

ನವದೆಹಲಿ: ದೇಶೀಯ ಕರೊನಾ ವೈರಸ್ ನಿಗ್ರಹ ಲಸಿಕೆಯ ಮಾನವರ ಮೇಲಿನ ಪ್ರಯೋಗ (ಕ್ಲಿನಿಕಲ್ ಟ್ರಯಲ್) ಮೊದಲ ಹಂತದ ಪರೀಕ್ಷೆ ಮುಂದುವರಿದಿರುವಂತೆಯೇ, ಎರಡನೇ ಹಂತದ ಪ್ರಯೋಗಕ್ಕೂ ಸಿದ್ಧತೆ ಆರಂಭವಾಗಿದೆ.
ಮೊದಲ ಹಂತದ ಪರೀಕ್ಷೆಯ ಆರಂಭಿಕ ಫಲಿತಾಂಶದಲ್ಲಿ ದೇಶೀಯ ಲಸಿಕೆ ಕೋವಾಕ್ಸಿನ್ ಮಾನವರ ಬಳಕೆಗೆ ಸುರಕ್ಷಿತ ಎಂಬುದು ತಿಳಿದು ಬಂದಿತ್ತು. ಇದೀಗ ಎರಡನೇ ಹಂತದ ಪರೀಕ್ಷೆಗಾಗಿ ಭುವನೇಶ್ವರದ ಇನ್ಸ್ಟಿಟ್ಯೂಟ್ ಮೆಡಿಕಲ್ ಸೈನ್ಸ್ ಆ್ಯಂಡ್ ಎಸ್ಯುಎಂ ಆಸ್ಪತ್ರೆಯಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಮುಖ್ಯ ಸಂಶೋಧನಾಧಿಕಾರಿ ಡಾ. ಇ. ವೆಂಕಟರಾವ್ ಮಾಹಿತಿ ನೀಡಿದ್ದಾರೆ.
ಮೊದಲ ಹಂತದಲ್ಲಿ ಲಸಿಕೆ ಪಡೆದವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ಕರೊನಾ ವೈರಸ್ ತಡೆಯುವಲ್ಲಿ ಇದು ಎಷ್ಟು ಪರಿಣಾಮಕಾರಿ ಎಂಬುದನ್ನು ವಿಶ್ಲೇಷಿಸಲಾಗುತ್ತಿದೆ. ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿರೋಧಕ ಕಣಗಳ ಆಧಾರದಲ್ಲಿ ಕಂಡು ಹಿಡಿಯಲಾಗುತ್ತದೆ. ಮೊದಲ ಹಂತದಲ್ಲಿ ಲಸಿಕೆ ಪಡೆದವರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಉಂಟಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಮೊದಲ ಹಾಗೂ 14 ದಿನದಂದು ಲಸಿಕೆ ನೀಡಲಾಗಿತ್ತು. ಎರಡು ಬಾರಿಯೂ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ. ಇಷ್ಟೇ ಅಲ್ಲದೇ, 28 ದಿನ, 42, 104 ಹಾಗೂ 194 ದಿನಂದು ಕೂಡ ರಕ್ತದ ಮಾದರಿ ಸಂಗ್ರಹಿಸಿ ರೋಗ ನಿರೋಧಕ ಶಕ್ತಿಯ ಪ್ರಭಾವ ಎಲ್ಲಿಯವರೆಗೆ ಇರಲಿದೆ ಎಂಬುದನ್ನು ಕಂಡುಕೊಳ್ಳಲಾಗುತ್ತದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆ ಸೇರಿ ದೇಶದ 12 ಕಡೆಗಳಲ್ಲಿ ಹೈದರಾಬಾದ್ನ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಈ ಲಸಿಕೆಯ ಪ್ರಯೋಗ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ 375 ಹಾಗೂ ಎರಡನೇ ಹಂತದಲ್ಲಿ 1,025 ಜನರಿಗೆ ಲಸಿಕೆ ನೀಡಲಾಗುತ್ತದೆ. ಪ್ರಯೋಗ ಯಶಸ್ವಿಯಾದಲ್ಲಿ ವರ್ಷಾಂತ್ಯಕ್ಕೆ ಈ ಲಸಿಕೆ ಲಭ್ಯವಾಗಲಿದೆ.