More

    ಕಿನ್ಯ ಗ್ರಾಮದಲ್ಲಿಲ್ಲ ಪ್ರೌಢಶಿಕ್ಷಣ: ನಾಲ್ಕು ಸರ್ಕಾರಿ ಶಾಲೆಗಳಿದ್ದರೂ ಪರ ಊರೇ ಗತಿ

    ಅನ್ಸಾರ್ ಇನೋಳಿ ಉಳ್ಳಾಲ

    ಉಳ್ಳಾಲ ತಾಲೂಕಿನಲ್ಲಿ ಅತೀ ಹಿಂದುಳಿದ ಗ್ರಾಮ ಕಿನ್ಯದಲ್ಲಿ ನಾಲ್ಕು ಪ್ರಾಥಮಿಕ ಶಾಲೆಗಳಿದ್ದರೂ ಪ್ರೌಢಶಾಲೆಯ ಕೊರತೆಯಿದೆ. ಗ್ರಾಮದ ಬಡಕುಟುಂಬದ ಮಕ್ಕಳು ದೂರದ ಗ್ರಾಮಗಳನ್ನು ಅವಲಂಬಿಸಬೇಕಿದ್ದು, ಇದರಿಂದ ಹಲವರ ಶಿಕ್ಷಣ ಪ್ರಾಥಮಿಕ ಶಾಲೆಗೇ ಸೀಮಿತವಾಗುತ್ತಿದೆ.

    ಕೇರಳದ ಗಡಿಭಾಗದಲ್ಲಿರುವ ಕಿನ್ಯ ಗ್ರಾಮದಲ್ಲಿ ಬೆಳರಿಂಗೆ, ಉಕ್ಕುಡ, ಮೀನಾದಿ ಮತ್ತು ರಹ್ಮತ್ ನಗರದಲ್ಲಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿವೆ. ಗ್ರಾಪಂ ಆದಾಯಕ್ಕೆ ಮನೆಗಳು, ಸಣ್ಣ ಪುಟ್ಟ ಅಂಗಡಿಗಳಿಂದ ಬರುವ ತೆರಿಗೆಯೇ ಮೂಲ. ದೊಡ್ಡ ಉದ್ಯಮಗಳು ಇನ್ನೂ ಗ್ರಾಮಕ್ಕೆ ಕಾಲಿಡದ ಕಾರಣ ಆದಾಯ ಕೊರತೆಯಿಂದ ಇಂದಿಗೂ ತೀರಾ ಹಿಂದುಳಿದ ಗ್ರಾಮವಾಗಿಯೇ ಉಳಿದಿದೆ.

    ಪ್ರಾಥಮಿಕ ಶಾಲೆಗಳ ಇತಿಹಾಸ

    ಬೆಳರಿಂಗೆಯಲ್ಲಿರುವ ಶಾಲೆ ಸರ್ಕಾರಿ ದಾಖಲೆ ಪ್ರಕಾರ 1937ರಲ್ಲಿ ಆರಂಭಗೊಂಡಿದ್ದು ಪ್ರಥಮ ಶಾಲೆ ಎನಿಸಿದೆ. 97 ವರ್ಷಗಳ ಇತಿಹಾಸವಿರುವ ಶಾಲೆಯಲ್ಲಿ 1ರಿಂದ 8ನೇ ತರಗತಿ ಇದೆ. ಗ್ರಾಮದಲ್ಲಿ ಹಲವರು ಉನ್ನತ ಹುದ್ದೆ, ಪದವಿಗೇರಿರುವ ಹಿರಿಯರು ಇದೇ ಶಾಲೆಯಲ್ಲಿ ಶಿಕ್ಷಣ ಪಡೆದವರು. ಪ್ರಸ್ತುತ ದಿನಗಳಲ್ಲಿ ಆಂಗ್ಲ ಮಾಧ್ಯಮದ ಅಬ್ಬರದ ನಡುವೆಯೂ 102 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.

    ಕಿನ್ಯ ಗ್ರಾಮದಲ್ಲಿಲ್ಲ ಪ್ರೌಢಶಿಕ್ಷಣ: ನಾಲ್ಕು ಸರ್ಕಾರಿ ಶಾಲೆಗಳಿದ್ದರೂ ಪರ ಊರೇ ಗತಿ

    2022-23ನೇ ಸಾಲಿನ ರಾಜ್ಯ ವಲಯ ಮುಂದುವರಿದ ಯೋಜನೆಯಡಿ ಪ್ರಾಥಮಿಕ ಶಾಲೆಗಳ ಕೊಠಡಿ ನಿರ್ಮಾಣ ಕಾಮಗಾರಿಯಡಿ ರೂ.55.66 ಲಕ್ಷದಲ್ಲಿ ನಾಲ್ಕು ಕೊಠಡಿಗಳನ್ನು ನಿರ್ಮಿಸಲಾಗಿದೆ. ಅಡುಗೆ, ಶಿಕ್ಷಕರ ಕಚೇರಿ ಸಹಿತ 11 ಕೊಠಡಿಗಳು, ಅಗತ್ಯವಿರುವ 5 ಶಿಕ್ಷಕರು ಇದ್ದಾರೆ. ಶಾಲೆ ನಿರ್ಮಾಣಕ್ಕೆ ಜನಾರ್ದನ ಆಳ್ವ ಎಂಬುವರು ಸ್ಥಳದಾನ ಮಾಡಿದ್ದಾರೆ. 2003-04ನೇ ಸಾಲಿನಲ್ಲಿ 8ನೇ ತರಗತಿ ಆರಂಭಗೊಂಡಿದೆ.

    ಮೀನಾದಿ ಶಾಲೆ 1969ರಲ್ಲಿ ಆರಂಭಗೊಂಡಿದೆ. ರೋಟರಿ ಕ್ಲಬ್‌ನಿಂದ ಈ ಶಾಲೆ ಸ್ಥಾಪಿಸಲಾಗಿದ್ದು ಬಳಿಕ ಸರ್ಕಾರಿ ಶಾಲೆಯಾಗಿ ಮಾರ್ಪಟ್ಟಿತ್ತು. ಕ್ರೀಡಾ ಕೊಠಡಿ, ಇಂಗ್ಲಿಷ್ ಕೊಠಡಿ, ಸಭಾಂಗಣದ ಜತೆ ಆರು ಕೊಠಡಿಗಳು ಇಲ್ಲಿವೆ. ಇತ್ತೀಚೆಗೆ ಪ್ರಯೋಗಾಲಯ ಮತ್ತು ಗ್ರಂಥಾಲಯ ಕೊಠಡಿ ನಿರ್ಮಾಣ ಆಗಿದೆ. 94ಮಕ್ಕಳು ಕಲಿಯುತ್ತಿದ್ದು ಮೂವರು ಕಾಯಂ ಹಾಗೂ ಇಬ್ಬರು ಅತಿಥಿ ಉಪನ್ಯಾಸಕರಿದ್ದಾರೆ.

    ಕಳೆದ ವರ್ಷ 26 ಮಕ್ಕಳಿದ್ದರು, ತಲಪಾಡಿ ಗ್ರಾಮದಲ್ಲಿರುವ ಅನುದಾನಿತ ಶಾಲೆಯೊಂದು ಏಳನೇ ತರಗತಿ ಮುಗಿಸಿ ಬರುವ ಮಕ್ಕಳಿಗೆ ಎಸ್ಸೆಸ್ಸೆಲ್ಸಿವರೆಗೆ ಉಚಿತ ಶಿಕ್ಷಣ ಆಫರ್‌ಗೆ ಕಿನ್ಯಶಾಲೆಯ ಮಕ್ಕಳು ಮಾರು ಹೋಗಿದ್ದು ಇದರ ಪರಿಣಾಮ ಪ್ರಸ್ತುತ 8ನೇ ತರಗತಿಯಲ್ಲಿ ಆರು ಮಕ್ಕಳು ಮಾತ್ರ ಉಳಿದಿದ್ದಾರೆ.
    ಉಕ್ಕುಡದಲ್ಲಿರುವ ಶಾಲೆ 1994ರಲ್ಲಿ ಆರಂಭಗೊಂಡಿದ್ದು ಇಲ್ಲಿ 1ರಿಂದ 5ನೇ ತರಗತಿ ಇದ್ದು 43 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಸಭಾಂಗಣದಲ್ಲಿ ಎರಡು ಕೊಠಡಿಗಳ ಸಹಿತ ನಾಲ್ಕು ಕೊಠಡಿಗಳಿವೆ.

    ಶಿಕ್ಷಕರ ಕೊಠಡಿ ಇಲ್ಲ. ನೂತನ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿದೆ. ಹೊಸ ಶೌಚಗೃಹಕ್ಕೆ 5.20 ಲಕ್ಷ ರೂ. ಹಾಗೂ ಹಾಲಿ ಕಟ್ಟಡ ದುರಸ್ತಿಗೆ ಐದು ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ. ಇಬ್ಬರು ಶಿಕ್ಷಕರು, ಓರ್ವ ಅತಿಥಿ ಶಿಕ್ಷಕರಿದ್ದಾರೆ.

    ರಹ್ಮತ್ ನಗರದಲ್ಲಿ 1ರಿಂದ 5ನೇ ತರಗತಿ ಇದ್ದು 36 ಮಕ್ಕಳು ಕಲಿಯುತ್ತಿದ್ದಾರೆ. ಇಲ್ಲಿ ಇಬ್ಬರು ಶಿಕ್ಷಕರು, ಮೂರು ಕೊಠಡಿಗಳು ಮಾತ್ರ ಇದೆ. ಈ ಶಾಲೆ 2000ರಲ್ಲಿ ಆರಂಭಗೊಂಡಿತ್ತು.

    ಕಿನ್ಯ ಸೆಂಟರ್ ಪಾಯಿಂಟ್

    ಪ್ರೌಢಶಾಲೆ ಕೊರತೆಯಿಂದ ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದ ಮಕ್ಕಳ ಶಿಕ್ಷಣ ಎಂಟನೇ ತರಗತಿಗೆ ಸೀಮಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೊಂದು ಪ್ರೌಢಶಾಲೆ ಬೇಕೆನ್ನುವ ಬೇಡಿಕೆ ಗ್ರಾಮಸ್ಥರದ್ದು. ಇದಕ್ಕೆ ಶಾಸಕರೂ ಪೂರಕ ಸ್ಪಂದನೆ ನೀಡಿದ್ದು ಗ್ರಾಮಸ್ಥರಲ್ಲಿ ಆಶಾಭಾವನೆ ಮೂಡಿದೆ. ಕಿನ್ಯ ಗ್ರಾಮದ ಸೆಂಟರ್ ಪಾಯಿಂಟ್ ಆಗಿದ್ದು, ನಾಟೆಕಲ್‌ಗೆ ಕೇವಲ ಒಂದೂವರೆ ಕಿ.ಮೀ. ಅಂತರದಲ್ಲಿದೆ. ಇಲ್ಲೇ ಪ್ರೌಢಶಾಲೆ ಆರಂಭಗೊಂಡರೆ ಎಲ್ಲರಿಗೂ ಅನುಕೂಲ ಆಗುತ್ತದೆ ಎನ್ನುವ ಅಭಿಪ್ರಾಯ ಗ್ರಾಮಸ್ಥರದ್ದಾಗಿದೆ.

    ಉಳ್ಳಾಲ ತಾಲೂಕಿನಲ್ಲಿ ಮೂರು ಗ್ರಾಮಗಳನ್ನು ಹೊರತುಪಡಿಸಿ ಇತರ ಗ್ರಾಮಗಳಲ್ಲಿ ಪ್ರೌಢ ಶಾಲೆಗಳಿವೆ. ಮಂಜನಾಡಿ ಗ್ರಾಮದ ಕಲ್ಲಟ್ಟದಲ್ಲಿರುವ ಶಾಲೆ ಕಿನ್ಯ ಗ್ರಾಮಕ್ಕೆ ತಾಗಿಕೊಂಡಿದೆ. ಸರ್ಕಾರ ಹೊಸ ಪ್ರೌಢಶಾಲೆಗಳನ್ನು ಘೋಷಣೆ ಮಾಡಿದರೆ ಕಿನ್ಯ ಗ್ರಾಮಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತೇನೆ.

    -ಯು.ಟಿ.ಖಾದರ್ ವಿದಾನಸಭಾ ಅಧ್ಯಕ್ಷ

    ನಾಲ್ಕು ಹಿರಿಯ ಪ್ರಾಥಮಿಕ ಶಾಲೆಗಳಿರುವ ಕಿನ್ಯದಲ್ಲಿ ಪ್ರೌಢಶಾಲೆ ಇಲ್ಲದ ಕಾರಣ ಮಕ್ಕಳು ದೂರದ ಕಲ್ಕಟ್ಟ, ತಲಪಾಡಿ, ದೇರಳಕಟ್ಟೆಗೆ ಹೋಗಬೇಕಿದೆ. ಗ್ರಾಮದ ಮಧ್ಯಭಾಗದಲ್ಲಿ ಪ್ರೌಢಶಾಲೆ ನಿರ್ಮಿಸುವ ಬೇಡಿಕೆ ಗ್ರಾಮಸ್ಥರದ್ದಾಗಿದೆ. ಪ್ರಾಥಮಿಕ ಶಾಲೆಗಳನ್ನು ಅಭಿವೃದ್ಧಿಪಡಿಸಿರುವ ಸ್ಪೀಕರ್ ಪ್ರೌಢಶಾಲೆ ನಿರ್ಮಿಸುವ ಭರವಸೆ ಇದೆ.

    -ಹಮೀದ್ ಕಿನ್ಯ ಮಾಜಿ ಅಧ್ಯಕ್ಷ, ಕಿನ್ಯ ಗ್ರಾಪಂ

    ಕಿನ್ಯದಲ್ಲಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ನಾಲ್ಕು ಶಾಲೆಗಳಿವೆ, ಆದರೆ ಪ್ರೌಢಶಾಲೆ ಇಲ್ಲದ ಕಾರಣ ಬಡ ಮಕ್ಕಳ ಮುಂದಿನ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಗ್ರಾಮದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗ್ರಾಮದಲ್ಲಿ ಪ್ರೌಢಶಾಲೆ ಅಗತ್ಯವಿದೆ.

    ಅಜಿತ್ ಪೂಜಾರಿ
    ಬೆಳರಿಂಗೆ ಶಾಲಾ ಹಳೇ ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts