ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಶಿಲ್ಪಕಲೆಯುಕ್ತ ದೇವಸ್ಥಾನಗಳಿಂದಲೇ ಭಾರತ ಗುರುತಿಸಲ್ಪಡುತ್ತದೆ. ಆ ದೃಷ್ಟಿಯಲ್ಲಿ ಭಾರತೀಯ ಸಂಸ್ಕೃತಿ ಶಿಲ್ಪಕಲೆಗಳ, ದೇವಸ್ಥಾನದ ಸಂಸ್ಕೃತಿ ಎಂದು ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧಿಪತಿ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ 14ನೇ ಪಟ್ಟಾಭಿಷೇಕ ವರ್ಧಂತಿ ಮಹೋತ್ಸವ ಅಂಗವಾಗಿ ಪಡುಕುತ್ಯಾರಿನಲ್ಲಿ ಶನಿವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಶಿಲ್ಪಿ, ಅಯೋಧ್ಯಾ ಬಾಲರಾಮನ ಶಿಲ್ಪಿ ಅರುಣ್ ಯೋಗಿರಾಜ್ ಮೈಸೂರು ಅವರಿಗೆ ಹೊಯ್ಸಳ ಮಹಾಶಿಲ್ಪಿ ಮಲ್ಲಿಂತಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರುಣ್ ಯೋಗಿರಾಜ್, ಸಂತೋಷ, ಶ್ರದ್ಧೆಯಿಂದ ಮಾಡುವ ಕೆಲಸಕ್ಕೆ ಸಾಕಷ್ಟು ಅವಕಾಶಗಳು ಬರುತ್ತವೆ. ಯುವ ಪೀಳಿಗೆ ಸಮಯಕ್ಕೆ ಆದ್ಯತೆ ನೀಡಬೇಕು. ಕೆಲಸದಲ್ಲಿ ಸಂತೋಷ, ಶ್ರದ್ಧೆ, ಗುರುಹಿರಿಯರ ಆಶೀರ್ವಾದವಿರಲಿ. ತನಗೆ ಸಿಕ್ಕ ಅವಕಾಶ ಎಲ್ಲರಿಗೂ ಸಿಗಲಿ. ಅಮರನಾಥದ ಉದ್ಭವ ಲಿಂಗದ ಮುಂದಿನ ನಂದಿ ವಿಗ್ರಹವನ್ನು ನಮ್ಮ ಕಡೆಯಿಂದ ಮಾಡಿಸಿಕೊಳ್ಳಲಾಗಿದೆ. ಈ ಒಂದು ಕೀರ್ತಿಯೂ ವಿಶ್ವಕರ್ಮ ಜನಾಂಗಕ್ಕೆ ಸೇರುತ್ತದೆ ಎಂದರು.
ಸರಸ್ವತೀ ಪೀಠ ಪ್ರತಿಷ್ಠಾನ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ರಥಶಿಲ್ಪಿ ಕೋಟೇಶ್ವರ ಲಕ್ಷ್ಮೀ ನಾರಾಯಣ ಆಚಾರ್ಯ, ತಮಿಳುನಾಡು ಪಾರಂಪರಿಕ ದೇವಾಲಯಗಳ ಸ್ಥಪತಿ ಶಿಲ್ಪಾಚಾರ್ಯ ಯು.ಕೆ.ಉಮಾಪತಿ ಆಚಾರ್ಯ ಕುಂಭಕೋಣಂ, ಇಂಡಿಯನ್ ವಿಶ್ವಕರ್ಮ ಆಫೀಸರ್ಸ್ ಬ್ಯುಸಿನೆಸ್ ಆಂಡ್ ಪ್ರೊಫೆಶನಲ್ ಫೌಂಡೇಶನ್ ಗೌರವಾಧ್ಯಕ್ಷ ಕೆ.ಎಸ್.ಪ್ರಭಾ ಕರ್ ಬೆಂಗಳೂರು, ಅಧ್ಯಕ್ಷ ಬಿ.ಎನ್.ವಿ.ರಾಜಶೇಖರ ಹೈದರಾಬಾದ್, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ನಿಕಟಪೂರ್ವ ಆಡಳಿತ ಮೊಕ್ತೇಸರ ಅರುಣಾಕರ ಶೆಟ್ಟಿ ಕಳತ್ತೂರು, ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ದೇವರಾಜ್ ರಾವ್ ನಡಿಮನೆ, ಮಂಗಳೂರು ಎಸ್‌ಕೆಜಿಐ ಕೋ.ಆಪ್‌ಸೊಸೈಟಿ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಭಾಗವಹಿಸಿದ್ದರು.
ಪ್ರಮುಖರಾದ ದಿನೇಶ್ ಆಚಾರ್ಯ ಪಡುಬಿದ್ರಿ, ಮಧು ಆಚಾರ್ಯ ಮೂಲ್ಕಿ ಶುಭಾಶಂಸನೆದೈರು. ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಆಚಾರ್ ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ.ಆಚಾರ್ಯ ವಂದಿಸಿದರು. ಕೆ.ಎಂ.ಗಂಗಾಧರ ಆಚಾರ್ಯ ಕೊಂಡೆವೂರು ನಿರೂಪಿಸಿದರು.
ಆನೆಗುಂದಿ ಶ್ರೀ, ಯುವ ಶಿಲ್ಪಿ ಪ್ರಶಸ್ತಿ ಪ್ರದಾನ
ರಥಶಿಲ್ಪಿ ಸುದರ್ಶನ ಆಚಾರ್ಯ ಉಡುಪಿ, ಚಿತ್ರ ಕಲಾವಿದ ವೈ.ಎನ್. ತಾರನಾಥ ಆಚಾರ್ಯ ಮಂಗಳೂರು ಅವರಿಗೆ ಆನೆಗುಂದಿ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯುವ ಶಿಲ್ಪಿಗಳಾದ ಚಿದಾನಂದ ಆಚಾರ್ಯ ವಿಟ್ಲ, ಕೆ.ಎಸ್. ಸುಮಂತ್ ಆಚಾರ್ಯ ಪುತ್ತೂರು, ಜಯಚಂದ್ರ ಆಚಾರ್ಯ ನಾಳ, ಡಿ.ಕೆ.ಕವಿತಾ ಬೆಂಗಳೂರು, ವೈಭವ್ ಅಶೋಕ್ ಮಡಕೈಕರ್ ಕಾರವಾರ ಅವರನ್ನು ಯುವಶಿಲ್ಪಿ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಮೈಸೂರಿನ ಡಾ.ಶ್ರೀಕಂಠಾಚಾರ್ ವಿರಚಿತ ಮೇರು ಶಿಲ್ಪಿ ಮಲ್ಲಿಂತಮ ಪುಸ್ತಕ ಬಿಡುಗಡೆ, ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಕೆ.ಎಸ್.ಶ್ರೀನಿವಾಸ್ ಬೆಂಗಳೂರು ಅವರಿಂದ ಮೇರು ಶಿಲ್ಪಿ ಮಲ್ಲಿಂತಮ ಮತ್ತು ಸರ್ವ ಸಿದ್ದಿ ಆಚಾರಿಯವರ ಪರಿಚಯಾತ್ಮಕ ಛಾಯಾಚಿತ್ರ ಪ್ರದರ್ಶನ, ವಿಶ್ವಕರ್ಮ ಚಿತ್ರಕಲಾ ಪರಿಷತ್ ಮಂಗಳೂರು ಇವರಿಂದ ಕಲಾ ಪ್ರದರ್ಶನ, ದಿವ್ಯಚಂದ್ರ ಪ್ರಕಾಶನ ಬೆಂಗಳೂರು, ಮಯ ಪ್ರಕಾಶನ ಕಮಲಪುರ ಹಂಪಿ, ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ ಇವರಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟವೂ ನಡೆಯಿತು.