More

    ಕುಡ್ಲದಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜ ಸ್ತಂಭ, ನಿರ್ಮಾಣಕ್ಕೆ ಸ್ಮಾರ್ಟ್ ಪ್ರಸ್ತಾವನೆ, ಠಾಗೋರ್ ಪಾರ್ಕ್ ಸಹಿತ 5 ಕಡೆ ಸ್ಥಳ ಪರಿಶೀಲನೆ

    ಶ್ರವಣ್ ಕುಮಾರ್ ನಾಳ, ಮಂಗಳೂರು

    ಮಂಗಳೂರಿನಲ್ಲಿ ದೇಶಪ್ರೇಮವನ್ನು ಪ್ರತಿಧ್ವನಿಸುವ ನಿಟ್ಟಿನಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ಒಳಗೊಂಡ ದೇಶದಲ್ಲೇ ಅತೀ ಎತ್ತರದ ರಾಷ್ಟ್ರಧ್ವಜ ಸ್ತಂಭ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆ ಸಿದ್ಧಗೊಳಿಸಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವೆಡೆ ಸ್ಥಳ ಪರಿಶೀಲನೆಯನ್ನೂ ನಡೆಸಿದೆ.

    ಬೆಳಗಾವಿ ನಗರದ ಕೋಟೆಕೆರೆ ಆವರಣದಲ್ಲಿ (2018)ದೇಶದ ಅತೀ ಎತ್ತರದ (360.89 ಅಡಿ) ರಾಷ್ಟ್ರಧ್ವಜ ಸ್ತಂಭ ನಿರ್ಮಿಸಿ 80*120 ಚದರ ಅಡಿಯ ಅತಿ ದೊಡ್ಡ ರಾಷ್ಟ್ರಧ್ವಜ ಆರೋಹಣ ಮಾಡಲಾಗಿತ್ತು. ಇದು ದೇಶದ ಅತೀ ದೊಡ್ಡ ರಾಷ್ಟ್ರಧ್ವಜ ಸ್ತಂಭ. ಈ ಮೊದಲು ಜಾರ್ಖಂಡ್‌ನ ರಾಂಚಿಯಲ್ಲಿ 293 ಅಡಿ ಎತ್ತರ ಹಾಗೂ ಭಾರತ-ಪಾಕಿಸ್ತಾನದ ವಾಘಾ ಗಡಿ ಪ್ರದೇಶದಲ್ಲಿದ್ದ 360 ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಅತೀ ಎತ್ತರದ ಧ್ವಜಸ್ತಂಭ ಎನಿಸಿಕೊಂಡಿತ್ತು. ನಂತರ ಹೊಸಪೇಟೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸುತ್ತಿರುವ 405 ಅಡಿ ಧ್ವಜಸ್ತಂಭ ದೇಶದಲ್ಲಿಯೇ ಅತ್ಯಂತ ಎತ್ತರದ್ದು ಎಂಬ ದಾಖಲೆ ಪಡೆಯಿತು. ಆದರೆ ತಾಂತ್ರಿಕ ಕಾರಣದಿಂದ ರಾಷ್ಟ್ರಧ್ವಜ ಆರೋಹಣ ಸಾಧ್ಯವಾಗಿಲ್ಲ. ಅಮೃತ್‌ಸರ್ 360 ಅಡಿ, ಭಕ್ತಿಶಕ್ತಿ ಪ್ರಾಣ್ 351, ಗುವಾಹಟಿ 319.5, ಕೊಲ್ಹಾಪುರ 303, ರಾಂಚಿ 293, ಹೈದರಾಬಾದ್ 291, ರಾಯಪುರ 269, ಫರೀದಾಬಾದ್ 257, ಪುಣೆ 237, ಭೂಪಾಲ್ 235, ಮುಂಬೈ 222, ಕಟಕ್ 215, ನವದೆಹಲಿ 207, ಜೈಪುರದಲ್ಲಿ 206 ಅಡಿ ಎತ್ತರದ ಧ್ವಜಸ್ತಂಭಗಳಿವೆ.

    *ಪೂರ್ಣಪ್ರಮಾಣದ ಸ್ತಂಭ: ಈವರೆಗಿನ ಎಲ್ಲ ದೊಡ್ಡ ರಾಷ್ಟ್ರ ಧ್ವಜ ಸ್ತಂಭಗಳು 4 ಸಿಂಹ ಲಾಂಛನ ಹೊಂದಿಲ್ಲ. ಮಂಗಳೂರಿನಲ್ಲಿ ನಿರ್ಮಾಣಗೊಳ್ಳಲಿರುವ ರಾಷ್ಟ್ರ ಧ್ವಜ ಸ್ತಂಭ 4 ಸಿಂಹ ಲಾಂಛನ, ಅಶೋಕ ಚಕ್ರಗಳನ್ನೊಳಗೊಂಡ ಪೂರ್ಣ ಪ್ರಮಾಣದ ಅಶೋಕಸ್ತಂಭವಾಗಿ ಮೂಡಿಬರಲಿದೆ. 3 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಅಶೋಕಸ್ತಂಭ 410 ಅಡಿಗೂ ಹೆಚ್ಚು ಎತ್ತರದಲ್ಲಿ ಇರಲಿದ್ದು, ಈ ಯೋಜನೆಯ ಪ್ರಸ್ತಾವನೆ ಕೆಲವೇ ದಿನಗಳಲ್ಲಿ ಸ್ಮಾರ್ಟ್‌ಸಿಟಿ ಬೋರ್ಡ್‌ಗೆ ಸಲ್ಲಿಕೆಯಾಗಲಿದೆ.

    ಐದು ಕಡೆ ಸ್ಥಳ ಪರಿಶೀಲನೆ

    ಅತೀ ದೊಡ್ಡ ರಾಷ್ಟ್ರಧ್ವಜ ಸ್ತಂಭ ನಿರ್ಮಾಣ ಉದ್ದೇಶದಿಂದ ಮಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿಗಳ ತಂಡ ಕದ್ರಿ ಪಾರ್ಕ್, ಠಾಗೋರ್ ಪಾರ್ಕ್, ನೆಹರು ಮೈದಾನ, ಮಂಗಳಾ ಕ್ರೀಡಾಂಗಣ ಹಾಗೂ ಸರ್ಕೀಟ್‌ಹೌಸ್ ಬಳಿ ಸ್ಥಳ, ಭೂ ರಚನೆಯ ಪರಿಶೀಲನೆ ನಡೆಸಿದೆ. ರಾಷ್ಟ್ರಧ್ವಜ ಸ್ತಂಭ ನಿರ್ಮಾಣಕ್ಕೆ ಭೂಮಿಯ ರಚನೆ ಹಾಗೂ ಗಾಳಿಯ ಚಲನೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ ಬಳಿಕ ಕದ್ರಿ ಪಾರ್ಕ್ ಅಥವಾ ಠಾಗೋರ್ ಪಾರ್ಕ್ ಅಂತಿಮವಾಗುವ ಸಾಧ್ಯತೆ ಹೆಚ್ಚು. ಸ್ಮಾರ್ಟ್‌ಸಿಟಿ ಬೋರ್ಡ್ ಈ ಯೋಜನೆಯನ್ನು ಅಂತಿಮಗೊಳಿಸಿದ ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ.

    ಮಂಗಳೂರಿನಲ್ಲಿ ಅತೀ ದೊಡ್ಡ ರಾಷ್ಟ್ರಧ್ವಜ ಸ್ತಂಭ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿಯಿಂದ ಯೋಜನೆ ಪ್ರಸ್ತಾವನೆಯಿದೆ. ನಗರದ ಹಲವಡೆ ಸ್ಥಳ ಪರಿಶೀಲನೆಯನ್ನೂ ನಡೆಸಲಾಗಿದೆ. ಕದ್ರಿ ಪಾರ್ಕ್‌ನಲ್ಲಿ ವಿಶಾಲ ಜಾಗ ಇದೆ. ಎತ್ತರ ಪ್ರದೇಶವಾದ ಠಾಗೋರ್ ಪಾರ್ಕ್ ಕೂಡ ಸೂಕ್ತ. ಇವೆರಡರಲ್ಲಿ ಒಂದು ಅಂತಿಮವಾಗುವ ಸಾಧ್ಯತೆ ಇದೆ.

    ಅರುಣ್ ಪ್ರಭಾ, ಕೆ.ಎಸ್, ಮಹಾ ಪ್ರಬಂಧಕ, ಸ್ಮಾರ್ಟ್ ಸಿಟಿ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts