

ಗುರ್ಗಾಂವ್: ಆರು ಕಿ.ಮೀ ಉದ್ದದ ನಿರ್ಮಾಣ ಹಂತದ ಫ್ಲೈಓವರ್ನ ಒಂದು ಭಾಗ ಕುಸಿತಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಗುರ್ಗಾಂವ್ನಲ್ಲಿ ನಡೆದಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾಹಿತಿ ತಿಳಿದ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದರು. ಫ್ಲೈವರ್ ಕುಸಿತಗೊಂಡ ಏರಿಯಾ ಜನನಿಬಿಡ ಸೊಹನ್ ರಸ್ತೆಯಾಗಿದ್ದರಿಂದ ರಸ್ತೆ ಮೇಲೆ ಬಿದ್ದಿದ್ದ ಭಾರಿ ಗಾತ್ರದ ಸಿಮೆಂಟ್ ಬ್ಲಾಕ್ಸ್ ಅನ್ನು ಯಂತ್ರದ ಸಹಾಯದಿಂದ ತೆರವುಗೊಳಿಸಲಾಯಿತು.
ಘಟನೆಯಲ್ಲಿ ಕೆಲವೊಂದು ಕಾರುಗಳು ಸಹ ಜಖಂಗೊಂಡಿವೆ. ಕಳೆದ ಕೆಲವು ದಿನಗಳಿಂದ ಗುರ್ಗಾಂವ್ನಲ್ಲಿ ಭಾರಿ ಮಳೆಯಾಗುತ್ತಿದೆ. ಈ ಕಾರಣದಿಂದಲೇ ಫ್ಲೈಓವರ್ ಒಂದು ಭಾಗ ಕುಸಿದಿದೆ ಎಂದು ಹೇಳಲಾಗಿದೆ. ಆದರೆ, ಕಳಪೆ ಕಾಮಗಾರಿ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. (ಏಜೆನ್ಸೀಸ್)