More

  ಜೆಜೆಎಂ ಕಾಮಗಾರಿ ಕಳಪೆ: ಅಧಿಕಾರಿ ವಿರುದ್ಧ ಮುಗಿಬಿದ್ದ ಗ್ರಾಮಸ್ಥರು

  ವಿಜಯವಾಣಿ ಸುದ್ದಿಜಾಲ ಉಳ್ಳಾಲ

  ಜಲಜೀವನ ಮಿಷನ್ ಯೋಜನೆ ಕಾಮಗಾರಿ ಕಳಪೆಯಾಗಿ ನಡೆದಿದೆ ಎನ್ನುವ ಆರೋಪ ಗ್ರಾಮಸ್ಥರದ್ದಾದರೆ, 15 ದಿನಗಳಲ್ಲಿ ನೀರು ಕೊಡುತ್ತೇವೆ ಎನ್ನುವ ಅತೀವ ವಿಶ್ವಾಸ ಅಧಿಕಾರಿಯದು. ಈ ಯೋಜನೆಯ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಅಧಿಕಾರಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಕಾರಣ ಗ್ರಾಮಸಭೆಯಲ್ಲಿ ಬಿಸಿಯೇರಿದ ವಾತಾವರಣ ಏರ್ಪಟ್ಟಿತು…

  ಇದು ತಲಪಾಡಿ ಗ್ರಾಮ ಪಂಚಾಯಿತಿಯ ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ ಗುರುವಾರ 2023-24ನೇ ದ್ವಿತೀಯ ಹಂತದ ಗ್ರಾಮಸಭೆಯಲ್ಲಿ ಕಂಡುಬಂದ ದೃಶ್ಯ.

  ಜಲಜೀವನ ಯೋಜನೆ ಬಗ್ಗೆ ಸಹಾಯಕ ಕಾರ್ಯಪಾಲ ಅಭಿಯಂತರ ಶಿವಣ್ಣ ಮಾಹಿತಿ ನೀಡಿದರು.

  ತಲಪಾಡಿ ಗ್ರಾಮಕ್ಕೆ 4.36 ಕೋಟಿ ರೂ. ಅನುದಾನ ಬಂದಿದೆ. ನಾಲ್ಕು 50 ಸಾವಿರ ಲೀಟರ್ ಮತ್ತು 25 ಸಾವಿರ ಲೀಟರ್‌ನ 3 ಟ್ಯಾಂಕ್ ನಿರ್ಮಿಸಲಾಗಿದೆ. ಮಾರ್ಚ್ 15ರೊಳಗೆ ಕೊಳವೆಬಾವಿ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು. ದಾವಣಗೆರೆ ಕಂಪನಿ ಗುತ್ತಿಗೆ ಪಡೆದಿದೆ ಎಂದು ಯೋಜನೆ ಇಂಜಿನಿಯರ್ ತಿಳಿಸಿದರು.

  ಶೇ.90 ಕೆಲಸ ಆಗಿದ್ದು ಮರಳು ಹಾಕದೆ ಜಲ್ಲಿಹುಡಿ ಹಾಕಿ ಕೆಲಸ ಮಾಡಲಾಗಿದೆ. ಇದು ಕಳಪೆ ಕಾಮಗಾರಿ. ಕಾಮಗಾರಿಯ ಮಾಹಿತಿ ಫಲಕ ಹಾಕಿಲ್ಲ. ನೀವು ಅಧಿಕಾರಿಯಾಗಿ ಕಾಮಗಾರಿ ಪರಿಶೀಲಿಸಿದ್ದೀರಾ? ನೀವು ಬಂದು ಬಿಲ್ ಮಾಡಿ ಹೋಗುತ್ತೀರಿ, ಅರ್ಧ ಅಡಿ ತೋಡಿ ಪೈಪ್ ಹಾಕಲಾಗಿದೆ. ಕಾಂಕ್ರಿಟ್ ಕಾಮಗಾರಿ ಆಗುವಾಗ ನೀರನ್ನೂ ಹಾಕಿಲ್ಲ. ಇಷ್ಟು ದೊಡ್ಡ ಅನುದಾನ ಬಂದರೂ ಕಳಪೆ ಕಾಮಗಾರಿ ಆದರೆ ಯಾರು ಹೊಣೆ? ಅಧಿಕಾರಿಗಳು ಸುಳ್ಳು ಮಾಹಿತಿ ನೀಡಬಾರದು ಎಂದು ಗ್ರಾಮಸ್ಥರು ಅಧಿಕಾರಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರಲ್ಲದೆ ಈಗಲೇ ಬಂದು ಕಾಮಗಾರಿ ಪರಿಶೀಲಿಸಿ ಎಂದು ಆಗ್ರಹಿಸಿದರು.

  See also  ಡಗ್​ಔಟ್​ನಲ್ಲಿ ಕಣ್ಣೀರು ಹಾಕಿದ ಹಿಟ್​ಮ್ಯಾನ್​; ವಿಡಿಯೋ ವೈರಲ್​

  ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಎಂ.ನೋಡಲ್ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷೆ ಪುಷ್ಪಲತಾ ಶೆಟ್ಟಿ, ಕೆಎಸ್‌ಆರ್‌ಟಿಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್, ಆರೋಗ್ಯ ಇಲಾಖೆ, ಪಶುಸಂಗೋಪಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಬಕಾರಿ ಇಲಾಖೆ, ಶಿಕ್ಷಣ, ಪೊಲೀಸ್ ಮೊದಲಾದ ಇಲಾಖೆ ಅಧಿಕಾರಿಗಳು, ಗ್ರಾಪಂ ಸದಸ್ಯರು ಹಾಜರಿದ್ದರು. ಲೆಕ್ಕಾಧಿಕಾರಿ ಮಂಜಪ್ಪ ಖರ್ಚು ವೆಚ್ಚದ ವಿವರ ನೀಡಿದರು. ಕಾರ್ಯದರ್ಶಿ ಲಲಿತಾ ಶೆಟ್ಟಿ ವರದಿ ವಾಚಿಸಿದರು.

  ಸ್ವಚ್ಛತೆ ಕಾಪಾಡುತ್ತಿಲ್ಲ

  ರಸ್ತೆಯುದ್ದಕ್ಕೂ ಲಾರಿಗಳನ್ನು ನಿಲ್ಲಿಸಲಾಗುತ್ತಿದ್ದು, ಸ್ವಚ್ಛತೆ ಕಾಪಾಡುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ನಾರ್ಲ ಪಡೀಲ್ ಶಾಲೆಯಲ್ಲಿ ಮುಖ್ಯಶಿಕ್ಷಕರ ಒಳಜಗಳದಿಂದ ತುಂಬಾ ಮಕ್ಕಳು ಶಾಲೆ ಬಿಟ್ಟು ಹೋಗಿದ್ದು, ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆಯಲ್ಲಿ ನಿಯಂತ್ರಣ ತಪ್ಪಿದೆ. ಈ ಶಾಲೆಗೆ ಕಟ್ಟಡ ನಿರ್ಮಾಣ, ಶಾಲೆ ಉಳಿವಿಗೆ ಕಷ್ಟಪಟ್ಟಿದ್ದೇವೆ. ಮುಂದಿನ ವರ್ಷ ಇಂಥ ಸಮಸ್ಯೆ ಇರಬಾರದು, ಶಾಲೆ ಬಿಟ್ಟುಹೋದ ಮಕ್ಕಳು ಮತ್ತೆ ಬರುವಂತೆ ಮಾಡಬೇಕು ಎಂದು ಸುರೇಖಾ ಶಿಕ್ಷಣ ಇಲಾಖೆ ಅಧಿಕಾರಿಗೆ ಮನವಿ ಮಾಡಿದರು.

  ನಾನು ಅಧ್ಯಕ್ಷ ಎಂದಿದ್ದಕ್ಕೆ ಆಕ್ರೋಶ

  ಗ್ರಾಮದಲ್ಲಿ ನೀರಿನ ಸಮಸ್ಯೆ ಬಗ್ಗೆ ಗ್ರಾಮಸ್ಥರು ಧ್ವನಿ ಎತ್ತಿದರು. ಪ್ರತಿಯೊಬ್ಬರಿಗೆ 75 ಲೀಟರ್ ನೀರು ಕೊಡಬೇಕು, ಅದನ್ನು 55 ಲೀಟರ್ ಮಾಡಿದ್ದೀರಿ, ಅದನ್ನಾದರೂ ನೀವು ಕೊಡುತ್ತಿದ್ದೀರಾ? ನಿಮಗೆ ಸರ್ಕಾರದ ನಿಯಮ ಗೊತ್ತಿದೆಯಾ ಎಂದು ಅಬ್ಬಾಸ್ ಉಚ್ಚಿಲ್ ಮಾತಿಗೆ ಇತರರು ಧ್ವನಿಗೂಡಿಸಿದರು. ನಾನು ಅಧ್ಯಕ್ಷ, ಸಭೆಯನ್ನು ನಿಯಂತ್ರಿಸುವವ ಎಂದು ಅಧ್ಯಕ್ಷ ಇಸ್ಮಾಯಿಲ್ ಹೇಳಿದ್ದು ಗ್ರಾಮಸ್ಥರನ್ನು ಕೆರಳಿಸಿತು. ಇವತ್ತು ಸಭೆಯನ್ನು ನೋಡಲ್ ಅಧಿಕಾರಿ ನಿಯಂತ್ರಿಸಬೇಕು, ನೀವಲ್ಲ ಎಂದು ತರಾಟೆಗೆ ತೆಗೆದುಕೊಂಡ ಬಳಿಕ ನೋಡಲ್ ಅಧಿಕಾರಿ ಸಮಜಾಯಿಷಿ ನೀಡಿದರು.

  See also  ಪಾಲಕರಲ್ಲಿ ಕಡಿಮೆಯಾಗುತ್ತಿರುವ ಮಕ್ಕಳ ಮೇಲಿನ ಕಾಳಜಿ

  66 ನಾಯಿಗಳಿಗೆ ಚುಚ್ಚುಮದ್ದು

  ರಸ್ತೆಬದಿ ಸಾಕಷ್ಟು ನಾಯಿಗಳಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಮುಖ್ಯಶಿಕ್ಷಕರಿಗೇ ನಾಯಿ ಕಚ್ಚಿದೆ. ಇದಕ್ಕೆ ಪರಿಹಾರ ಏನು? ನಾಯಿ ಕಚ್ಚಿದರೆ ಬಡವರು ಏನು ಮಾಡಬೇಕು? ಕಚ್ಚುವ ಮತ್ತು ಬೊಗಳುವುದನ್ನು ತಡೆಯಲು ಪರಿಹಾರ ಇಲ್ಲದಿದ್ದರೆ ನಾವು ಬೀದಿನಾಯಿಗಳನ್ನು ಹಿಡಿದು ತಂದು ನಿಮ್ಮ ಕಚೇರಿಯಲ್ಲಿ ಕಟ್ಟುತ್ತೇವೆ ಎಂದು ಅಬ್ಬಾಸ್ ಉಚ್ಚಿಲ್ ಎಚ್ಚರಿಸಿದರು. ಒಂದೂವರೆ ವರ್ಷದಲ್ಲಿ 66 ನಾಯಿಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆ ನೀಡಲಾಗಿದೆ ಎಂದು ಪಿಡಿಒ ಕೇಶವ ಪೂಜಾರಿ ತಿಳಿಸಿದರು.

  ಘಟಕಕ್ಕಿಲ್ಲ ಸರ್ಕಾರಿ ಜಮೀನು

  ಗ್ರಾಮದಲ್ಲಿ ಘನತ್ಯಾಜ್ಯ ಘಟಕ ಅಗತ್ಯವಿದ್ದು, ಸ್ವಚ್ಛ ವಾಹಿನಿಯೂ ಬಂದಿದೆ. ಜಮೀನು ಮಂಜೂರಾಗಿದ್ದರೂ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇನ್ನೊಂದು ಜಾಗ ನೋಡಲಾಗಿತ್ತು. ಅಲ್ಲೂ ಜನರಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ ಘಟಕ ನಿರ್ಮಾಣಕ್ಕೆ ಮತ್ತೆ ಅಡ್ಡಿಯಾಗಿದೆ. ಗ್ರಾಮಸ್ಥರೇ ಸರ್ಕಾರಿ ಜಮೀನು ಗುರುತಿಸಿದರೆ ಘಟಕ ಶೀಘ್ರ ನಿರ್ಮಾಣ ಆಗಲಿದೆ ಎಂದು ಪಿಡಿಒ ಭರವಸೆ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts