ಇದು ಸಿಹಿ ಸುದ್ದಿ ಎನ್ನುತ್ತಿದ್ದಾರೆ ತಾರಕ್ ಅಭಿಮಾನಿಗಳು!

Junior - Neel Final
Published on

ಟಾಲಿವುಡ್‌ನ ಜನಪ್ರಿಯ ಹೀರೋ ಜ್ಯೂನಿಯರ್ ಎನ್.ಟಿ.ಆರ್ ಅಭಿನಯದಲ್ಲಿ ‘ಕೆಜಿಎ್’ ಖ್ಯಾತಿಯ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಿರುವ ವಿಷಯ ಇಂದು, ನಿನ್ನೆಯದಲ್ಲ. ಕಳೆದ ಆರೆಂಟು ತಿಂಗಳುಗಳಿಂದ ಇಂಥದ್ದೊಂದು ಸುದ್ದಿ ಕೇಳಿ ಬರುತ್ತಲೇ ಇದೆ. ಆದರೆ, ಇದುವರೆಗೂ ಪ್ರಶಾಂತ್ ನೀಲ್ ಆಗಲೀ, ತಾರಕ್ ಆಗಲೀ ... ಎಲ್ಲೂ ಈ ವಿಷಯದ ಬಗ್ಗೆ ಬಹಿರಂಗವಾಗಿ ಮಾತಾಡಿಲ್ಲ. ಜತೆಯಾಗಿ ಸಿನಿಮಾ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿಲ್ಲ. ಆದರೆ, ಅವರಿಬ್ಬರೂ ಸಿನಿಮಾ ಮಾಡುತ್ತಿರುವ ಸುದ್ದಿ ಮಾತ್ರ ಆಗಾಗ ತಿಂಗಳಿಗೊಂದು ಬಾರಿ ಕೇಳಿ ಬರುತ್ತದೆ.

ಇಷ್ಟು ದಿನಗಳ ಮಾತು ಹಾಗಿರಲಿ. ಪ್ರಶಾಂತ್ ಮತ್ತು ತಾರಕ್ ಸಿನಿಮಾ ಆಗುತ್ತಿರುವುದು ಖಂಡಿತಾ ಎಂದು ತಾರಕ್ ಅಭಿಮಾನಿಗಳು ಇಂದು ತೀರ್ಮಾನಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ, ಅವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಆಗುತ್ತಿರುವ ಬಗ್ಗೆ ಬಹಳ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಪ್ರಶಾಂತ್ ನೀಲ್ ಅವರ ಒಂದು ಟ್ವೀಟ್.

ಇಂದು ತಾರಕ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ವಿಶ್ ಮಾಡಿರುವ ಪ್ರಶಾಂತ್, ‘ನ್ಯೂಕ್ಲಿಯರ್ ಪ್ಲಾಂಟ್ ಪಕ್ಕ ಕುಳಿತರೆ ಹೇಗಿರುತ್ತದೆ ಎಂದು ಅರ್ಥವಾಗುತ್ತಿದೆ. ಮುಂದಿನ ಬಾರಿ ಈ ಕ್ರೇಜಿ ಎನರ್ಜಿಯ ಜತೆಗಿರುವುದಕ್ಕೆ ರೇಡಿಯೇಷನ್ ಸೂಟ್ ಹಾಕಿಕೊಂಡು ಬರುತ್ತೇನೆ. ಹ್ಯಾಪಿ ಬರ್ಥ್‌ಡೇ ಬ್ರದರ್’ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ಅವರ ಈ ಟ್ವೀಟ್, ಅವರು ತಾರಕ್ ಜತೆಗೆ ಕೆಲಸ ಮಾಡಲಿದ್ದಾರೆ ಎಂಬುದನ್ನು ಪುಷ್ಟೀಕರಿಸುತ್ತದೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಕೆಲವರು ಪ್ರಶಾಂತ್ ಮತ್ತು ತಾರಕ್ ಒಟ್ಟಿಗೆ ಕೆಲಸ ಮಾಡುವುದು ತಮ್ಮ ಪಾಲಿಗೆ ಸಿಹಿ ಸುದ್ದಿ ಎಂದರೆ, ಈ ಡೆಡ್ಲಿ ಕಾಂಬೋ ಸಿನಿಮಾಗೆ ಕಾಯುತ್ತಿರುವುದಾಗಿ ಇನ್ನೂ ಕೆಲವರು ಹೇಳಿಕೊಂಡಿದ್ದಾರೆ.

ಹಾಗಾದರೆ, ತಾರಕ್ ಅಭಿನಯದಲ್ಲಿ ಪ್ರಶಾಂತ್ ಚಿತ್ರ ನಿರ್ದೇಶಿಸುತ್ತಿರುವುದು ನಿಜವಾ? ಈ ಬಾರಿಯೂ ಎರಡೂ ಕಡೆಯಿಂದ ಮೌನ ಮುಂದುವರೆದಿದೆ. ಅವರಿಬ್ಬರಿಂದ ಉತ್ತರ ಯಾವಾಗ ಸಿಗುತ್ತದೋ ಗೊತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net