

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಭೂಗತ ಪಾತಕಿ ಹಾಗೂ ಮುಂಬೈನಲ್ಲಿ ಸಂಭವಿಸಿದ 1993 ಬಾಂಬ್ ದಾಳಿಯ ಸೂತ್ರಧಾರ ದಾವೂದ್ ಇಬ್ರಾಹಿಂ ತನ್ನ ನೆಲದಲ್ಲಿಯೇ ಇದ್ದಾನೆಂದು ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ.
ದಾವೂದ್ ನೆಲೆಸಿರುವ ವೈಟ್ಹೌಸ್, ಸೌದಿ ಮಸೀದಿ ಹತ್ತಿರ, ಕ್ಲಿಫ್ಟನ್ ವಿಳಾಸ ಕರಾಚಿಯದ್ದಾಗಿದೆ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ. ಈತನ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದೆ.
ಪಾಕಿಸ್ತಾನದ ಈ ಹೇಳಿಕೆಗೆ ಕಾರಣವೂ ಇಲ್ಲದಿಲ್ಲ. ಜಾಗತಿಕವಾಗಿ ನಿಷೇಧಿಸಲಾಗಿರುವ 88 ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಕಾರಣ, ವಿಶ್ವ ಸಮುದಾಯ ಅದರಲ್ಲೂ ವಿಶ್ವ ಆರ್ಥಿಕ ಕಾರ್ಯಪಡೆ (ಎಫ್ಎಟಿಎಫ್) ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ಜತೆಗೆ ಪಾಕಿಸ್ತಾನವನ್ನು ಬೂದು ಪಟ್ಟಿಯಿಂದ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿದೆ.
ಈ ಕಾರಣದಿಂದಾಗಿ ಭಯೋತ್ಪಾದನಾ ಸಂಘಟನೆಗಳು, ಮತ್ತದರ ಮುಖಂಡರಾದ ಹಫೀಜ್ ಸಯೀದ್, ಮಸೂದ್ ಅಝರ್, ದಾವೂದ್ ಇಬ್ರಾಹಿಂ ಮೊದಲಾದವರ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಲಾಗಿದೆ. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ.
ಈ ಕುರಿತಾಗಿ ಆಗಸ್ಟ್ 18ರಂದು ಎರಡು ಅಧಿಸೂಚನೆಗಳನ್ನು ಹೊರಡಿಸಿದೆ. ಮುಂಬೈ ದಾಳಿಯ ಸೂತ್ರಧಾರ ಸಂಘಟನೆಯಾದ ಜಮಾತ್ ಉದ್ ದಾವಾ, ಜೈಷ್-ಎ- ಮಹಮ್ಮದ್ ಸಂಘಟನೆಗಳ ಆರ್ಥಿಕ ಚಟುವಟಿಕೆಗಳ ಮೇಲೆ ನಿಬ್ಂಧ ವಿಧಿಸಲಾಗಿದೆ ಎಂದು ತಿಳಿಸಿತ್ತು.
ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಅಕ್ರಮವಾಗಿ ಹಲವು ವಹಿವಾಟುಗಳನ್ನು ನಡೆಸುತ್ತಿದ್ದಾನೆ. 1993ರ ಮುಂಬೈ ದಾಳಿ ಬಳಿಕ ಭಾರತದಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದಾನೆ. ಆತ ನೆಲೆಸಿದ್ದಾನೆಂದು ಹೇಳಲಾದ ವಿಳಾಸ ಕರಾಚಿಯದ್ದೇ ಆಗಿದೆ ಎಂದು ಪಾಕ್ ಅಧಿಕಾರಿಗಳು ವಿಶ್ವದೆದುರು ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ವಿದೇಶಗಳಿಂದ ಸಾಲ ಅಥವಾ ಆರ್ಥಿಕ ನೆರವು ಪಡೆಯಲು ಎಫ್ಎಟಿಎಫ್ನ ಬೂದು ಪಟ್ಟಿಯಿಂದ ಹೊರಬರಬೇಕಿದೆ. ಇದಕ್ಕಾಗಿ ಎಲ್ಲ ಕಸರತ್ತುಗಳನ್ನು ನಡೆಸುತ್ತಿದೆ.