

Prisoners: ಆಸ್ಪತ್ರೆಗೆ ಹೋಗಲು ಜೈಲಿನಿಂದ ಹೊರಬಂದ ಕೈದಿಗಳು ಮೋಜು ಮಾಡುತ್ತಿದ್ದಾಗ ಸಿಕ್ಕಿಬಿದ್ದ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಜೈಪುರ ಕೇಂದ್ರ ಕಾರಾಗೃಹದ ನಾಲ್ವರು ಕೈದಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಲು ಅನುಮತಿ ನೀಡಿತ್ತು. ಯಾಕೆಂದರೆ ಅವರು ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಬೇಕಿತ್ತು, ಆದರೆ ಆ ಕೈದಿಗಳು ಆಸ್ಪತ್ರೆಯ ಬದಲು ಹೋಟೆಲ್ಗೆ ಹೋಗಿ ತಮ್ಮ ತಮ್ಮ ಗೆಳತಿಯರು ಮತ್ತು ಹೆಂಡತಿಯರೊಂದಿಗೆ ತಿರುಗಾಡುತ್ತಾ, ತಿನ್ನುತ್ತಾ ಮತ್ತು ಕುಡಿಯುತ್ತಾ ಓಡಾಡುತ್ತಿರುವುದು ಕಂಡುಬಂದಿದ್ದು, ಈ ಘಟನೆಯು ಜೈಲು ಮತ್ತು ಪೊಲೀಸ್ ಆಡಳಿತಕ್ಕೆ ಕೆಟ್ಟ ಹೆಸರು ತರುವಂತಾಗಿದೆ.
ಭಾನುವಾರ (ಮೇ.25) ನಡೆದ ಪ್ರಕರಣದಲ್ಲಿ ಐವರು ಕಾನ್ಸ್ಟೆಬಲ್ಗಳು, ನಾಲ್ವರು ಕೈದಿಗಳು ಮತ್ತು ಅವರ ನಾಲ್ವರು ಸಂಬಂಧಿಕರು ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಶನಿವಾರ, ಐವರು ಕೈದಿಗಳು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಅನುಮತಿ ಕೋರಿದ್ದಾರೆ. ಆದರೆ ಅವರಲ್ಲಿ ನಾಲ್ವರು, ರಫೀಕ್ ಬಕ್ರಿ, ಭನ್ವರ್ ಲಾಲ್, ಅಂಕಿತ್ ಬನ್ಸಾಲ್ ಮತ್ತು ಕರಣ್ ಗುಪ್ತಾ, ವೈದ್ಯರ ಬಳಿಗೆ ಹೋಗುವ ಬದಲು ನಗರದಲ್ಲಿ ಇಡೀ ದಿನ ಆರಾಮವಾಗಿ ಕಳೆದಿದ್ದಾರೆ. ಒಬ್ಬ ಕೈದಿಯನ್ನು ಮಾತ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶನಿವಾರ ಸಂಜೆ 5.30 ರವರೆಗೆ ನಾಲ್ವರಲ್ಲಿ ಯಾರೂ ಜೈಲಿಗೆ ಹಿಂತಿರುಗಲಿಲ್ಲ. ಇದನ್ನು ಮಾಡಲು ಅವರು ಲಂಚ ನೀಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
"ಹೀಗೆ ಮಾಡಲು ಮಧ್ಯವರ್ತಿಯೊಬ್ಬರು ಸುಮಾರು 25,000 ರೂ.ಗಳಿಗೆ ವ್ಯವಸ್ಥೆ ಮಾಡಿದ್ದರು. ಅವರೊಂದಿಗೆ ಬಂದ ಕಾನ್ಸ್ಟೆಬಲ್ಗಳಿಗೆ ತಲಾ 5,000 ರೂ. ನೀಡುವುದಾಗಿ ಭರವಸೆ ನೀಡಲಾಗಿತ್ತು" ಎಂದು ತನಿಖೆಯಲ್ಲಿ ಭಾಗಿಯಾಗಿರುವ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಫೀಕ್ ಮತ್ತು ಭನ್ವರ್ ತಮ್ಮ ಪತ್ನಿ ಮತ್ತು ಮಾಜಿ ಗೆಳತಿಯನ್ನು ಜಲುಪುರದ ಹೋಟೆಲ್ನಲ್ಲಿ ಭೇಟಿಯಾದರು ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ನಂತರ, ರಫೀಕ್ ಅವರ ಪತ್ನಿಯ ಬಳಿ ಮಾದಕ ದ್ರವ್ಯಗಳು ಪತ್ತೆಯಾಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜೈಲಿನಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)