ಪ್ಲೇಆಫ್​ಗೆ RCB ಸನ್ನಿಹಿತ! ಮತ್ತೊಬ್ಬ ಪವರ್​ ಹಿಟ್ಟರ್​ ತಂಡಕ್ಕೆ ಸೇರ್ಪಡೆ; ಬೆಂಗಳೂರು ಪಡೆಗೆ ಆನೆ ಬಲ

ವಿಜಯವಾಣಿ - 2025-05-22T185745.195
Published on

RCB: ಇದೇ ಮೇ.17ರಿಂದ ಪುನಾರಂಭಗೊಂಡ ಐಪಿಎಲ್​ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೆಕೆಆರ್​ ತಂಡಗಳು ಮುಖಾಮುಖಿತಾಗಿ ಸೆಣಸಲು ಸಿದ್ಧವಾಗಿತ್ತು. ಆದರೆ, ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪಂದ್ಯ ರದ್ದಾಗಿ, ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು. ಇದು ಆರ್​ಸಿಬಿ ಅಭಿಮಾನಿಗಳಿಗೆ ಖುಷಿ ನೀಡಿದ್ದೇ ಆದರೂ ತಮ್ಮ ಫ್ರಾಂಚೈಸಿಯ ಕೊನೆ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುವುದಿಲ್ಲ ಎಂಬ ಬೇಸರ ಕಾಡಿದೆ.

ರಾಜ್ಯದಲ್ಲಿ ಬಿರುಸಿನ ಮಳೆಯಿರುವ ಹಿನ್ನಲೆ ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಎಸ್​ಆರ್​ಎಚ್​ ವಿರುದ್ಧದ ಪಂದ್ಯವನ್ನು ಲಖನೌಗೆ ಶಿಫ್ಟ್​ ಮಾಡಲಾಗಿದೆ. ಇಲ್ಲಿನ ಮೈದಾನದಲ್ಲೇ ಆರ್​ಸಿಬಿ ತನ್ನ ಮುಂದಿನ ಪಂದ್ಯಗಳನ್ನು ಆಡಲಿದೆ ಎಂದು ಬಿಸಿಸಿಐ ತಿಳಿಸಿದೆ. ಈ ಮಧ್ಯೆ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಕೂಡ ಆಗಿವೆ. ಹಲವು ಕಾರಣಗಳಿಂದ ಆರ್​ಸಿಬಿಯಲ್ಲಿದ್ದ ವಿದೇಶಿ ಆಟಗಾರರು ಈಗಾಗಲೇ ತಮ್ಮ ರಾಷ್ಟ್ರೀಯ ತಂಡಗಳನ್ನು ಸೇರಿಕೊಂಡಿದ್ದು, ಮುಂಬರುವ ಐಪಿಎಲ್​ ಪಂದ್ಯಗಳಿಗೆ ತಾವು ಅಲಭ್ಯ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಪ್ಲೇಆಫ್​ ಹೊಸ್ತಿಲಲ್ಲಿರುವ ಆರ್​ಸಿಬಿಗೆ ಕೊಂಚ ಸಂಕಷ್ಟ ಎದುರಾಗಿದ್ದೇ ಆದರೂ ಟ್ರೋಫಿ ಉತ್ಸಾಹ ಎಂದಿಗಿಂತ ಹೆಚ್ಚಿದೆ. ಈ ಉತ್ಸಾಹ ಇದೀಗ ದುಪ್ಪಟ್ಟಾಗಿದ್ದು, ಮತ್ತೊಬ್ಬ ಸ್ಟಾರ್​ ಆಟಗಾರ ತಂಡವನ್ನು ಸೇರಿಕೊಂಡಿದ್ದಾರೆ. ಸತತ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ ನ್ಯೂಜಿಲೆಂಡ್ ಆಟಗಾರ ಟಿಮ್ ಸೀಫರ್ಟ್ ಸೇರ್ಪಡೆಯಾಗಿದ್ದಾರೆ.

ಈ ಕುರಿತು ಆರ್​ಸಿಬಿ ತನ್ನ ಅಧಿಕೃತ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.ಇಂಗ್ಲೆಂಡ್ ಬ್ಯಾಟರ್​ ಜಾಕೋಬ್ ಬೆಥೆಲ್ ಬದಲಿಗೆ ಕಿವೀಸ್ ವಿಕೆಟ್ ಕೀಪರ್-ಬ್ಯಾಟರ್ ಟಿಮ್ ಸೀಫರ್ಟ್ ಅವರನ್ನು ಕರೆದುಕೊಳ್ಳಲಾಗಿದೆ. ನ್ಯೂಜಿಲೆಂಡ್ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 66 ಪಂದ್ಯಗಳನ್ನಾಡಿರುವ ಟಿಮ್ ಸೀಫರ್ಟ್ 1,540 ರನ್ ಗಳಿಸಿದ್ದಾರೆ. ಇದೇ ಮೇ.24ರಿಂದ ಆರ್​ಸಿಬಿ ಪರ ಕಣಕ್ಕಿಳಿಯಲಿರುವ ಟಿಮ್​, ಮುಂಬರುವ ಪಂದ್ಯಗಳಲ್ಲಿ ಹೇಗೆ ಕಮಾಲ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net