಚೋಪ್ರಾ, ಈಗ ಅಮೇಜಾನ್ ಜತೆಗೆ ಎರಡು ವರ್ಷಗಳ ಮಲ್ಟಿಮಿಲಿಯನ್ ಡಾಲರ್ನ ಅಗ್ರೀಮೆಂಟ್ ಮಾಡಿಕೊಂಡಿದ್ದಾರೆ. ಈ ಅಗ್ರೀಮೆಂಟ್ ಪ್ರಕಾರ, ಅಮೇಜಾನ್ಗಾಗಿ ಮುಂದಿನ ಎರಡು ವರ್ಷಗಳಲ್ಲಿ ಒಂದಿಷ್ಟು ಕಾರ್ಯಕ್ರಮಗಳನ್ನು ರೂಪಿಸಿಕೊಡಲಿದ್ದಾರೆ. ಈ ವಿಷಯವನ್ನು ಸ್ವತಃ ಅಮೇಜಾನ್ ಸ್ಟುಡಿಯೋದ ಮುಖ್ಯಸ್ಥರಾದ ಜೆನ್ನಿಫರ್ ಸಾಲ್ಕ್ ಹೇಳಿಕೊಂಡಿದ್ದಾರೆ.
ಪ್ರಿಯಾಂಕಾ ಇದೀಗ ಬರೀ ಬಾಲಿವುಡ್ ನಟಿಯಾಗಷ್ಟೇ ಉಳಿದಿಲ್ಲ. ಹಾಲಿವುಡ್ನಲ್ಲಿ ಕಾಣಿಸಿಕೊಂಡ ನಂತರ ಜಾಗತಿಕವಾಗಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಜಾಗತಿಕವಾಗಿ ಹಲವು ಸ್ಟುಡಿಯೋಗಳ ಜತೆಗೆ ಕೆಲಸ ಮಾಡುತ್ತಿದ್ದು, ಈ ಪೈಕಿ ಅಮೇಜಾನ್ ಸ್ಟುಡಿಯೋ ಸಹ ಒಂದಾಗಿದೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ, ಅಮೇಜಾನ್ ಸ್ಟುಡಿಯೋ ಜತೆಗೆ ಕಾರ್ಯಕ್ರಮಗಳನ್ನು ಮಾಡಿಕೊಡುವ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. 'ಈಗಾಗಲೇ ನನ್ನದೇ ಒಂದು ಪ್ರೊಡಕ್ಷನ್ ಹೌಸ್ ಮಾಡಿಕೊಂಡು, ಅದರಡಿ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬಂದಿದ್ದೇನೆ. ಈಗ ಅಮೇಜಾನ್ ಜತೆಗೆ ಒಪ್ಪಂದವಾಗಿದೆ. ಹಿಂದಿ ಅಥವಾ ಇಂಗ್ಲೀಷ್ನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಅವರು ನನಗೆ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಇದರಿಂದ ಎರಡೂ ಭಾಷೆಗಳಲ್ಲಿ ಜನರಿಗೆ ಇಷ್ಟವಾಗುವ ಕಂಟೆಂಟ್ ಕೊಡುವುದಕ್ಕೆ ಎದುರು ನೋಡುತ್ತಿದ್ದೇನೆ' ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 50 ಸಿಮ್ಗಳನ್ನು ಬದಲಿಸಿದ್ದರೆ ಸುಶಾಂತ್ ಸಿಂಗ್
ದೊಡ್ಡ ಮಟ್ಟದಲ್ಲಿ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಹೊಸ ಪ್ರತಿಭೆಗಳನ್ನು ಪರಿಚಯಿಸಬೇಕು ಎನ್ನುವುದು ಪ್ರಿಯಾಂಕಾ ಅವರ ಕನಸಾಗಿತ್ತಂತೆ. ಅದು ಈ ಒಪ್ಪಂದದ ಮೂಲಕ ಈಡೇರಿದೆ ಎಂದು ಹೇಳಿಕೊಂಡಿರುವ ಅವರು, 'ಒಬ್ಬ ನಟಿಯಾಗಿ ಮತ್ತು ನಿರ್ಮಾಪಕಿಯಾಗಿ, ಹಲವು ಪ್ರತಿಭೆಗಳನ್ನು ಪರಿಚಯಿಸುವ ಆಸೆ ಇತ್ತು. ಜಗತ್ತಿನ ಒಂದಿಷ್ಟು ಪ್ರತಿಭಾವಂತರನ್ನೆಲ್ಲಾ ಸೇರಿಸಿ ಕಾರ್ಯಕ್ರಮ ರೂಪಿಸುವ ಯೋಚನೆ ಇತ್ತು. ನಮ್ಮ ಪರ್ಪಲ್ ಪೆಬ್ಬಲ್ ಪಿಕ್ಚರ್ಸ್ನಿಂದ ಒಂದಿಷ್ಟು ಪ್ರಯತ್ನಗಳಾಗಿವೆಯಾದರೂ, ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಮಾಡುವ ಯೋಚನೆ ಇದೆ' ಎಂದು ಪ್ರಿಯಾಂಕಾ ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ, ಅಮೇಜಾನ್ ಜತೆಗೆ ಪ್ರಿಯಾಂಕಾ ಇನ್ನೂ ಮೂರು ಯೋಜನೆಗಳಲ್ಲಿ ಜತೆಯಾಗಿದ್ದಾರೆ. 'ಸಂಗೀತ್' ಎಂಬ ಸೀರೀಸ್ನ ಜತೆಗೆ ರಿಚರ್ಡ್ ಮ್ಯಾಡನ್ ಅವರ 'ಸಿಟಾಡೆಲ್' ಎಂಬ ಶೋನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಅಮೇಜಾನ್ ಸ್ಟುಡಿಯೋಸ್ ನಿರ್ಮಿಸುತ್ತಿರುವ ಹೊಸ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.