

Honey Trap: ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಈ ಡಿಜಿಟಲ್ ಯುಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಿವೆ. ಜನರು ಎಷ್ಟೇ ಜಾಗರೂಕರಾಗಿದ್ದರೂ ಇಂತಹ ಮೋಸದ ಜಾಲಗಳು ಕಣ್ಣಿನಿಂದ ಮರೆಯಾದ ಗುಂಡಿಯಂತಿವೆ. ಆನ್ಲೈನ್ ವಂಚಕರು, ಸೈಬರ್ ಪ್ರಕರಣಗಳ ಬಗ್ಗೆ ಪೊಲೀಸರು ಸಾಕಷ್ಟು ಎಚ್ಚರಿಕೆ ಕೊಟ್ಟರೂ ಸಹ ಹಲವರು ಈ ರೀತಿಯ ವಂಚನೆಗೆ ಒಳಗಾಗುತ್ತಿರುವುದು ದುರಾದೃಷ್ಟಕರ.
ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ಸಂಖ್ಯೆಗಳಿಂದ, ಅನಾಮಧೇಯ ಹೆಸರುಗಳಿಂದ ಬರುವ ವಾಟ್ಸ್ಆ್ಯಪ್ ಕರೆಗಳಿಗೆ ಉತ್ತರಿಸದಂತೆ ಪೊಲೀಸರು ಜನರಿಗೆ ಎಚ್ಚರಿಕೆ ನೀಡುತ್ತಿರುವ ಮಧ್ಯೆಯೇ ಇಲ್ಲೊಬ್ಬ ವೃದ್ಧನು ಯುವತಿಯಿಂದ ಬಂದ ಒಂದು ವಾಟ್ಸ್ಆ್ಯಪ್ ಕರೆಗೆ ಮರುಳಾಗಿ, ಬರೋಬ್ಬರಿ 7 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಇತ್ತೀಚೆಗೆ, ಹೈದರಾಬಾದ್‌ನ ಅಮೀರ್‌ಪೇಟೆಯಲ್ಲಿ ಈ ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ವಾಟ್ಸ್ಆ್ಯಪ್ ಕರೆಯ ಮೂಲಕ 81 ವರ್ಷದ ವೃದ್ಧನನ್ನು ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿಕೊಂಡ ವಂಚಕರು, ಆತನಿಂದ 7 ಲಕ್ಷ ರೂ. ಹಣವನ್ನು ಲಪಟಾಯಿಸಿದ್ದಾರೆ. ಜೂನ್ ಮೊದಲ ವಾರದಿಂದ ಮಾಯಾ ರಜಪೂತ್ ಎಂಬ ಮಹಿಳೆಯ ಹೆಸರಿನಲ್ಲಿ ವಂಚಕರು ಅಮೀರ್‌ಪೇಟೆಯ ವೃದ್ಧನಿಗೆ ಕರೆ ಮಾಡಿ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ವರದಿಯಾಗಿದೆ.
ಸಿಹಿ ಮಾತುಗಳಿಂದ ವೃದ್ಧನ ಹೃದಯಕ್ಕೆ ಹತ್ತಿರವಾದ ಕಿಡಿಗೇಡಿಗಳು, ಸ್ನೇಹ ಸಂಪರ್ಕ ಬೆಳೆಸುವ ಮೂಲಕ ತಮ್ಮ ವಂಚನೆಯ ಜಾಲಕ್ಕೆ ವೃದ್ಧನನ್ನು ಕೆಡವಿಕೊಂಡಿದ್ದಾರೆ. ವೃದ್ಧ ಬಲೆಗೆ ಬಿದ್ದಿದ್ದು ಖಚಿತವಾದ ಬೆನ್ನಲ್ಲೇ ಸರಣಿ ಬೆದರಿಕೆಗಳು, ಎಮೋಷನಲ್ ಬ್ಲ್ಯಾಕ್ಮೇಲ್ ಮಾಡಿ 7 ಲಕ್ಷ ರೂ. ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು, ತನಿಖೆಯನ್ನು ಚುರುಗೊಳಿಸಿದ್ದಾರೆ,(ಏಜೆನ್ಸೀಸ್).