More

  ಬಿಜೆಪಿ-2 ಕಾಂಗ್ರೆಸ್-2 ಅತಂತ್ರ-1; ಡಿ.03ಕ್ಕೆ ಫಲಿತಾಂಶ

  ನವದೆಹಲಿ: ತೆಲಂಗಾಣ ಮತದಾನ ಪೂರ್ಣಗೊಳ್ಳುತ್ತಿ ದ್ದಂತೆಯೇ ಪಂಚರಾಜ್ಯ ಚುನಾವಣೆ ಮತಗಟ್ಟೆ ಸಮೀಕ್ಷೆಗಳು ಬಹಿರಂಗಗೊಂಡಿದ್ದು, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ, ತೆಲಂಗಾಣ, ಛತ್ತೀಸ್​ಗಢದಲ್ಲಿ ಕಾಂಗ್ರೆಸ್ ಗದ್ದುಗೆ ಏರುವ ಸಾಧ್ಯತೆ ಕುರಿತು ಬಹುಪಾಲು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಮಿಝೊರಾಂನಲ್ಲಿ ಅತಂತ್ರ ಫಲಿತಾಂಶದ ಸುಳಿವು ವ್ಯಕ್ತವಾಗಿದೆ. 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಭಾವಿಸಲಾಗಿರುವ ಈ ಪಂಚರಾಜ್ಯ ಫಲಿತಾಂಶ ಎನ್​ಡಿಎ ಮತ್ತು ಇಂಡಿಯಾ ಮೈತ್ರಿ ಕೂಟಗಳ ಪಾಲಿಗೆ ನಿರ್ಣಾಯಕ ಮಹತ್ವ ಹೊಂದಿವೆ.

  ರಾಜಸ್ಥಾನದಲ್ಲಿ ಅರಳುವುದೇ ಕಮಲ?: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ವಸುಂಧರಾ ರಾಜೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸದೇ ಇದ್ದರೂ ಬಿಜೆಪಿ ಸುಧಾರಿತ ನಿರ್ವಹಣೆ ತೋರಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಎಬಿಪಿ ನ್ಯೂಸ್ -ಸಿ ವೋಟರ್, ದೈನಿಕ್ ಭಾಸ್ಕರ್, ಜನ್ ಕಿ ಬಾತ್, ಪಿ-ಮಾರ್ಕ್, ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ ಸರಳ ಬಹುಮತವನ್ನು ಅಂದಾಜಿಸಲಾಗಿದೆ.

  ಪೋಲ್​ಸ್ಟ್ರಾಟ್, ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ, ಇಂಡಿಯಾ ಟಿವಿ-ಸಿಎನ್​ಎಕ್ಸ್ ಸಮೀಕ್ಷೆಗಳು ಮಾತ್ರ ಕಾಂಗ್ರೆಸ್ 100ರ ಗಡಿ ದಾಟುವ ಸಾಧ್ಯತೆ ಬಗ್ಗೆ ಭವಿಷ್ಯ ನುಡಿದಿವೆ. ಕಳೆದ ಚುನಾವಣೆ ಕಾಂಗ್ರೆಸ್ ಗೆದ್ದಿದ್ದರೂ, ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಸಂಘರ್ಷ ಬೀದಿರಂಪ ಆಗಿ ಪಕ್ಷ ಒಂಥರ ಇಬ್ಭಾಗ ಆಗಿತ್ತು. ಇದು ಚುನಾವಣೆ ಮೇಲೂ ಪರಿಣಾಮ ಬೀರಿದಂತಿದೆ.

  ಮಧ್ಯಪ್ರದೇಶ ಅತಂತ್ರ ಅಥವಾ ಕಮಲ ಕಿಲಕಿಲ?: ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವೂ ಆಡಳಿತ ವಿರೋಧಿ ಅಲೆ ಆತಂಕ ಎದುರಿಸಿದ್ದರೆ, ಕಾಂಗ್ರೆಸ್ ಕಮಲ್​ನಾಥ್ ನೇತೃತ್ವದಲ್ಲಿ ಪರಿಣಾಮಕಾರಿ ಪ್ರಚಾರ ತಂತ್ರಗಳ ಮೂಲಕ ಮತಯಾಚಿಸಿತ್ತು. ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಮಧ್ಯೆ ಪ್ರಬಲ ಪೈಪೋಟಿ ಕಂಡುಬಂದಿದ್ದು, ಯಾರೂ ಬೇಕಾದರೂ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಕೆಲ ಸಮೀಕ್ಷೆಗಳು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಖಚಿತವಾಗಿ ತಿಳಿಸಿದ್ದರೂ, ಮತ್ತೆ ಕೆಲವು ಅತಂತ್ರ ವಿಧಾನಸಭೆ ಮುನ್ಸೂಚನೆ ನೀಡಿವೆ. ಒಂದು ವೇಳೆ ಬಿಜೆಪಿ ಮರು ಆಯ್ಕೆಯಾದರೆ, ದಿಲ್ಲಿ ಹೈಕಮಾಂಡ್ ಚೌಹಾಣ್​ರನ್ನೇ ಸಿಎಂ ಸ್ಥಾನದಲ್ಲಿ ಕೂರಿಸುತ್ತಾ ಇಲ್ಲ ಹೊಸಬರನ್ನು ಆರಿಸುತ್ತಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ, ಇಂಡಿಯಾ ಟಿವಿ-ಸಿಎನ್​ಎಕ್ಸ್ ಸಮೀಕ್ಷೆಗಳಂತೂ ಬಿಜೆಪಿ 140-160 ಸೀಟುಗಳ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದಿವೆ. ದೈನಿಕ್ ಭಾಸ್ಕರ್, ಪೋಲ್ ಸ್ಟ್ರಾಟ್ ಸಮೀಕ್ಷೆಗಳು ಅಸ್ಪಷ್ಟ ಜನಾದೇಶದ ಸುಳಿವು ನೀಡಿವೆ. ರಾಜಸ್ಥಾನ- ಮಧ್ಯಪ್ರದೇಶದಲ್ಲಿ ಮೋದಿ ನೇತೃತ್ವದಲ್ಲೇ ಚುನಾವಣಾ ಪ್ರಚಾರ ನಡೆಸಲಾಗಿತ್ತು. ಎರಡೂ ರಾಜ್ಯಗಳಲ್ಲಿ ಸಿಎಂ ಅಭ್ಯರ್ಥಿ ಘೊಷಿಸದೆ, ಸಾಮೂಹಿಕ ನಾಯಕತ್ವಕ್ಕೆ ಬಿಜೆಪಿ ಆದ್ಯತೆ ನೀಡಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಎರಡೂ ರಾಜ್ಯಗಳಲ್ಲಿ ಸಂಸದರನ್ನೂ ಕಣಕ್ಕಿಳಿಸಿದ ದಿಲ್ಲಿ ನಾಯಕರು, ಹಲವು ಬದಲಾವಣೆಗೆ ನಾಂದಿ ಹಾಡಿದ್ದರು. ಸಮೀಕ್ಷೆಗಳ ಪ್ರಕಾರ ಹೊಸ ಪ್ರಯೋಗಗಳು ಬಿಜೆಪಿಗೆ ಫಲ ಕೊಟ್ಟಿದೆಯೇ ಎಂಬುದಕ್ಕೆ 3 ದಿನಗಳಲ್ಲಿ ಉತ್ತರ ಸಿಗಲಿದೆ.

  ಬಿಜೆಪಿ-2 ಕಾಂಗ್ರೆಸ್-2 ಅತಂತ್ರ-1; ಡಿ.03ಕ್ಕೆ ಫಲಿತಾಂಶ

  ಭೂಪೇಶ್​ಗೆ ಬಹುಪರಾಕ್?: 90 ಕ್ಷೇತ್ರಗಳ ಛತ್ತೀಸ್​ಗಢ ಚುನಾವಣೆಗೆ ಸಂಬಂಧಿಸಿ 9 ಚುನಾವಣೋತ್ತರ ಸಮೀಕ್ಷೆಗಳು ನಡೆದಿದ್ದು, ಬಹುತೇಕ ಎಲ್ಲ ಸಮೀಕ್ಷೆಗಳು ಸಿಎಂ ಭೂಪೇಶ್ ಬಗೇಲ್ ನೇತೃತ್ವದ ಕಾಂಗ್ರೆಸ್ ಮತ್ತೆ ಅಧಿಕಾರ ಗಳಿಸಲಿದೆ ಎಂದಿವೆ. ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಸುಧಾರಿತ ನಿರ್ವಹಣೆ ತೋರಿದರೂ, ಸರ್ಕಾರ ರಚನೆಗೆ ಬೇಕಿರುವ ಸಂಖ್ಯೆ ತನ್ನದಾಗಿಸುವಲ್ಲಿ ಬಿಜೆಪಿ ವಿಫಲವಾಗಲಿದೆ ಎಂದಿವೆ.

  ಮಿಜೋರಾಂ ಅತಂತ್ರ?: ಮಿಜೋರಾಂ ಅತಂತ್ರ ವಿಧಾನಸಭೆಗೆ ಸಾಕ್ಷಿ ಆಗಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದು, ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್​ಎಫ್) ಗರಿಷ್ಠ ಸ್ಥಾನಗಳನ್ನು ಗಳಿಸಲಿದೆ ಎಂದು ಇಂಡಿಯಾ ಟಿವಿ-ಸಿಎನ್​ಎಕ್ಸ್ ಸಮೀಕ್ಷೆ ಹೇಳಿದೆ. 40 ಸದಸ್ಯ ಬಲವುಳ್ಳ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 21 ಯಾವ ಪಕ್ಷವೂ ದಾಟುವುದಿಲ್ಲ ಎನ್ನುವುದು ಸಮೀಕ್ಷೆಗಳ ಸಾರಾಂಶ.

  ಕೆಸಿಆರ್​ಗೆ ಆಘಾತ?: 10 ವರ್ಷಗಳಿಂದ ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಸಿಎಂ ಚಂದ್ರಶೇಖರ ರಾವ್ ನೇತೃತ್ವದ ಬಿಆರ್​ಎಸ್​ಗೆ ಕಾಂಗ್ರೆಸ್​ನಿಂದ ಭಾರಿ ಆಘಾತ ಎದುರಾಗುವ ಸಾಧ್ಯತೆ ಇದೆ. ಕರ್ನಾಟಕದ ಮಾದರಿಯಲ್ಲಿ ತೆಲಂಗಾಣದಲ್ಲೂ ಗ್ಯಾರಂಟಿ ಸ್ಕೀಮ್ಳ ಭರವಸೆ ನೀಡಿದ್ದ ಕಾಂಗ್ರೆಸ್ ಮತದಾರರನ್ನು ಸೆಳೆಯಲು ಭಾರಿ ತಂತ್ರಗಳನ್ನು ಅನುಸರಿಸಿತ್ತು. 119 ಸದಸ್ಯ ಬಲದ ವಿಧಾನಸಭೆಯಲ್ಲಿ ಇಂಡಿಯಾ ಟಿವಿ-ಸಿಎನ್​ಎಕ್ಸ್ ಮತ್ತು ಟುಡೇಸ್ ಚಾಣಕ್ಯ ಸಮೀಕ್ಷೆಗಳು ಕಾಂಗ್ರೆಸ್​ಗೆ 70ಕ್ಕೂ ಹೆಚ್ಚು ಸ್ಥಾನದ ಭವಿಷ್ಯ ನುಡಿದಿದ್ದರೆ, ಜನ್ ಕಿ ಬಾತ್, ಪೋಲ್​ಸ್ಟ್ರಾಟ್ ಸಮೀಕ್ಷೆಗಳಲ್ಲಿ ಕಾಂಗ್ರೆಸ್-ಬಿಆರ್​ಎಸ್ ಮಧ್ಯೆ ತೀವ್ರ ಪೈಪೋಟಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸುವ ಸುಳಿವು ವ್ಯಕ್ತವಾಗಿದೆ. ಕಾಂಗ್ರೆಸ್ ಗೆಲುವು ನಿಜವಾದಲ್ಲಿ ಲೋಕಸಭೆ ಚುನಾವಣೆ ಮುನ್ನ ಅದು ಪಕ್ಷಕ್ಕೆ ಬಹುದೊಡ್ಡ ಬೂಸ್ಟರ್ ಆಗಲಿದೆ.

  ಬಿಜೆಪಿ-2 ಕಾಂಗ್ರೆಸ್-2 ಅತಂತ್ರ-1; ಡಿ.03ಕ್ಕೆ ಫಲಿತಾಂಶ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts