

ನವದೆಹಲಿ: 2025ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ಸಂಬಂಧಿಸಿದ ಸುದ್ದಿ ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಪ್ರಮುಖವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಕಿತ್ತಾಟದಿಂದಲೇ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಭಾರತ ಭದ್ರತೆಯ ಕಾರಣ ನೀಡಿ ಪಾಕಿಸ್ತಾನದ ನೆಲದಲ್ಲಿ ಆಡುವುದಿಲ್ಲ ಎಂದು ಹೇಳಿದ್ದು, ಪಿಸಿಬಿ (PCB) ಹೈಬ್ರಿಡ್ ಮಾದರಿಯಲ್ಲಿ (Hybrid Model) ಟೂರ್ನಿ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದೆ. ಇದೆಲ್ಲದರ ನಡುವೆ ಪಿಸಿಬಿ ಭಾರತದ ಬೇಡಿಕೆಗೆ ತಲೆ ಆಡಿಸಿದೆ ಎಂಬ ಸುದ್ದಿ ಕೇಳಿ ಬಂದಿದ್ದು, ಈ ವಿಚಾರವನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕರೊಬ್ಬರು ಖಚಿತಪಡಿಸಿದ್ದಾರೆ.
ಈಗಾಗಲೇ ಭದ್ರತೆಯ ಕಾರಣ (Security Reasons) ನೀಡಿ ಭಾರತ ಪಾಕ್ ನೆಲದಲ್ಲಿ ಆಡುವುದಿಲ್ಲ ಎಂದು ಹೇಳಿದ್ದು, ತನ್ನ ನಿಲುವಿನಲ್ಲಿ ಅಚಲವಾಗಿರುವುದಾಗಿ ಐಸಿಸಿಗೆ ತಿಳಿಸಿದೆ. ಇತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಐಸಿಸಿ (ICC) ನಿಲುವಿಗೆ ಬದ್ದರಾಗಿರುವುದಾಗಿ ಹೇಳಿಕೊಂಡಿದ್ದು, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಐಸಿಸಿ ಹೈರಾಣಾಗಿದೆ. ಟೂರ್ನಿಗೆ ಸಂಬಂಧಿಸಿದಂತೆ ಇದೀಗ ಪಿಸಿಬಿ ಭಾರತದ ಬೇಡಿಕೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಹೇಳಲಾಗಿದ್ದು, ಐಸಿಸಿ ಜೊತೆ ನಡೆದ ಸಭೆಯಲ್ಲಿ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಮಾತನಾಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಶೀದ್ (Rashid Latif), ಟೂರ್ನಿ ಸಂಬಂಧ ಐಸಿಸಿ, ಬಿಸಿಸಿಐ ಹಾಗೂ ಪಿಸಿಬಿ ನಡುವೆ ಮಾತುಕತೆಯಾಗಿದ್ದು, ನಿಗದಿಯಂತೆ ಟೂರ್ನಿ ಪಾಕಿಸ್ತಾನದಲ್ಲಿ ನಡೆಯಲಿದೆ. ಭಾರತದ ಬೇಡಿಕೆಗೆ ಪಿಸಿಬಿ (PCB) ಓಕೆ ಎಂದು ಹೇಳಿದ್ದು, ಅದರಂತೆ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ (Hybrid Model) ನಡೆಸಲಾಗುತ್ತದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು, ಟೀಮ್ ಇಂಡಿಯಾ ಫೈನಲ್ಗೆ ಬಂದರೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯ ನಡೆಯುವುದಿಲ್ಲ. ಅದು ಕೂಡ ಹೈಬ್ರಿಡ್ ಮಾದರಿಯಲ್ಲಿ (Hybrid Model) ನಡೆಯಲಿದೆ.
ಐಸಿಸಿ (ICC) ಟೂರ್ನಿಯ ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನಕ್ಕೆ 64-65 ಕೋಟಿ ಡಾಲರ್ ಶುಲ್ಕವನ್ನು ನೀಡುತ್ತಿದೆ. ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡರೆ ಪಾಕಿಸ್ತಾನಕ್ಕೆ ಹೆಚ್ಚಿನ ಶುಲ್ಕ ಸಿಗಲಿದೆ. ಈ ವಿಚಾರವಾಗಿ ಮಂಡಳಿ ಯಾವುದೇ ಕಾರಣಕ್ಕೂ ಇಲ್ಲ ಎಂದು ಹೇಳಿರುವುದಿಲ್ಲ ಎಂಬುದು ನನ್ನ ಅನಿಸಿಕೆ. ಈ ವಿಚಾರವನ್ನು ಪಿಸಿಬಿ ಹಾಗೂ ಐಸಿಸಿ ಶೀಘ್ರದಲ್ಲಿಯೇ ಘೋಷಣೆ ಮಾಡಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ (Rashid Latif) ಹೇಳಿದ್ದಾರೆ.
ಭಾರತ ತಂಡ (Team India) ಚಾಂಪಿಯನ್ಸ್ ಟ್ರೋಫಿ (Champions Trophy) ಆಡಲು ಪಾಕಿಸ್ತಾನಕ್ಕೆ ತೆರಳದಿದ್ದರೆ ಆ ದೇಶದ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗಲಿದೆ. ಈಗಾಗಲೇ ಪಾಕಿಸ್ತಾನ ನಷ್ಟದ ಹಾದಿಯಲ್ಲಿದ್ದು, ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾಗೆ (Team India) ಇರುವ ಕ್ರೇಜ್ ಬೇರೆ ಯಾವ ದೇಶಕ್ಕೂ ಇಲ್ಲ. ಹೀಗಾಗಿ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋದಲ್ಲಿ ಅದರಿಂದ ಆರ್ಥಿಕವಾಗಿಯೂ ಲಾಭವಾಗಲಿದೆ ಮತ್ತು ಪಾಕ್ ಮೇಲೆ ಇರುವ ಕಳಂಕವೂ ದೂರವಾಗಲಿದೆ ಎಂಬ ನಂಬಿಕೆಯಲ್ಲಿ ಅಲ್ಲಿನ ಕ್ರಿಕೆಟ್ ಮಂಡಳಿ ಹಾಗೂ ಸರ್ಕಾರ ಕಾದು ಕುಳಿತಿದೆ. ಅಲ್ಲದೇ, ಉಭಯ ದೇಶಗಳ ನಡುವಿನ ಸಂಬಂಧವೂ ಕೂಡ ಕ್ರಿಕೆಟ್ ಮೂಲಕ ಮತ್ತೆ ಚಿಗುರಲಿದೆ ಎಂಬ ನಿರೀಕ್ಷೆಯಲ್ಲಿದೆ. ಆದರೆ, ಪಿಸಿಬಿ (PCB) ನಿರೀಕ್ಷೆಗೆ ಬಿಸಿಸಿಐ (BCCI) ಆಘಾತ ನೀಡಿದ್ದು, ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಕಡ್ಡಿ ಮರಿದಂತೆ ಹೇಳಿದೆ.
ಇದಲ್ಲದೆ ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಸುವುದಾಗಿ ತಿಳಿಸಿದ್ದು, ಇದಕ್ಕಾಗಿ ಕ್ರೀಡಾಂಗಣದ ಪಕ್ಕದಲ್ಲಿರುವ ಐದು ಎಕರೆ ಜಮೀನನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಭಾರತದ ಆಟಗಾರರು ಹಾಗೂ ಸಿಬ್ಬಂದಿ ಉಳಿದುಕೊಳ್ಳಲು 5 ಸ್ಟಾರ್ ಹೋಟೆಲ್ ನಿರ್ಮಿಸುತ್ತಿರುವುದಾಗಿ ಪಿಸಿಬಿ ತಿಳಿಸಿದೆ. ಇದಲ್ಲದೆ ಭಾರತ ತಂಡ ಪಾಕಿಸ್ತಾನಕ್ಕೆ ಬರುವುದರಿಂದ ಉಭಯ ದೇಶಗಳ ನಡುವಿನ ಸಂಬಂಧ ಸ್ವಲ್ಪಮಟ್ಟಿಗೆ ಸರಿಹೋಗಬಹುದು ಎಂದು ಪಿಸಿಬಿ ಆಶಿಸಿದೆ. ಆದರೆ, ಪಾಕಿಸ್ತಾನ ಆಸೆಗೆ ಭಾರತ ತಣ್ಣೀರು ಎರಚಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.
https://www.vijayavani.net/fight-erupts-btw-manju-and-rajat-during-task-in-bigg-boss-house
https://www.vijayavani.net/the-wicked-who-flushed-the-newborn-in-the-toilet-an-inhuman-incident-in-the-state