

ಮುಂಬೈ: ಬಾಲಿವುಡ್ನ 'ಕಿಂಗ್ ಖಾನ್' ಎಂದೇ ಜನಪ್ರಿಯರಾಗಿರುವ ಶಾರೂಖ್ ಖಾನ್ಗೆ ಕ್ರಿಕೆಟ್ ಬಗ್ಗೆ ಅದೆಷ್ಟು ಪ್ರೀತಿ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಕಳೆದ ಹಲವು ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಶಾರೂಖ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಆಡುತ್ತಿದ್ದು, ಎರಡು ಬಾರಿ ಚಾಂಪಿಯನ್ ಸಹ ಆಗಿದೆ. ಇದರಿಂದ ಸ್ಫೂರ್ತಿಗೊಂಡು ಶಾರೂಖ್ ವೆಸ್ಟ್ ಇಂಡೀಸ್ನಲ್ಲಿ ನಡೆಯುವ ಕೆರಿಬಿಯನ್ ಲೀಗ್ನಲ್ಲಿ ಒಂದು ತಂಡದ ಮಾಲೀಕತ್ವವನ್ನು ವಹಿಸಿಕೊಂಡಿದ್ದಾರೆ.
ಈಗ್ಯಾಕೆ ಈ ಮಾತು ಎಂದರೆ, ಈಗಾಗಲೇ ಎರಡು ತಂಡಗಳ ಮಾಲೀಕರಾಗಿರುವ ಶಾರೂಖ್ ಖಾನ್, ಇದೀಗ ಮೂರನೇ ತಂಡವನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಅಮೇರಿಕಾದಲ್ಲೂ ಕ್ರಿಕೆಟ್ ಲೀಗ್ ಪ್ರಾರಂಭವಾಗಿದ್ದು, ಈ ಟೂರ್ನಿಯಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಎಂಬ ತಂಡಕ್ಕೆ ಕಿಂಗ್ ಖಾನ್ ಮಾಲೀಕರು ಎಂದು ಹೇಳಲಾಗುತ್ತಿದೆ.
ಈ ಟೂರ್ನಿಯಲ್ಲಿ ನ್ಯೂಯಾರ್ಕ್, ಸ್ಯಾನ್ಫ್ರಾನ್ಸಿಸ್ಕೋ, ವಾಷಿಂಗ್ಟನ್ ಡಿಸಿ, ಡಲ್ಲಾಸ್, ಚಿಕಾಗೋ ಮತ್ತು ಲಾಸ್ ಏಂಜಲೀಸ್ ತಂಡಗಳು ಭಾಗಿಯಾಗಿದ್ದು, ಈ ಪೈಕಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದ ಜವಾಬ್ದಾರಿಯನ್ನು ಶಾರೂಖ್ ವಹಿಸಿಕೊಂಡಿದ್ದಾರೆ. ಬರೀ ತಂಡದ ಮಾಲೀಕತ್ವವಷ್ಟೇ ಅಲ್ಲ, ಅಮೇರಿಕಾದಲ್ಲಿ ಹಿಂದುಳಿದಿರುವ ಕ್ರಿಕೆಟ್ ಪಂದ್ಯವನ್ನು ಮತ್ತಷ್ಟು ಬೆಳೆಸುವುದಕ್ಕೆ ಪಣ ತೊಟ್ಟಿರುವ ಶಾರೂಖ್ ಖಾನ್, ಅಮೇರಿಕಾದಲ್ಲಿ ಕ್ರಿಕೆಟ್ ಸ್ಟೇಡಿಯಂಗಳನ್ನು ಕಟ್ಟುವುದಕ್ಕೆ ಮುಂದಾಗುತ್ತಾರಂತೆ.
ಶಾರೂಖ್ ಖಾನ್ ಅವರು ಅಮೇರಿಕಾದಲ್ಲಿ ಕ್ರಿಕೆಟ್ ಬೆಳೆಸುವ ನಿಟ್ಟಿನಲ್ಲಿ ಈಗಾಗಲೇ ಹೆಜ್ಜೆ ಇಟ್ಟಿದ್ದರೂ, ಅಲ್ಲಿ ಕ್ರಿಕೆಟ್ ಟೂರ್ನಿ ಪ್ರಾರಂಭವಾಗುವುದಕ್ಕೆ ಇನ್ನೂ ಸಮಯವಿದೆ. 2022ರಲ್ಲಿ ಭಾರತದಲ್ಲಿ ಐಪಿಎಲ್ ಆದ ನಂತರ ಅಮೇರಿಕಾ ಕ್ರಿಕೆಟ್ ಲೀಗ್ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತಿದೆ.