ಕಾಸರಗೋಡು: ಕಾಸರಗೋಡು ಚೀಮೇನಿಯ ತೆರೆದ ಜೈಲಿನಲ್ಲಿ ಕೊಲೆ ಪ್ರಕರಣವೊಂದರ ಆರೋಪಿಗಳಿಬ್ಬರು ಮೊಬೈಲ್ ವಿಚಾರಕ್ಕೆ ಹೊಡೆದಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಇವರನ್ನು ಕಣ್ಣೂರಿನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಪೆರ್ಲದ ಜಬ್ಬಾರ್ ಕೊಲೆ ಪ್ರಕರಣದ ಆರೋಪಿಗಳಾದ ಪಿ.ವಿ.ಅಬ್ದುಲ್ ಬಶೀರ್ ಹಾಗೂ ಮಹೇಶ್ ರೈ ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡವರು. ಚೀಮೇನಿ ತೆರೆದ ಕಾರಾಗೃಹದಲ್ಲಿ ಕೈದಿ ಮಹೇಶ್‌ನಲ್ಲಿದ್ದ ಮೊಬೈಲ್ ಒಂದನ್ನು ಜೈಲು ಅಧಿಕಾರಿಗಳು ಇತ್ತೀಚೆಗೆ ವಶಕ್ಕೆ ತೆಗೆದುಕೊಂಡಿದ್ದರು. ಮೊಬೈಲ್ ತನ್ನಲ್ಲಿರುವ ಮಾಹಿತಿಯನ್ನು ಅಬ್ದುಲ್ ಬಶೀರ್ ಜೈಲು ಅಧಿಕಾರಿಗಳಿಗೆ ನೀಡಿರುವುದಾಗಿ ಆರೋಪಿಸಿ ಮಹೇಶ್ ವಾಗ್ವಾದ ಆರಂಭಿಸಿ, ನಂತರ ಇಬ್ಬರೂ ಹೊಡೆದಾಡಿಕೊಂಡಿದ್ದರು. ಇದರಿಂದ ಪಿ.ವಿ.ಅಬ್ದುಲ್ ಬಶೀರ್ ಗಾಯಗೊಂಡಿದ್ದ. ಈ ಬಗ್ಗೆ ಚೀಮೇನಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಇಬ್ಬರೂ ಆರೋಪಿಗಳನ್ನು ಕಣ್ಣೂರಿನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ.