

ಕನೌಜ್: ಪ್ರಕರಣ ಒಂದರಲ್ಲಿ 11 ತಿಂಗಳ ಸೆರೆವಾಸ ಅನುಭವಿಸಿ ಬಿಡುಗಡೆಯಾದ ವ್ಯಕ್ತಿಯೋರ್ವ ಜೈಲಿನ ಮುಂಭಾಗವೇ ಡ್ಯಾನ್ಸ್ (Dance) ಮಾಡಿ ಸಂತೋಷ ವ್ಯಕ್ತಪಡಿಸಿರುವ ಘಟನೆ ಉತ್ತರಪ್ರದೇಶದ ಕನೌಜ್ನಲ್ಲಿ ನಡೆದಿದೆ. ಡ್ಯಾನ್ಸ್ನ (Dance) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ವ್ಯಕ್ತಿಯ ಪ್ರತಿಭೆಯನ್ನು ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜೈಲಿನ ಹಿರಿಯ ಅಧಿಕಾರಿಯೊಬ್ಬರು, ಹಲ್ಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಛಿಬ್ರಾಮೌ ನಿವಾಸಿಯಾದ ಶಿವ ಎಂಬ ವ್ಯಕ್ತಿಗೆ ನ್ಯಾಯಾಲಯವು ಒಂದು ವರ್ಷಗಳ ಜೈಲು ಶಿಕ್ಷೆ ಹಾಗೂ 1 ಸಾವಿರ ರೂಪಾಯಿ ದಂಡವನ್ನು ವಿಧಿಸಿತ್ತು. ಶಿವನಿಗೆ ಕುಟುಂಬವಿಲ್ಲದ ಕಾರಣ ಜಾಮೀನು ನೀಡಲು ಅಥವಾ ಆತನ ಪರ ವಾದ ಮಂಡಿಸಲು ಯಾರು ಮುಂದೆ ಬಂದಿರಲಿಲ್ಲ.
ಶಿವನ ವಿಚಾರದ ಬಗ್ಗೆ ತಿಳಿದ ಎನ್‌ಜಿಒ ಸದಸ್ಯರೊಬ್ಬರು ಆತನಿಗೆ ಉಚಿತ ಕಾನೂನು ನೆರವು ನೀಡಿತು ಮತ್ತು ಜಾಮೀನು ಮೊತ್ತವನ್ನು ನೀಡಿ ಬಿಡುಗಡೆಗೆ ಸಹಕರಿಸಿದರು. ಮೊದಲಿಗೆ ಆತ ಜೈಲಿಗೆ ಬಂದಾಗ ಓದುವುದಕ್ಕೆ, ಬರೆಯುವುದಕ್ಕೆ ಬರುತ್ತಿರಲಿಲ್ಲ. ಜೈಲಿನಲ್ಲಿನ ಸಕಾರಾತ್ಮಕ ವಾತಾವರಣದಿಂದಾಗಿ ಆತ ಓದುವುದಕ್ಕೆ ಬರೆಯುವುದಕ್ಕೆ ಕಲಿತಿದ್ದು, ಡ್ಯಾನ್ಸ್ ಕೂಡ ಮಾಡುತ್ತಾನೆ. ಆತ ಮುಂದಿನ ದಿನಗಳಲ್ಲಿ ಯಶಸ್ಸು ಕಾಣಲಿ ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ಆಶಿಸಿದ್ದಾರೆ.
ಬಿಡುಗಡೆಯಾದ ವ್ಯಕ್ತಿ ಶಿವ ಮಾತನಾಡಿ, ನಾನು ಜೈಲಿನಿಂದ ಹೊರಬರುವ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದೆ. ಎನ್‌ಜಿಒ ಸಹಾಯದಿಂದ ಜೈಲಿನ ಗೋಡೆಗಳಿಂದ ಮುಕ್ತನಾಗುವಲ್ಲಿ ಯಶಸ್ವಿಯಾದೆನು. ಇನ್ನು ಮುಂದೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ ಎಂದು ಬಿಡುಗಡೆಯಾದ ವ್ಯಕ್ತಿ ಶಿವ ಹೇಳಿದ್ದಾರೆ.