ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ದಸ್ಕತ್ : ನಿರ್ದೇಶಕ ಅನೀಶ್ ಪೂಜಾರಿ ಬಣ್ಣನೆ 13ರಂದು 15 ಟಾಕೀಸ್‌ಗಳಲ್ಲಿ ರಿಲೀಸ್

New Project (9)
Published on

ಬೆಳ್ತಂಗಡಿ: ಕನ್ನಡ ಚಿತ್ರರಂಗದಂತೆ ತುಳು ಚಿತ್ರರಂಗದಲ್ಲಿಯೂ ಹೊಸ-ಹೊಸ ಪ್ರಯೋಗಗಳು ನಡೆಯುತ್ತಿದ್ದು, ಸದ್ಯ ಬಹು ನಿರೀಕ್ಷಿತ ದಸ್ಕತ್ ತುಳು ಚಿತ್ರ ತೆರೆಕಾಣಲು ಸಜ್ಜಾಗುತ್ತಿದೆ. ಬೆಳ್ತಂಗಡಿಯ ಯುವಕರು ಸೇರಿ ಮಾಡಿದ ದಸ್ಕತ್ ಚಿತ್ರ ಡಿ.13ರಂದು ಏಕಕಾಲದಲ್ಲಿ 15 ಸಿನಿಮಾ ಟಾಕೀಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ, ದಸ್ಕತ್ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಹೇಳಿದರು.

ಶುಕ್ರವಾರ ಬೆಳ್ತಂಗಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಳುವರ ಬದುಕು, ಸಂಸ್ಕೃತಿ, ಸಂಘರ್ಷದ ಕಥಾನಕವೇ ಈ ದಸ್ಕತ್. ಬೆಳ್ತಂಗಡಿ ತಾಲೂಕಿನ ವೇಣೂರು ನಾರಾವಿ, ಅಂಡಿಂಜೆ, ಕೊಕ್ರಾಡಿ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಪ್ರಕೃತಿಯ ಸೊಗಡು, ಕಲೆ, ಸಂಸ್ಕೃತಿ ಬಿಂಬಿಸುವ ಸಮಾಜಕ್ಕೆ ಸಂದೇಶ ನೀಡುವ ಚಿತ್ರ ಇದಾಗಿದೆ. ಚಿತ್ರದಲ್ಲಿ ಹೆಚ್ಚಾಗಿ ಬೆಳ್ತಂಗಡಿ ತಾಲೂಕಿನ ಶೇ.75 ಅದ್ಬುತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಸಿನಿಮಾ, ರಂಗಭೂಮಿ ಕಲಾವಿದರು ಇದ್ದಾರೆ. ಓರ್ವ ವ್ಯಕ್ತಿಯ ಪ್ರತಿ ಭಾವನೆಯನ್ನು ತೋರಿಸುವ ಚಿತ್ರವೇ ದಸ್ಕತ್. ಮನ ಇಂಪಾಗಿಸುವ ಮೂರು ಅದ್ಭುತ ಹಾಡುಗಳಿವೆ. ಎರಡು ಗಂಟೆಯ ದಸ್ಕತ್ ಚಿತ್ರವನ್ನು ತುಳುನಾಡಿನ ಪ್ರತಿಯೊಬ್ಬರು ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿ ಸಿನಿಮಾ ಗೆಲ್ಲಿಸಿಕೊಡಬೇಕು ಎಂದರು.

ದಸ್ಕತ್ ತಂಡದ ಸ್ಮಿತೇಶ್ ಬಾರ್ಯ, ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ, ಸಮರ್ಥನ್ ಎಸ್.ರಾವ್, ಸಂತೋಷ್ ಆಚಾರ್ಯ ಗುಂಪಲಾಜೆ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರತಿಭಾವಂತ ಕಲಾವಿದರ ತಾರಾಗಣ

ದಸ್ಕತ್ ತುಳು ಚಲನಚಿತ್ರವು, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅರ್ಪಿಸುವ, ಸೆವೆಂಟಿ ಸೆವೆನ್ ಸ್ಟುಡಿಯೋಸ್ ರಾಘವೇಂದ್ರ ಕುಡ್ವ ಅವರ ನಿರ್ಮಾಣದಲ್ಲಿ ಮೂಡಿಬಂದಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜ್ಞೇಶ್ ಶೆಟ್ಟಿ ಕಾರ್ಯನಿರ್ವಹಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಅವರ ಛಾಯಾಗ್ರಹಣವಿದ್ದು ಗಣೇಶ್ ನೀರ್ಚಾಲ್ ಸಂಕಲನ ಮಾಡಿದ್ದಾರೆ. ಸಮರ್ಥನ್ ಎಸ್.ರಾವ್ ಅವರ ಸಂಗೀತವಿದೆ. ದಸ್ಕತ್ ಚಿತ್ರದಲ್ಲಿ ನಾಯಕಿಯಾಗಿ ನೀನಾದೇ ನಾ ಧಾರಾವಾಹಿ ಖ್ಯಾತಿಯ ಭವ್ಯ ಪೂಜಾರಿ ಬಣ್ಣ ಹಚ್ಚಿದ್ದಾರೆ. ದೀಕ್ಷಿತ್ ಕೆ. ಅಂಡಿಂಜೆ, ಚಂದ್ರಹಾಸ್ ಉಲ್ಲಾಳ್, ಯುವ ಶೆಟ್ಟಿ, ಮೋಹನ್ ಶೇಣಿ, ದೀಪಕ್ ರೈ ಪಾಣಾಜೆ, ನೀರಜ್ ಕುಂಜರ್ಪ, ಮಿಥುನ್ ರಾಜ್, ತಿಮ್ಮಪ್ಪ ಕುಲಾಲ್, ಯೋಗಿಶ್ ಶೆಟ್ಟಿ, ಚೇತನ್ ಪಿಲಾರ್, ಭಗವಾನ್, ಮಂಜುಳಾ, ನವೀನ್ ಬೋಂದೆಲ್ ಹೀಗೆ ಇನ್ನೂ ಅನೇಕ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಚಲನಚಿತ್ರವು ಬೋಧಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಮೂಡಿಬಂದಿದೆ. ತಂಡದಲ್ಲಿ ಸ್ಮಿತೇಶ್ ಬಾರ್ಯ, ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ, ದೀಕ್ಷಿತ್ ಧರ್ಮಸ್ಥಳ, ಮನೋಜ್ ಆನಂದ್ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net