

ನವದೆಹಲಿ: ಮಧ್ಯಪ್ರದೇಶದ ರೇವಾದಲ್ಲಿ ಅಳವಡಿಸಲಾಗಿರುವ 750 ಮೆಗವ್ಯಾಟ್ ಸೋಲಾರ್ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಅರ್ಪಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ರೇವಾದಲ್ಲಿನ ಸೌರಶಕ್ತಿ ಘಟಕದಿಂದ ಕೇವಲ ಇಂಡಸ್ಟ್ರಿಗಳಿಗೆ ಮಾತ್ರ ವಿದ್ಯುತ್ ದೊರೆಯುವುದಿಲ್ಲ. ಇದರಿಂದ ದೆಹಲಿಯ ಮೆಟ್ರೋ ರೈಲು ಸಹ ಲಾಭವನ್ನು ಪಡೆದುಕೊಳ್ಳಲಿದೆ. ರೇವಾ ಹೊರತಾಗಿ, ಸಹಜಾಪುರ, ನೀಮುಚ್ ಮತ್ತು ಛತರ್ಪುರದಲ್ಲಿಯೂ ಸೌರಶಕ್ತಿ ಘಟಕ ಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದರು.
ಸೋಲಾರ್ ಶಕ್ತಿ ಸದ್ಯಕ್ಕೆ ಮಾತ್ರವಲ್ಲ, ಇದು 21 ನೇ ಶತಮಾನದ ಶಕ್ತಿಯ ಅಗತ್ಯಗಳ ಮಾಧ್ಯಮವಾಗಲಿದೆ. ಏಕೆಂದರೆ ಸೌರಶಕ್ತಿ ಖಚಿತ, ಶುದ್ಧ ಮತ್ತು ಸುರಕ್ಷಿತವಾಗಿದೆ ಎಂದರು.
ನಿಜವಾಗಿಯೂ ರೇವಾ ಇಂದು ಇತಿಹಾಸವನ್ನು ಸೃಷ್ಟಿಸುತ್ತಿದೆ. ಈಗಾಗಲೇ ರೇವಾವನ್ನು ತಾಯಿ ನರ್ಮದಾ ಹೆಸರು ಮತ್ತು ಬಿಳಿ ಹುಲಿಯೊಂದಿಗೆ ಗುರುತಿಸಲಾಗಿದೆ. ಇದೀಗ ಏಷ್ಯಾದ ಅತಿದೊಡ್ಡ ಸೌರಶಕ್ತಿ ಯೋಜನೆಯ ಹೆಸರನ್ನು ಕೂಡ ಸೇರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಅನೇಕ ಕೇಂದ್ರ ಸಚಿವರು ಉಪಸ್ಥಿತರಿದ್ದರು. (ಏಜೆನ್ಸೀಸ್)