More

    ಶ್ರೀ ಮರಿಸ್ವಾಮಿ ಮಠದ ಸ್ವತ್ತು ಪರಭಾರೆಗೆ ಯತ್ನ

    ಆರ್​​.ತುಳಸಿಕುಮಾರ್​

    ಬೆಂಗಳೂರು: ರಾಜಧಾನಿಯಲ್ಲಿರುವ ಪ್ರಮುಖ ಹಾಗೂ ಹಳೆಯ ಮಠಗಳಲ್ಲಿ ಒಂದೆನಿಸಿರುವ ಶ್ರೀ ಮರಿಸ್ವಾಮಿ ಮಠದ ಸ್ವತ್ತನ್ನು ಸ್ವಂತ ಆಸ್ತಿಯಂತೆ ದಾಖಲಾತಿ ಸೃಷ್ಟಿಸಿ ಪರಭಾರೆ ಮಾಡುವ ಯತ್ನ ನಡೆದಿದೆ. ನಗರದ ಆಯಾಕಟ್ಟಿನ ಸ್ಥಳದಲ್ಲಿರುವ ಈ ಮಠದ ಆಸ್ತಿಯು ಕೋಟ್ಯಂತರ ರೂ. ಬೆಲೆ ಬಾಳುತ್ತಿದೆ. ಇದನ್ನು ಗ್ರಹಿಸಿಯೇ ಸ್ವತ್ತನ್ನು ಸ್ವಂತಕ್ಕೆ ಕಬ್ಜ ಮಾಡುವ ಹುನ್ನಾರ ನಡೆದಿರುವುದು ಭವಿಷ್ಯದಲ್ಲಿ ಮಠ ಅಸ್ತಿತ್ವದಲ್ಲಿರಲಿದೆಯೇ ಎಂಬ ಪ್ರಶ್ನೆ ಎದ್ದಿದೆ.

    ಕೆ.ಆರ್.ಮಾರುಕಟ್ಟೆಯ ಕಲಾಸಿಪಾಳ್ಯದ ಮಧ್ಯಭಾಗದಲ್ಲಿ ಮರಿಸ್ವಾಮಿ ಮಠವಿದೆ. ಉಜ್ಜಯಿನಿ ಪೀಠದ ಪರಂಪರೆಗೆ ಸೇರಿದ ಈ ಮಠವು ವೀರಶೈವ ಸಂಪ್ರದಾಯವನ್ನು ಅನುಸರಿಸುತ್ತಾ ಬಂದಿದೆ. ಆದರೆ, ಸರ್ವ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಕಾರಣ ಎಲ್ಲ ವರ್ಗಗಳ ಭಕ್ತರು ಮಠದ ಅನುಯಾಯಿಗಳಾಗಿದ್ದಾರೆ. ಈ ಕಾರಣದಿಂದಲೇ ಎರಡೂವರೆ ಶತಮಾನದ ಹಿನ್ನೆಲೆಯುಳ್ಳ ಮರಿಸ್ವಾಮಿ ಮಠವು ಹಿರಿತನವನ್ನು ಹೊಂದಿದೆ. ಆದರೂ, ಮಠದ ನಿರ್ವಹಣೆ ಮಾಡುತ್ತಿರುವ ಮಂದಿಯೇ ಸ್ವತ್ತನ್ನು ಕುಟುಂಬದ ಆಸ್ತಿಯನ್ನಾಗಿ ವಿಭಾಗ ಮಾಡಿಕೊಂಡು ಬಿಲ್ಡರ್ ಒಬ್ಬರಿಗೆ ಮಾರಾಟ ಮಾಡಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಮಠದ ಕೆಲ ಭಕ್ತರ ಗಮನಕ್ಕೆ ಪರಭಾರೆ ಮಾಡುವ ವಿಚಾರ ತಿಳಿದು ತಾತ್ಕಾಲಿಕವಾಗಿ ತಡೆಹಿಡಿಯುವ ಕೆಲಸ ನಡೆದಿದೆ.

    ಮಠದ ಸ್ವತ್ತು ಪರಭಾರೆ ಏಕೆ?:

    ಕಲಾಸಿಪಾಳ್ಯದಲ್ಲಿರುವ ಮರಿಸ್ವಾಮಿ ಮಠಕ್ಕೆ ಮೈಸೂರು ರಾಜಮನೆತನದಿಂದ 8 ಎಕರೆ ಇನಾಂ ಜಮೀನು ನೀಡಲಾಗಿದೆ. ಈ ಸ್ವತ್ತು ಹಾಲಿ ಮಠದ ಜಾಗದಿಂದ ಆರಂಭಗೊಂಡು ಜೆ.ಸಿ.ರಸ್ತೆ-ಮಿನರ್ವ ವೃತ್ತದವರೆಗೂ ವ್ಯಾಪಿಸಿಕೊಂಡಿತ್ತು. ಕ್ರಮೇಣ ಜಮೀನು ಒತ್ತುವರಿಯಾಗಿ ಸದ್ಯ ಮುಕ್ಕಾಲು ಎಕರೆ ಮಾತ್ರ ಉಳಿದುಕೊಂಡಿದೆ. ಹಾಲಿ ಸ್ವತ್ತು ಕೋಟ್ಯಂತರ ರೂ. ಬೆಲೆಬಾಳುತ್ತಿದ್ದು, ಮಠದ ಜಾಗದಲ್ಲಿ ಅನ್ಯ ಚಟುವಟಿಕೆ ಆರಂಭಿಸಲು ಉದ್ದೇಶಿಸಲಾಗಿದೆ. ಸದರಿ ಜಾಗವನ್ನು ನಕಲಿ ದಾಖಲೆಗಳ ಮೂಲಕ ಬಿಬಿಎಂಪಿ ಅಧಿಕಾರಿ/ಸಿಬ್ಬಂದಿಗಳ ಸಹಕಾರದಲ್ಲಿ ಸೃಷ್ಟಿ ಖಾಸಗಿ ವ್ಯಕ್ತಿಗಳಿಗೆ ಖಾತಾ ಮಾಡಿಕೊಡಲಾಗಿದೆ. ಈಗಲೂ ಮಠಕ್ಕೆ ಹೊಂದಿಕೊಂಡಂತೆ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ಪಾಲಿಕೆಗೆ ದೂರು ನೀಡಿದರೂ ಕ್ರಮ ಆಗಿಲ್ಲ. ಇದಲ್ಲದೆ ಶಾಖಾ ಮಠಗಳಲ್ಲಿ ಒಂದಾಗಿರುವ ‘ಗದ್ದುಗೆ ಮಠ’ಕ್ಕೆ ಸೇರಿದ ಸ್ವತ್ತು (ಶೇಷಾದ್ರಿಪುರ-ಸುಬೇದಾರ್ ಛತ್ರಂ ರಸ್ತೆಗೆ ಹೊಂದಿಕೊಂಡಿದ್ದ ಕಿನೋ ಚಿತ್ರಮಂದಿರ ಇದ್ದ ಜಾಗ) ಕೂಡ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಲಾಗಿದೆ ಎಂದು ಸಮಿತಿ ಪದಾಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಮಠ ಬೆಳೆದುಬಂದ ಬಗೆ?:

    ಶ್ರೀ ಮರಿಸ್ವಾಮಿ ಮಠವು 18ನೇ ಶತಮಾನದ ಆರಂಭದಲ್ಲಿ ಸ್ಥಾಪನೆ ಕಂಡಿದೆ. 1810ರಲ್ಲಿ ಕಲಬುರಗಿ ಜಿಲ್ಲೆಯಿಂದ ಆಗಮಿಸಿದ ಬಾಲ ಯತಿಯೊಬ್ಬರು ಕ್ರಮೇಣ ಪವಾಡಪುರುಷರಾಗಿ ಬೆಳೆದು ಮಠವನ್ನು ಬೆಳೆಸಿದರು. ಸ್ಥಳೀಯ ಜನರ ವಿಶ್ವಾಸ ಗಳಿಸುವ ಜತೆಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಕಾರಣ ಸುತ್ತಲಿನ ಜಿಲ್ಲೆಗಳಿಂದ ಭಕ್ತರು ಮಠಕ್ಕೆ ಬರಲಾರಂಭಿಸಿದ ಬಳಿಕ ಮರಿಸ್ವಾಮಿಯವರ ಹಿರಿಮೆ ಹೆಚ್ಚಿತು. ಕ್ರಮೇಣ ನಗರದಲ್ಲೇ 7 ಶಾಖಾ ಮಠಗಳು (ಬಾಕ್ಸ್ ನೋಡಿ) ಪ್ರಾರಂಭವಾದವು. ಮೈಸೂರು ರಾಜಮನೆತನದ ಮುಮ್ಮಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನ್ ಪೂರ್ಣಯ್ಯ ಕೂಡ ಮಠಕ್ಕೆ ಇನಾಂ ಜಮೀನು ಮಂಜೂರು ಮಾಡಿರುವುದಕ್ಕೆ ದಾಖಲಾತಿಗಳಿವೆ. 1843ರಲ್ಲಿ ಮರಿಸ್ವಾಮಿಯವರು ಏಕಕಾಲದಲ್ಲಿ ಬೆಂಗಳೂರು, ಬಳ್ಳಾರಿ ಹಾಗೂ ಭೈರವಪುರದಲ್ಲಿ ಸಮಾಧಿಸ್ತರಾದರು. ನಂತರ ಗುರುಪರಂಪರೆ ಮುಂದುವರಿಕೆ ಬಗ್ಗೆ ಸೂಕ್ತ ಮಾಹಿತಿ ಇಲ್ಲದಿದ್ದರೂ, ಮರಿಬಸಪ್ಪ ಸ್ವಾಮಿಗಳು 1913ರವರೆಗೆ ಮಠದ ಉಸ್ತುವಾರಿ ಹೊಂದಿದ್ದರು. ಇವರ ಕಾಲವಾದ ಬಳಿಕ ಗರಡಿ ಚಿಕ್ಕವೀರಪ್ಪ ಮಠದ ಪಾರುಪತ್ತೆಗಾರರಾದ ಬಳಿಕ ಸಾರ್ವಜನಿಕರಿಗೆ ಸಂಸ್ಕೃತ ಪಾಠಶಾಲೆ, ಹಾಸ್ಟೆಲ್ ಸೌಲಭ್ಯ ಒದಗಿಸಲಾಯಿತು. ಆಗ ಖರ್ಚು-ವೆಚ್ಚಗಳು ಏರಿದ ಕಾರಣ 1930ರಲ್ಲಿ ಶ್ರೀಶೈಲ ಪೀಠದ ಪರಂಪರೆಗೆ ಸೇರಿದ ಗೂಳೂರು ಮಠದ ಸುಪರ್ದಿಗೆ ವಹಿಸಲಾಯಿತು. ಇದಾಗಿ ಕೆಲ ವರ್ಷಗಳಲ್ಲೇ ಹಣದ ಮುಗಟ್ಟಿನಿಂದ ಗರಡಿ ಗುರಬಸಪ್ಪಗೆ ಮಠದ ಜವಾಬ್ದಾರಿ ವಹಿಸಲಾಯಿತು. ಅಲ್ಲಿಂದ ಇತ್ತೀಚಿನವರೆಗೂ ಇವರ ವಂಶಸ್ಥರೇ ಮಠದ ಉಸ್ತುವಾರಿ ವಹಿಸಿದ್ದರು. ಆದರೆ, 2015ರಲ್ಲಿ ಮಠವನ್ನು ಸ್ವಂತ ಆಸ್ತಿಯಾಗಿ ೋಷಿಸಿಕೊಂಡು ಖಾಸಗಿ ಬಿಲ್ಡರ್‌ಗೆ ಮಾರಾಟ ಮಾಡಲಾಯಿತು. ಹಣದ ವ್ಯವಹಾರ ಪೂರ್ಣಗೊಳ್ಳುವ ಮುನ್ನವೇ ಪರಭಾರೆ ವಿಷಯ ತಿಳಿದು ಭಕ್ತರು ಶ್ರೀ ಮರಿಸ್ವಾಮಿ ಮಠ ಹಿತರಕ್ಷಣಾ ಮತ್ತು ಜೀರ್ಣೋದ್ಧಾರ ಸಮಿತಿ ರಚಿಸಿ ಮಠ ಸಂರಕ್ಷಣೆಗೆ ಮುಂದಾಗಿದೆ ಎಂದು ಮಠದ ಹಾಲಿ ಉಸ್ತುವಾರಿ ಹೊತ್ತಿರುವ ಪದಾಧಿಕಾರಿಗಳು ತಿಳಿಸಿದ್ದಾರೆ.

    ಮರಿಸ್ವಾಮಿ ಮಠದ ಶಾಖಾ ಮಠಗಳು:

    ಮರಿಸ್ವಾಮಿ ಮಠ-2, ಅರಳೇಪೇಟೆ
    ನಿರ್ವಾಣಮ್ಮನ ಮಠ, ಮನವರ್ತಪೇಟೆ
    ಕುದುರೆಗದ್ದುಗೆ ಮಠ, ಶಂಕರಪುರ
    ಬುರುಗಲುದೇವರ ಮಠ, ಬಸಪ್ಪ ವೃತ್ತ
    ಗದ್ದುಗೆ ಮಠ, ಜಕ್ಕರಾಯನಕೆರೆ ದಂಡೆ
    ಬೂದಿಸ್ವಾಮಿ ಮಠ, ಚಾಮರಾಜಪೇಟೆ
    ಕಂಬಳಿಸ್ವಾಮಿ ಮಠ, ಹೊಸಹಳ್ಳಿ (ವಿಜಯನಗರ)

    ಬಾವಿ ಪುನಶ್ಚೇತನ ಆರಂಭ:

    ಮರಿಸ್ವಾಮಿ ಮಠ ಹಾಗೂ ಸುತ್ತಲಿನ ಪ್ರದೇಶದಲ್ಲಿ 12 ಕಲ್ಲಿನ ಬಾವಿಗಳಿದ್ದವು. ಅವುಗಳಲ್ಲಿ ಈಗ ಒಂದು ಮಾತ್ರ ಉಳಿದುಕೊಂಡಿದೆ. ಹಿಂದೊಮ್ಮೆ ಧರ್ಮರಾಯಸ್ವಾಮಿ ದೇಗುಲದ ಕರಗ ಹೊರುವವರು ಶಕ್ತ್ಯೋತ್ಸವದ ಹಿಂದಿನ ದಿನ ಈ ಮಠಕ್ಕೆ ಬಂದು ಇಲ್ಲಿನ ಬಾವಿಯ ನೀರಿನಿಂದ ಸ್ನಾನ ಮಾಡಿ ವಿಶೇಷ ಪೂಜೆಯನ್ನು ಸ್ವೀಕರಿಸುತ್ತಿದ್ದರು. ಈಗ ಬಾವಿಯು ಕಸ-ಕಡ್ಡಿಗಳಿಂದ ತುಂಬಿದ್ದು ಉಪಯೋಗಕ್ಕೆ ಬಾರದಂತಾಗಿದೆ. ಇದೀಗ ಈ ಮಾಹಿತಿ ಅರಿತು ಜೀಣೋದ್ಧಾರ ಸಮಿತಿಯು ಬಾವಿ ಸ್ವಚ್ಚಗೊಳಿಸಲು ಮುಂದಾಗಿದೆ. ಸುಮಾರು ನಾಲ್ಕೈದು ಟ್ರಾಕ್ಟರ್ ಲೋಡ್ ಮಣ್ಣು-ಕಸವನ್ನು ತೆಗೆದು ಹೊರಸಾಗಿಸಲಾಗುತ್ತಿದೆ. ಮುಂದಿನ ವರ್ಷ ಕರಗದ ಪೂಜಾರಿಯು ಈ ಬಾವಿಯ ನೀರಿನಿಂದ ಸ್ನಾನ ಮಾಡಿ ಮಠದ ವತಿಯಿಂದ ಪೂಜೆ ಸ್ವೀಕರಿಸುವ ಸಂಕಲ್ಪ ನಮ್ಮದಾಗಿದೆ ಎಂದು ಬಾವಿ ಸ್ವಚ್ಚತೆ ಹೊಣೆ ಹೊತ್ತಿರುವ ಕೆಮಿಸ್ಟ್ ಬ್ರಿಗೇಡ್ ಪದಾಧಿಕಾರಿ ಎಂ. ಪ್ರಸಾದ್ ಮೇದಪ್ಪ ಪ್ರತಿಕ್ರಿಯಿಸಿದ್ದಾರೆ.

    ಇತ್ತೀಚಿಗೆ ಮಠದ ನಿರ್ವಹಣೆ ಹೊತ್ತವರೇ ಇಲ್ಲಿನ ಸ್ವತ್ತನ್ನು ಸ್ವಂತ ಆಸ್ತಿಯಾಗಿ ಮಾರ್ಪಡಿಸಿ ಪರಭಾರೆಗೆ ಮುಂದಾಗಿದ್ದರು. ಇದಕ್ಕೆ ತಡೆ ಹಾಕಲು ಭಕ್ತರು ಜೀರ್ಣೋದ್ಧಾರ ಸಮಿತಿ ರಚಿಸಿ ಮಠ ಸಂರಕ್ಷಣೆ ಮಾಡುತ್ತಿದೆ. ಆಸ್ತಿ ಪರಭಾರೆ ಸಂಬಂಧ ಸಿವಿಲ್ ಕೋರ್ಟ್‌ನಲ್ಲಿ ವ್ಯಾಜ್ಯವಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಬಂದಿದೆ. ಮುಂದಿನ ದಿನಗಳಲ್ಲಿ ಮಠದ ಹಿಂದಿನ ಗತವೈಭವವನ್ನು ಮರಳಿಸಲು ಸಮುದಾಯದ ಸಹಕಾರದೊಂದಿಗೆ ಧಾರ್ಮಿಕ ಪರಂಪರೆ ಉಳಿಸಲು ನಿರ್ಧರಿಸಲಾಗಿದೆ.
    – ಎ.ಎಂ.ರಾಜಶೇಖರಯ್ಯ, ಮಠದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts