ಕಣ್ಣಿಗೆ ಕಾಣದ ಶತ್ರುವಿನ ಕಾಟ ಹೆಚ್ಚಾಗಿದೆ- ಅಮೆರಿಕಕ್ಕೆ ಯಾರೂ ಬರಬೇಡಿ- ಅಧ್ಯಕ್ಷ ಡೊನಾಲ್ಡ್ ಟ್ರಂಪ್​

Trump 29 Feb 20
Published on

ವಾಷಿಂಗ್ಟನ್​: ಕರೊನಾ ವೈರಸ್​ COVID19 ಸೋಂಕು ಜಾಗತಿಕ ಮಟ್ಟದಲ್ಲಿ ಅಮೆರಿಕದಲ್ಲೇ ಹೆಚ್ಚಾಗಿದ್ದು ಒಟ್ಟಾರೆ ವ್ಯವಸ್ಥೆಯೇ ತಲ್ಲಣಗೊಂಡಿದೆ. ಚೀನಾದ ವುಹಾನ್​ನಲ್ಲಿ ಮೊದಲು ಪತ್ತೆಯಾದ ಕರೊನಾ ವೈರಸ್​ ಕ್ರಮೇಣ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಹಬ್ಬಿದೆ. ಇದರ ತಡೆಗೆ ಬಹುತೇಕ ರಾಷ್ಟ್ರಗಳಲ್ಲಿ ಲಾಕ್​ಡೌನ್ ಜಾರಿಗೊಳಿಸಲಾಗಿದ್ದು, ಆಯಾ ದೇಶಗಳ ಅರ್ಥವ್ಯವಸ್ಥೆ ಅಷ್ಟೇ ಅಲ್ಲ ಜಾಗತಿಕ ಅರ್ಥವ್ಯವಸ್ಥೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.

ಅಮೆರಿಕದಲ್ಲಿ ಅಂದಾಜು 8 ಲಕ್ಷ ಜನರಿಗೆ ಕೋವಿಡ್ ಸೋಂಕು ತಗುಲಿದ್ದು, 42,600ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ನಡುವೆ, ಅಮೆರಿಕದ ಅರ್ಥವ್ಯವಸ್ಥೆಗೆ ಪುನಶ್ಚೇತನ ಒದಗಿಸುವುದಕ್ಕೆ ಇತ್ತೀಚೆಗಷ್ಟೇ ಮೂರು ಹಂತದ ಯೋಜನೆಯನ್ನು ಗವರ್ನರ್​ಗಳ ಮುಂದಿಟ್ಟಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕಕ್ಕೆ ಹೊರದೇಶದಿಂದ ವಲಸೆ ಬರುವುದನ್ನು ತಪ್ಪಿಸಲು ಮುಂದಾಗಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿ ಜಗತ್ತಿನ ಗಮನಸೆಳೆದಿದ್ದಾರೆ.

ಕಣ್ಣಿಗೆ ಕಾಣದ ಶತ್ರುವಿನ ಉಪಟಳ ಹೆಚ್ಚಾಗಿದ್ದು, ನಮ್ಮ ಅಮೆರಿಕನ್ ಪೌರರ ಉದ್ಯೋಗವನ್ನು ನಾವು ರಕ್ಷಣೆ ಮಾಡಬೇಕಾದ ಅಗತ್ಯವಿದೆ. ಹೀಗಾಗಿ ವಿದೇಶೀಯರು ಅಮೆರಿಕಕ್ಕೆ ವಲಸೆ ಬರುವುದನ್ನು ತಾತ್ಕಾಲಿಕವಾಗಿ ತಡೆಯುವ ಎಕ್ಸಿಕ್ಯೂಟಿವ್ ಆರ್ಡರ್​ಗೆ ನಾನು ಸಹಿ ಹಾಕಲಿದ್ದೇನೆ ಎಂದು ಟ್ವೀಟ್​ನಲ್ಲಿ ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net