

ಬೆಂಗಳೂರು: ಹೊಂಬಾಳೆ ಫಿಲಂಸ್ ಸಂಸ್ಥೆಯು ಬುಧವಾರ ಹೊಸ ಚಿತ್ರವೊಂದನ್ನು ಘೋಷಿಸುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಸೋಮವಾರವಷ್ಟೇ ಹೇಳಿಕೊಂಡಿದೆ. ಯಾವಾಗ ಹೊಂಬಾಳೆ ಫಿಲಂಸ್ನಿಂದ ಹೊಸ ಚಿತ್ರ ಘೋಷಣೆಯಾಗಲಿದೆ ಎಂಬ ಸುದ್ದಿ ಹೊರಬಿತ್ತೋ, ಆ ಚಿತ್ರ ಯಾವುದಿರಬಹುದು, ಯಾರು ನಟಿಸಬಹುದು ಮತ್ತು ಯಾರು ನಿರ್ದೇಶಿಸಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಪ್ರಮುಖವಾಗಿ, ಈ ಚಿತ್ರದಲ್ಲಿ ಪ್ರಭಾಸ್ ನಟಿಸುತ್ತಾರಾ ಮತ್ತು ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಾರಾ ಎಂಬ ಪ್ರಶ್ನೆಯೊಂದು ಎಲ್ಲರನ್ನೂ ನಿದ್ದೆಗೆಡಿಸಿದೆ. ಕಾರಣ, 'ಕೆಜಿಎಫ್ 2' ಚಿತ್ರದ ಚಿತ್ರೀಕರಣಕ್ಕಾಗಿ ಪ್ರಶಾಂತ್ ನೀಲ್ ಇದೀಗ ಹೈದರಾಬಾದ್ನಲ್ಲಿ ಬೀಡುಬಿಟ್ಟಿದ್ದು, ಕೆಲವು ದಿನಗಳ ಹಿಂದೆ ಅವರು ಪ್ರಭಾಸ್ ಅವರನ್ನು ಭೇಟಿಯಾಗಿದ್ದಾರಂತೆ. ಹಾಗಾಗಿ, ಹೊಂಬಾಳೆ ಫಿಲಂಸ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್ ನಟಿಸಿದರೆ, ಪ್ರಶಾಂತ್ ನೀಲ್ ನಿರ್ದೇಶಿಸುತ್ತಾರೆ ಎಂಬ ನಂಬಿಕೆ ಹಲವರಲ್ಲಿದೆ.
ಈ ಮಧ್ಯೆ, ಇನ್ನೊಂದು ಸುದ್ದಿ ಕೇಳಿಬಂದಿದ್ದು, ಪ್ರಭಾಸ್ಗಾಗಿ ಪ್ರಶಾಂತ್ ನಿರ್ದೇಶಿಸಲಿರುವ ಚಿತ್ರವು ಕನ್ನಡದ 'ಉಗ್ರಂ' ರೀಮೇಕ್ ಇರಬಹುದು ಎಂದು ಹೇಳಲಾಗುತ್ತಿದೆ. 'ಉಗ್ರಂ' ಚಿತ್ರವು 2014ರಲ್ಲಿ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಹಿಟ್ ಆಗಿದ್ದಷ್ಟೇ ಅಲ್ಲ, ನಟ ಶ್ರೀಮುರಳಿಗೆ ದೊಡ್ಡ ಬ್ರೇಕ್ ಸಹ ಕೊಟ್ಟಿದ್ದು. ಈಗ ಇದೇ ಚಿತ್ರವನ್ನು ತೆಲುಗಿಗೆ ರೀಮೇಕ್ ಮಾಡುವುದಕ್ಕೆ ಹೊರಟಿದ್ದಾರಂತೆ ಪ್ರಶಾಂತ್ ನೀಲ್.
ಪ್ರಶಾಂತ್ ನೀಲ್ ಇದೇ ಚಿತ್ರವನ್ನು ಮಾಡುತ್ತಿರುವುದಕ್ಕೆ ಕಾರಣವಿದೆಯಂತೆ. ಪ್ರಮುಖವಾಗಿ ಚಿತ್ರಕಥೆ ಸಿದ್ಧವಾಗಿದ್ದು, ಇದನ್ನು ಶೂಟ್ ಮಾಡುವುದಕ್ಕೆ ಹೆಚ್ಚು ಸಮಯ ಬೇಡವಂತೆ. ಇನ್ನು ಪ್ರಭಾಸ್ ಕೂಡಾ, ಈ ಚಿತ್ರಕ್ಕೆ ಹೆಚ್ಚು ದಿನ ಬೇಕಾಗಿಲ್ಲ ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದಾರಂತೆ. ಹಾಗಾಗಿ ಪ್ರಭಾಸ್ ಮತ್ತು ಪ್ರಶಾಂತ್ ಇಬ್ಬರೂ, ಈಗ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿ, ಈ ಚಿತ್ರಕ್ಕೆ ಕೈಜೋಡಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಹೀಗೆ ಚಿತ್ರದ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದು, ಉತ್ತರಕ್ಕಾಗಿ ಬುಧವಾರ ಮಧ್ಯಾಹ್ನದವರೆಗೂ ಕಾಯಲೇಬೇಕಿದೆ.