

Prithvi Shaw: ಮುಂಬೈನ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಕೆಲವು ಸಮಯದಿಂದ ಬಹಳ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂಬ ವಿಷಯ ಕ್ರಿಕೆಟ್ ಪ್ರಿಯರಿಗೆ ಗೊತ್ತಿರುವ ಸಂಗತಿಯೇ. ಉತ್ತಮ ಫಾರ್ಮ್ ಕೊರತೆ, ವಿವಾದಗಳು ಮತ್ತು ಫಿಟ್ನೆಸ್ ಸಮಸ್ಯೆಗಳಿಂದಾಗಿ ಅವರು ಟೀಮ್ ಇಂಡಿಯಾದಲ್ಲಿ ಮಾತ್ರವಲ್ಲದೇ ಮುಂಬೈ ದೇಶೀಯ ತಂಡದಲ್ಲಿ ಹಾಗೂ ಐಪಿಎಲ್ನಲ್ಲಿಯೂ ಸ್ಥಾನ ಕಳೆದುಕೊಂಡಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯ ಹರಾಜಿನಲ್ಲಿ ಅವರು ಮಾರಾಟವಾಗಲಿಲ್ಲ. ಇದು ಹಲವರ ಅಚ್ಚರಿಗೂ ಕಾರಣವಾಯಿತು.
ಟೀಮ್ ಇಂಡಿಯಾ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿ ಭವಿಷ್ಯದ ತಾರೆ ಎಂದು ಪ್ರಶಂಸಿಸಲ್ಪಟ್ಟ ಪೃಥ್ವಿ ಶಾ, ಕಳೆದ ವರ್ಷದಿಂದ ತಮ್ಮ ವೃತ್ತಿಜೀವನದಲ್ಲಿ ಭಾರೀ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮೊದಲು ಮುಂಬೈ ರಣಜಿ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಆ ನಂತರ, ವಿಜಯ್ ಹಜಾರೆ ಟ್ರೋಫಿಯಿಂದ ಅವರನ್ನು ಕೈಬಿಡಲಾಯಿತು. ಮುಂಬೈ ಗೆದ್ದ ಪಂದ್ಯಾವಳಿಯ ಭಾಗವಾಗಿದ್ದರೂ, ಅವರು ಯಾವುದೇ ಗಮನಾರ್ಹ ಪ್ರದರ್ಶನ ನೀಡಲಿಲ್ಲ ಅನ್ನೋದು ಬೇಸರದ ಸಂಗತಿ.
ಮುಂಬೈ ಪರ ಯಾವುದೇ ಅವಕಾಶಗಳು ಸಿಗುವುದಿಲ್ಲ ಎಂದು ಭಾವಿಸಿದ ಶಾ, ಇತ್ತೀಚೆಗೆ ಮಹಾರಾಷ್ಟ್ರಕ್ಕೆ ತೆರಳಿದರು. ಇನ್ನು ಇತ್ತೀಚಿಗಿನ ಬುಚಿ ಬಾಬು ಟೂರ್ನಿಯಲ್ಲಿ ತಮ್ಮ ಚೊಚ್ಚಲ ಇನ್ನಿಂಗ್ಸ್ನಲ್ಲಿ ಶತಕದಾಟ ತೋರಿದ ಪೃಥ್ವಿ, ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಈ ಸ್ಫೋಟಕ ಶತಕದ ಮೂಲಕ ಪೃಥ್ವಿ 2.0 ಉದ್ಭವಿಸಿದ್ದಾರೆ ಎಂದು ಹಲವರು ಜಾಲತಾಣಗಳಲ್ಲಿ ಅಭಿಪ್ರಾಯಿಸಿದ್ದಾರೆ.
ಇನ್ನು ಪಂದ್ಯದ ಬಳಿಕ ವಿಡಿಯೊದಲ್ಲಿ ಮಾತನಾಡಿದ ಶಾ, ಚೆನ್ನೈನಲ್ಲಿ ನಡೆದ ಪಂದ್ಯ ಕುರಿತು ಖುಷಿ ಹಂಚಿಕೊಂಡಿದ್ದಾರೆ. ಚೆನ್ನೈ ಅಂಗಳದಲ್ಲಿ ಆಡಿದ್ದು ನನಗೆ ಬಹಳ ಸಂತಸ ತಂದಿದೆ. ಇದು ತುಂಬಾ ವಿಶೇಷ ಎಂದು ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಐಪಿಎಲ್ನ ಜನಪ್ರಿಯ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಶಾ ಶತಕವನ್ನು ಸಂಭ್ರಮಿಸಿದೆ. ಈ ಕುರಿತಂತೆ ಒಂದು ಪೋಸ್ಟ್ ಕೂಡ ಹಂಚಿಕೊಂಡಿದೆ. ಸಾಮಾನ್ಯವಾಗಿ, ಸಿಎಸ್ಕೆ ತಮ್ಮದಲ್ಲದ ಯಾವುದೇ ಆಟಗಾರನಿಗೆ ಎಂದಿಗೂ ಇಷ್ಟೊಂದು ಹೈಪ್ ಕೊಡುವುದಿಲ್ಲ. ಆದರೆ, ಇಲ್ಲಿದೆ ಹಾಗಾಗಿಲ್ಲ ಅನ್ನೋದೇ ಕೌತುಕ.
ಮೇಲ್ನೋಟಕ್ಕೆ ಇದನ್ನೆಲ್ಲ ಗಮನಿಸಿದಾಗ ಮುಂಬರುವ ಐಪಿಎಲ್ ಆವೃತ್ತಿಗೆ ಪೃಥ್ವಿ ಶಾ ಎಂಟ್ರಿಕೊಡುವುದು ಬಹುತೇಕ ಖಚಿತ ಎನ್ನುವಂತಿದೆ. ಬಂದರೆ ಅದು ಸಿಎಸ್ಕೆಯೊಂದಿಗೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಚೆನ್ನೈ ತಂಡದೊಂದಿಗೆ ಅವರು ಒಪ್ಪಂದ ಮಾಡಿಕೊಂಡರೆ ಖಂಡಿತ ಆಶ್ಚರ್ಯವೇನಿಲ್ಲ. ಇದು ಎಷ್ಟು ನಿಜ? ನಿಜಕ್ಕೂ ಪೃಥ್ವಿ ಶಾ ಸಿಎಸ್ಕೆ ಮೂಲಕ ಐಪಿಎಲ್ಗೆ ಕಮ್ಬ್ಯಾಕ್ ಮಾಡುತ್ತಾರಾ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).