ಪ್ರಭಾಸ್​ಗೆ ಸಿಕ್ತು ಹೊಸ ಬಿರುದು ... ಏನಿರಬಹುದು ಹೇಳಿ?

Prabhas - Final
Published on

ಟಾಲಿವುಡ್​ ಹೀರೋ ಪ್ರಭಾಸ್​, 'ರಾಧೇ-ಶ್ಯಾಮ್​' ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತು ತಾನೇ? ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು, ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಎಲ್ಲವೂ ಉಲ್ಟಾಪಲ್ಟಾ ಆಗಿದೆ.

ಹಾಗಾದರೆ, ಈ ಚಿತ್ರದ ಬಿಡುಗಡೆ ಯಾವಾಗ? ಎಂಬ ಪ್ರಶ್ನೆ ಸಹಜವೇ. ಬೇರೆ ದಾರಿಯೇ ಇಲ್ಲ. ಕರೊನಾ ಹಾವಳಿ ಸ್ವಲ್ಪ ಕಡಿಮೆ ಆಗಬೇಕು, ಆ ನಂತರ ಚಿತ್ರೀಕರಣ ಪ್ರಾರಂಭವಾಗಬೇಕು, ಆಮೇಲಷ್ಟೇ ಚಿತ್ರದ ಬಿಡುಗಡೆ ... ಒಟ್ಟಾರೆ ಚಿತ್ರದ ಬಿಡುಗಡೆ ಏನಿದ್ದರೂ ಮುಂದಿನ ವರ್ಷವೇ.

ಈ ವರ್ಷ ಪ್ರಭಾಸ್​ ಅಭಿನಯದ ಯಾವೊಂದು ಚಿತ್ರದ ಬಿಡುಗಡೆಯೂ ಇಲ್ಲ ಎನ್ನುತ್ತಿದ್ದಂತೆಯೇ, ಪ್ರಭಾಸ್​ ಅವರಿಗೆ ಟಾಲಿವುಡ್​ನಲ್ಲಿ ಹೊಸದೊಂದು ಬಿರುದು ನೀಡಲಾಗಿದೆ. ಆ ಬಿರುದು ಏನು ಗೊತ್ತಾ? 'ಮಿಸ್ಸಿಂಗ್​ ಸ್ಟಾರ್​' ಎಂದು.

ಈ ವರ್ಷ ಪ್ರಭಾಸ್​ ಅವರ ಯಾವೊಂದು ಚಿತ್ರ ಸಹ ಬಿಡುಗಡೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಈ ಬಿರುದು ಸಿಕ್ಕಿದೆ ಅಂದುಕೊಳ್ಳಬೇಡಿ. ಈ ಹಿಂದೆಯೇ, ಕೆಲವು ವರ್ಷಗಳು ಪ್ರಭಾಸ್​ ಅವರ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ ಎಂಬಹುದು ಗಮನಾರ್ಹ. ಈ ಹಿಂದೆ 2014, 2016 ಮತ್ತು 2018ರಲ್ಲಿ ಪ್ರಭಾಸ್​ ಅಭನಯದ ಒಂದೇ ಒಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈಗ 2020ರಲ್ಲೂ ಪ್ರಭಾಸ್​ ಅಭಿನಯದ ಚಿತ್ರ ಮಿಸ್​ ಆಗುತ್ತಿರುವುದರಿಂದ, ಅವರಿಗೆ 'ಮಿಸ್ಸಿಂಗ್​ ಸ್ಟಾರ್​' ಎಂಬ ಬಿರುದನ್ನು ನೀಡಲಾಗಿದೆ.

ಇನ್ನು ಮುಂದಿನ ವರ್ಷ 'ರಾಧೇ-ಶ್ಯಾಮ್​' ಬಿಡುಗಡೆಯಾದರೆ, ಅದರ ಮುಂದಿನ ವರ್ಷ ಯಾವೊಂದು ಚಿತ್ರ ಸಹ ಬಿಡುಗಡೆಯಾಗಲಿಕ್ಕಿಲ್ಲ. ಏಕೆಂದರೆ, ಪ್ರಭಾಸ್​ ಒಪ್ಪುವುದೆಲ್ಲಾ ಬಿಗ್​ ಬಜೆಟ್​ ಚಿತ್ರಗಳೇ. ಅದರಲ್ಲೂ ನಾಗ್ ಅಶ್ವಿನ್​ ನಿರ್ದೇಶನದ ಬಹುಕೋಟಿ ವೆಚ್ಚದ ಸ್ಕೈ-ಫೈ ಥ್ರಿಲ್ಲರ್​ ಚಿತ್ರದಲ್ಲಿ ನಟಿಸುವುದಕ್ಕೆ ಪ್ರಭಾಸ್​ ಈಗಾಗಲೇ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಅದರ ಚಿತ್ರೀಕರಣಕ್ಕೆ ಸಾಕಷ್ಟು ಸಮಯ ಬೇಕಾಗುವುದರಿಂದ, ಒಂದು ಪಕ್ಷ ಮುಂದಿನ ವರ್ಷ ಚಿತ್ರ ಪ್ರಾರಂಭವಾದರೆ, ಅದು ಬಿಡುಗಡೆಯಾಗುವುದೇನಿದ್ದರೂ 2023ಕ್ಕೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net