More

    ಮೀನು ನೀರಿನಂತೆ ಗುರು-ಭಕ್ತರ ಸಂಬಂಧ

    ಔರಾದ್: ಭಕ್ತರು ಮಠ ಕಟ್ಟಿದರೆ, ಸ್ವಾಮೀಜಿಗಳು ಸಮಾಜ ಕಟ್ಟುತ್ತಾರೆ. ಸ್ವಾಮೀಜಿ ಬಡವನಾಗಿರಬೇಕು. ಭಕ್ತ ಶ್ರೀಮಂತನಾಗಿರಬೇಕು. ಆಗಲೇ ಮಠಗಳು ಸದೃಢಗೊಂಡು ಸಮಾಜವನ್ನು ಬೆಳಗಬಹುದು ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ನುಡಿದರು.

    ಹೆಡಗಾಪುರ ಗ್ರಾಮದಲ್ಲಿ ಸೋಮವಾರ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದ ದಾರುಕಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಗುರುಪಟ್ಟಾಧಿಕಾರ ಮತ್ತು ಪೀಠಾರೋಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಜಗದ್ಗುರು, ೮೪ ಲಕ್ಷ ಜೀವರಾಶಿಗಳಲ್ಲಿ ಮನುಷ್ಯನ ಜನ್ಮ ಶ್ರೇಷ್ಠವಾಗಿದೆ. ಅದನ್ನರಿತು ಮಾನವರು ಬದುಕಬೇಕಾಗಿದೆ. ಅಧಿಕಾರ ದೊಡ್ಡದಲ್ಲ. ತ್ಯಾಗ, ನಿಸ್ವಾರ್ಥ ಸೇವೆ ದೊಡ್ಡದು ಎಂದು ಕಿವಿಮಾತು ಹೇಳಿದರು.

    ತಾಯಿ-ತಂದೆ ಜನ್ಮ ನೀಡಿದರೆ, ಗುರು ಜೀವನ ನಡೆಸುವುದನ್ನು ಕಲಿಸುತ್ತಾನೆ. ಯೋಗಿ, ಯೋಧ ಎಲ್ಲ ತ್ಯಜಿಸಿ ಸಮಾಜ, ದೇಶ ರಕ್ಷಣೆಗೆ ನಿಂತಿದ್ದಾರೆ. ಆದರೆ ಸಂಸಾರನಿರತ ಭಕ್ತರು ಅವರ ತ್ಯಾಗ, ಬಲಿದಾನಗಳಿಗೆ ಬೆಲೆ ನೀಡಿ ಸಮಾಜದ ಏಳಿಗೆಗೆ ಕೈಜೋಡಿಸಬೇಕಾಗಿದೆ. ಮೀನು ನೀರಿನಂತೆ ಗುರು ಭಕ್ತರ ಸಂಬಂಧವಿದೆ. ನೀರಿಲ್ಲದೆ ಮೀನಿಲ್ಲ, ಗುರು ಇಲ್ಲದ ಭಕ್ತರಿಲ್ಲ ಎಂದರು.

    ಚಿಟಗುಪ್ಪದ ಶ್ರೀ ಗುರುಲಿಂಗ ಶಿವಾಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಹಿರೆನಾಗಾಂವದ ಶ್ರೀ ಜಯಶಾಂತಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಿಚಕುಂದಾದ ಶ್ರೀ ಸೋಮಲಿಂಗ ಶಿವಾಚಾರ್ಯ, ಹಲಬರ್ಗಾದ ಶ್ರೀ ಹಾವಗಿಲಿಂಗ ಶಿವಾಚಾರ್ಯ, ಹಣೇಗಾಂವದ ಶ್ರೀ ಶಂಕರಲಿಂಗ ಶಿವಾಚಾರ್ಯ, ಠಾಣಾಕುಶನೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಡಾಕುಳಗಿಯ ಶ್ರೀ ಚನ್ನಬಸವ ಸ್ವಾಮೀಜಿ, ಕೌಳಾಸದ ಶ್ರೀ ಬಸವಲಿಂಗ ಶಿವಾಚಾರ್ಯ, ರಟಕಲ್‌ನ ಶ್ರೀ ಸಿದ್ಧರಾಮ ಸ್ವಾಮೀಜಿ, ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಗಂಜಿಕಟ್ಟಿಯ ಶ್ರೀ ಶಿವಲಿಂಗ ಶಿವಾಚಾರ್ಯ, ಮಂಠಾಳದ ಶ್ರೀ ಅಭಿನವ ಚೆನ್ನಬಸವ ಸ್ವಾಮೀಜಿ ಮಾತನಾಡಿದರು.

    ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ವಿಶೇಷ ಉಪನ್ಯಾಸ ನೀಡಿದರು. ಶ್ರೀ ಬೊಮ್ಮಲಿಂಗ ದೇವರು, ಶ್ರೀ ರವಿಕಿರಣ ದೇವರು, ಶ್ರೀ ಭೋಜಲಿಂಗ ದೇವರು, ಶ್ರೀ ಷಡಕ್ಷರಿ ದೇವರು, ಶ್ರೀ ಶಿವಬಸವ ದೇವರು, ಶ್ರೀ ರಾಚೋಟೇಶ್ವರ ದೇವರು, ಪ್ರಮುಖರಾದ ವೀರಬಸವಂತರಾಯ ಪಾಟೀಲ್, ಮಲ್ಲಿಕಾರ್ಜುನ ಸ್ವಾಮಿ, ರಾಜುಗೌಡ ನಾಡಗೌಡ, ಡಾ.ಕಾಶೀನಾಥ ಗುರುಮಠ, ರಾಮಕೃಷ್ಣನ್ ಸಾಳೆ, ಹಣಮಂತ ಪಾಟೀಲ್, ಸುರೇಶ ಶೆಟಕಾರ, ವಿಜಯಕುಮಾರ ಪಾಟೀಲ್, ಸೋಮಶೇಖರ ಪಾಟೀಲ್ ಗಾದಗಿ ಇತರರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಶ್ರೀಕಾಂತ ಸ್ವಾಮಿ ಸ್ವಾಗತಿಸಿದರು. ಬಸವರಾಜ ಸ್ವಾಮಿ ಹೆಡಗಾಪುರಕರ್ ವಂದಿಸಿದರು.

    ಗಮನಸೆಳೆದ ಪಲ್ಲಕ್ಕಿ ಉತ್ಸವ: ಶ್ರೀ ದಾರುಕಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಗುರು ಪಟ್ಟಾಧಿಕಾರದ ಬಳಿಕ ಗ್ರಾಮದಲ್ಲಿ ಅಲಂಕೃತಗೊಂಡ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದಿಂದ ಶುರುವಾದ ಪಲ್ಲಕ್ಕಿ ಉತ್ಸವ ಶಟಕಾರ ಗಲ್ಲಿ, ಸಣ್ಣ ಅಗಸಿ, ಬಸವನ ಗಲ್ಲಿ ಸೇರಿ ನಾನಾ ಬಡಾವಣೆಗಳ ಪ್ರಮುಖ ರಸ್ತೆಗಳ ಸಾಗಿತು.

    ಮಗನ ನಮಸ್ಕರಿಸಿದ ತಂದೆ-ತಾಯಿ: ಶ್ರೀ ದಾರುಕಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಪೀಠಾರೋಹಣ ಮಾಡುತ್ತಿದ್ದಂತೆ ಅವರ ತಂದೆ-ತಾಯಿಯಾದ ಮಲ್ಲಿಕಾರ್ಜುನ ಮತ್ತು ವಿಜಯಲಕ್ಷ್ಮೀ ದುಃಖಿತರಾಗಿ ದೀರ್ಘದಂಡ ಪ್ರಣಾಮ ಸಲ್ಲಿಸಿದರು. ಇದಕ್ಕೂ ಮುಂಚೆ ಶ್ರೀ ಕೇದಾರಲಿಂಗ ದೇವರಿಗೆ ದಾರುಕಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಎಂಬ ನಾಮಾಂಕಿತವನ್ನು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ನೀಡಿದರು. ಧರ್ಮಗ್ರಂಥದೊಂದಿಗೆ ಷಟಸ್ಥಲ ಬ್ರಹ್ಮೋಪದೇಶವನ್ನು ಶ್ರೀ ಶಿವಲಿಂಗ ಶಿವಾಚಾರ್ಯ ನೀಡಿದರು. ರಾಜ್ಯದ ವಿವಿಧ ಜಿಲ್ಲೆ ಹಾಗೂ ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದ ಅಸಂಖ್ಯ ಭಕ್ತರು ಗುರುಪಟ್ಟಾಧಿಕಾರ ಮತ್ತು ಪೀಠಾರೋಹಣದ ದೃಶ್ಯವನ್ನು ನೋಡಿ ಕಣ್ತುಂಬಿಕೊಂಡು ಭಕ್ತಿಯಿಂದ ನಮಿಸಿ ಪುನೀತರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts