

Uttarkhand Man: ವ್ಯಕ್ತಿಯೊಬ್ಬ ವಿಡಿಯೋ ಮಾಡುವ ಮೂಲಕ ತನಗೆ ತಾನೇ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಘಟನೆ ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ವರದಿಯಾಗಿದೆ. ಸಾಯುವ ಮೊದಲು ಬಿಜೆಪಿ ಯುವ ನಾಯಕನ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಈತ, ಭೂ ಮಂಜೂರಾತಿ ನೆಪದಲ್ಲಿ ನನ್ನಿಂದ 35 ಲಕ್ಷ ರೂ. ಹಣವನ್ನು ಪಡೆದು ಭೂಮಿಯನ್ನು ಹಸ್ತಾಂತರಿಸಲಿಲ್ಲ, ಹಣವನ್ನೂ ಹಿಂದಿರುಗಿಸಲಿಲ್ಲ ಎಂದಿದ್ದಾನೆ.
'ಇಂಡಿಯಾ ಟುಡೇ' ವರದಿ ಪ್ರಕಾರ, ಆತ್ಮಹತ್ಯೆಗೆ ಶರಣಾಗುವ ಮುನ್ನ ರೆಕಾರ್ಡ್ ಮಾಡಲಾದ ವಿಡಿಯೊದಲ್ಲಿ, ಮೃತ ಜಿತೇಂದ್ರ ಸಿಂಗ್, ಬಿಜೆಪಿ ನಾಯಕ ಹಿಮಾಂಶು ಚಮೋಲಿಯ ತನ್ನ ಸಾವಿಗೆ ನೇರ ಹೊಣೆ ಎಂದು ಆರೋಪಿಸಿದ್ದಾನೆ. ಈ ಇಡೀ ಘಟನೆ ನನ್ನನ್ನು ನಿರಂತರ ಮಾನಸಿಕ ಕಿರುಕುಳಕ್ಕೆ ದೂಡಿತು ಮತ್ತು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಿದೆ ಎಂದು ಅಳಲು ತೋಡಿಕೊಂಡಿದ್ದಾನೆ.
ಈ ಘಟನೆಯ ಬೆನ್ನಲ್ಲೇ ಪೊಲೀಸ್ ತಂಡ ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ಧಾವಿಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೃತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿಡಿಯೋದಲ್ಲಿ ತನ್ನ ಸಾವಿಗೆ ಬಿಜೆಪಿ ಯುವನಾಯಕರೇ ಕಾರಣ ಎಂದು ಜಿತೇಂದ್ರ ಹೆಸರಿಸಿದ ಹಿನ್ನೆಲೆ ಹಿಮಾಂಶುರನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
"ಮೃತ ವ್ಯಕ್ತಿಯ ಹೇಳಿಕೊಂಡಿರುವ ವಿಡಿಯೊವನ್ನು ಸಾಕ್ಷ್ಯವಾಗಿ ಪಡೆದುಕೊಂಡಿದ್ದೇವೆ. ದೃಶ್ಯದಲ್ಲಿ ಯಾರ ಹೆಸರುಗಳನ್ನು ಸೂಚಿಸಲಾಗಿದೆಯೋ ಅವರನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿ ಹಿಮಾಂಶು ಚಮೋಲಿಯನ್ನು ಬಂಧಿಸಲಾಗಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ. ಭೂಮಿಗೆ ಸಂಬಂಧಿಸಿದ ಇತರ ಹಣಕಾಸಿನ ವಹಿವಾಟುಗಳನ್ನು ಸಹ ತನಿಖೆ ಮಾಡಲಾಗುತ್ತಿದೆ" ಎಂದು ಎಸ್ಎಸ್ಪಿ ಪೌರಿ ಲೋಕೇಶ್ವರ ಸಿಂಗ್ ಹೇಳಿದ್ದಾರೆ.
ಬಿಜೆಪಿಯ ಮಾಧ್ಯಮ ಉಸ್ತುವಾರಿ ಮನ್ವೀರ್ ಚೌಹಾಣ್ ಪ್ರತಿಕ್ರಿಯಿಸಿ, ಪಕ್ಷವು ಹಿಮಾಂಶು ಚಮೋಲಿಯ ಅವರನ್ನು ಎಲ್ಲಾ ಹುದ್ದೆಗಳಿಂದ ಹೊರಹಾಕಿದೆ ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).