More

    ಹುಲಿಕಲ್ ತೇರು ಎಳೆದ ಸಾವಿರಾರು ಭಕ್ತರು

    ಅರಕಲಗೂಡು: ತಾಲೂಕಿನ ಹುಲಿಕಲ್ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಪ್ರಸನ್ನ ವೆಂಕಟರಮಣ ದೇವಸ್ಥಾನದ ರಥೋತ್ಸವ ಸೋಮವಾರ ಸಡಗರ ಸಂಭ್ರಮಗಳಿಂದ ನೆರವೇರಿತು. ಜಾತ್ರಾ ಮಹೋತ್ಸವದಲ್ಲಿ ಸುತ್ತಲಿನ ಹಳ್ಳಿಗಳ ಸಹಸ್ರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಕಳೆದ ಕೆಲ ದಿನಗಳಿಂದ ದೇವರಿಗೆ ವಿಶೇಷ ಪೂಜೆ, ಭಜನೆ, ಉತ್ಸವ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು. ಬೆಳಗ್ಗೆ ಪೂಜೆ, ಅಭಿಷೇಕ, ಕೃಷ್ಣಗಂಧೋತ್ಸವ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲಾಯಿತು. ಮಧ್ಯಾಹ್ನ ಶುಭ ಮುಹೂರ್ತದಲ್ಲಿ ದೇವರ ಉತ್ಸವಮೂರ್ತಿಯನ್ನು ಹೊರತಂದು ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಿಸಿ, ಬಳಿಕ ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ನೆರೆದಿದ್ದ ಭಕ್ತರ ಜಯಘೋಷಗಳ ನಡುವೆ ತೇರು ಎಳೆಯಲಾಯಿತು.
    ತೇರು ಮುಂದೆ ಸಾಗುವಾಗ ಭಕ್ತರು ಹಣ್ಣ, ಧವನ ಎಸೆದು ಭಕ್ತಿ ಭಾವ ಪ್ರದರ್ಶಿಸಿದರು. ಗೋವಿಂದನ ನಾಮ ಸ್ಮರಣೆ ಮಾಡುತ್ತಾ ತೇರು ಎಳೆದು ಪುನೀತರಾದರು. ದೇವಸ್ಥಾನದಲ್ಲಿ ಮಹಿಳೆಯರು ದೇವರ ಭಜನೆ, ವೆಂಕಟಮರಣಸ್ವಾಮಿ ಪಠಣ ನಡೆಸಿದರು. ಭಕ್ತರು ಸರದಿ ಸಾಲಿನಲ್ಲಿ ಸಾಗಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಧನ್ಯತಾ ಭಾವ ಹೊಂದಿದರು. ಜಾತ್ರೆ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts