ಇರುಮುಡಿ ಹೊತ್ತು ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು! Droupadi Murmu

Droupadi Murmu
Published on

ತಿರುವನಂತಪುರ: ದೇವರ ನಾಡು ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ( Droupadi Murmu ) ಅವರು ಇಂದು (ಅ.22) ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ರಾಷ್ಟ್ರಪತಿ ಮತ್ತು ಅವರ ಭದ್ರತಾ ಸಿಬ್ಬಂದಿ ಇಂದು ಬೆಳಗ್ಗೆ 11.30ರ ಸುಮಾರಿಗೆ ದೇವಸ್ಥಾನವನ್ನು ತಲುಪಿದರು. ಅದಕ್ಕೂ ಮುನ್ನ ಪಂಪಾ ಕ್ಷೇತ್ರವನ್ನು ತಲುಪಿದ ಮುರ್ಮು ಅವರು ಅಲ್ಲಿಂದ ಮೆರವಣಿಗೆಯಲ್ಲಿ ಶಬರಿಮಲೆ ಬೆಟ್ಟವನ್ನು ಹತ್ತಿದರು. ದೇವಸ್ಥಾನಕ್ಕೆ ಆಗಮಿಸಿದ ರಾಷ್ಟ್ರಪತಿಗಳು ಪವಿತ್ರ 18 ಮೆಟ್ಟಿಲುಗಳನ್ನು ಹತ್ತಿ, ಧ್ವಜಸ್ತಂಭವನ್ನು ತಲುಪಿದಾಗ, ಪುರೋಹಿತರಾದ ಮಹೇಶ್ ಮೋಹನನ್ ಅವರು ಮುರ್ಮು ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು.

ರಾಷ್ಟ್ರಪತಿ ಮುರ್ಮು ಅವರಿದ್ದ ಹೆಲಿಕಾಪ್ಟರ್​ ಬೆಳಗ್ಗೆ 9.05ಕ್ಕೆ ಪ್ರಮದಂ ಗ್ರಾಮದಲ್ಲಿ ಇಳಿದ ನಂತರ ರಸ್ತೆ ಮೂಲಕ ಪಂಪಾ ತಲುಪಿದರು. ಮಧ್ಯಾಹ್ನ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ ನಂತರ ಅವರು ದೇವಸ್ಥಾನದ ಅತಿಥಿ ಗೃಹದಲ್ಲಿ ಕೆಲ ಕಾಲ ವಿಶ್ರಾಂತಿ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ. ಸದ್ಯ ಶಬರಿಮಲೆಯಲ್ಲಿ ದರ್ಶನಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ.

ಇನ್ನು ರಾತ್ರಿಯ ವೇಳೆಗೆ ಮುರ್ಮು ಅವರು ತಿರುವನಂತಪುರಂಗೆ ಹಿಂತಿರುಗಲಿದ್ದಾರೆ. ನಂತರ, ಹೋಟೆಲ್ ಹಯಾತ್ ರೀಜೆನ್ಸಿಯಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಆಯೋಜಿಸಿರುವ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ. ಅ. 23 ರಂದು ಬೆಳಗ್ಗೆ 10.30 ಕ್ಕೆ ರಾಜಭವನದಲ್ಲಿ ಕೆ.ಆರ್. ನಾರಾಯಣನ್ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಮಧ್ಯಾಹ್ನ 12.50 ಕ್ಕೆ ಅವರು ವರ್ಕಳ ಶಿವಗಿರಿಯಲ್ಲಿ ನಡೆಯುವ ಶ್ರೀ ನಾರಾಯಣ ಗುರು ಮಹಾಸಮಾಧಿ ಶತಮಾನೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ರಾಷ್ಟ್ರಪತಿಗಳು ಅ. 24 ರಂದು ಬೆಳಗ್ಗೆ 11.35ಕ್ಕೆ ಕೊಚ್ಚಿಯಲ್ಲಿರುವ ನೌಕಾ ಪ್ರಧಾನ ಕಚೇರಿಗೆ ಬಂದಿಳಿಯಲಿದ್ದು, ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೋಲ್ಗಟ್ಟಿ ಪ್ಯಾಲೇಸ್‌ನಲ್ಲಿ ಊಟದ ನಂತರ, ಸಂಜೆ 4.05ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹಿಂತಿರುಗಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net