

Poop Suitcase: ಯುಕ್ರೇನ್ ಮೇಲಿನ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ಚರ್ಚಿಸಲು ಅಲಾಸ್ಕಾಗೆ ಆ.15ರಂದು ಆಗಮಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಹಲವಾರು ಪ್ರಮುಖ ವಿಚಾರಗಳನ್ನೇ ಚರ್ಚಿಸಿದರು. ಈ ವೇಳೆ ಪುಟಿನ್ ಅವರ ಬಾಡಿಗಾರ್ಡ್ಸ್, ವಿಶೇಷ ಪೂಪ್ ಸೂಟ್‌ಕೇಸ್ ಅನ್ನು ಕೊಂಡೊಯ್ದ ದೃಶ್ಯ ಇದೀಗ ಹಲವರ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಈ ಸೂಟ್‌ಕೇಸ್ ಅವಶ್ಯಕತೆ ಏನು? ಅಸಲಿಗೆ ಇದರಲ್ಲಿ ಸಂಗ್ರಹಿಸುವುದಾದರೂ ಏನು? ಎಂಬ ಪ್ರಶ್ನೆಗೆ ಹೀಗಿದೆ ನೋಡಿ ಅಚ್ಚರಿ ಉತ್ತರ.
'ಎನ್ಡಿಟಿವಿ' ವರದಿ ಪ್ರಕಾರ, ಅಲಾಸ್ಕಾ ಪ್ರವಾಸದಲ್ಲಿದ್ದ ಪುಟಿನ್ ಅವರೊಂದಿಗೆ ಆಗಮಿಸಿದ್ದ ಅವರ ಬಾಡಿಗಾರ್ಡ್ಸ್, ಈ ಪೂಪ್ ಸೂಟ್‌ಕೇಸ್ ಅನ್ನು ತಮ್ಮೊಂದಿಗೆಯೇ ಕೊಂಡೊಯ್ದರು. ಇದು ಹಲವರಿಗೆ ಅಸಾಮಾನ್ಯ ಅನಿಸಿದ್ದು, ಸಾಕಷ್ಟು ಅನುಮಾನವನ್ನು ಹುಟ್ಟುಹಾಕಿತು. ಆದರೆ, ಇದು ರಷ್ಯಾಕ್ಕೆ ನಿರ್ಣಾಯಕವಾಗಿದೆ. ಪುಟಿನ್ ಅಲಾಸ್ಕಾದ ಶೌಚಾಲಯಗಳಲ್ಲಿ ಮಲವಿಸರ್ಜನೆ ಮಾಡಿದರೆ, ಅದನ್ನು ಶತ್ರು ದೇಶಗಳು ಸಂಗ್ರಹಿಸಬಹುದು. ಇದರಿಂದ, ತಮ್ಮ ನಾಯಕರ ಅನಾರೋಗ್ಯ ಸಮಸ್ಯೆಗಳನ್ನು ತಿಳಿಯಲು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಬಹುದು ಎಂಬ ನಿಟ್ಟಿನಲ್ಲಿ ಪುಟಿನ್ರ ಬಾಡಿಗಾರ್ಡ್ಗಳು ಅವರು ಹೊರದೇಶಕ್ಕೆ ಹೋದಲೆಲ್ಲ ಹೀಗೆ ಮಾಡ್ತಾರೆ ಎಂದು ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.
"ಅಸಲಿಗೆ ತಮ್ಮೊಂದಿಗೆ ಪೂಪ್ ಸೂಟ್‌ಕೇಸ್ ಕೊಂಡೊಯ್ಯುವ ಬಾಡಿಗಾರ್ಡ್ಗಳು, ಪುಟಿನ್ರ ಮಲವನ್ನು ಸಂಗ್ರಹಿಸಿ ಅದನ್ನು ರಷ್ಯಾಕ್ಕೆ ಹಿಂತಿರುಗಿಸುತ್ತಾರೆ" ಎಂದು ವರದಿ ಹೇಳಿದೆ. ಈ ಮಾಹಿತಿಯನ್ನು ತನಿಖಾ ಪತ್ರಕರ್ತರಾದ ರೆಗಿಸ್ ಗೆಂಟೆ ಮತ್ತು ಮಿಖಾಯಿಲ್ ರೂಬಿನ್ ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದಾರೆ. ಮಾಹಿತಿ ಪ್ರಕಾರ, ರಷ್ಯಾದ ಅಧ್ಯಕ್ಷರ ಫೆಡರಲ್ ಪ್ರೊಟೆಕ್ಷನ್ ಸರ್ವಿಸ್ (ಎಫ್‌ಪಿಎಸ್) ಸದಸ್ಯರು ಅವರ ಮಲವನ್ನು ವಿಶೇಷ ಚೀಲಗಳಲ್ಲಿ ಸಂಗ್ರಹಿಸಿ, ಪ್ರತ್ಯೇಕ ಸೂಟ್ಕೇಸ್ಗಳಲ್ಲಿ ಸಾಗಿಸುತ್ತಾರೆ ಎನ್ನಲಾಗಿದೆ.
'ದಿ ಎಕ್ಸ್‌ಪ್ರೆಸ್' ಪ್ರಕಾರ, ಈ ಪದ್ಧತಿ ಇದೇ ಮೊದಲಲ್ಲ! ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂಬುದು ಗಮನಾರ್ಹ. 2017ರಲ್ಲಿ ಪುಟಿನ್ ಫ್ರಾನ್ಸ್‌ಗೆ ಭೇಟಿ ಕೊಟ್ಟ ಸಮಯದಲ್ಲಿಯೂ ಇದೇ ವಿಧಾನವನ್ನು ಅನುಸರಿಸಲಾಯಿತು. ಮಾಜಿ ಬಿಬಿಸಿ ಪತ್ರಕರ್ತೆ ಫರಿದಾ ರುಸ್ತಮೋವಾ ಅವರ ಹೇಳಿಕೆ ಪ್ರಕಾರ, ವಿಯೆನ್ನಾಕ್ಕೆ ಭೇಟಿ ನೀಡಿದ ಸಮಯದಲ್ಲಿ, ಪೋರ್ಟಬಲ್ ಶೌಚಾಲಯವನ್ನು ಬಳಸುವಾಗ ಪುಟಿನ್ ಕೂಡ ಇದೇ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಂತೆ.
ಈ ಹಿಂದಿನಿಂದಲೂ ಪುಟಿನ್ ಅವರಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿವೆ ಎಂಬ ಊಹಾಪೋಹಗಳಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಕಝಕ್ ರಾಜಧಾನಿ ಅಸ್ತಾನಾದಲ್ಲಿ ಪತ್ರಿಕಾಗೋಷ್ಠಿಯ ಸಮಯದಲ್ಲಿ ಪುಟಿನ್ ಅವರ ಕಾಲುಗಳು ನಡುಗುತ್ತಿರುವುದನ್ನು ಗಮನಿಸಿದ ಹಲವರು ಕಳವಳ ವ್ಯಕ್ತಪಡಿಸಿದ್ದರು. 'ದಿ ಎಕ್ಸ್‌ಪ್ರೆಸ್' ಪ್ರಕಾರ, ಪುಟಿನ್ ಈ ಹಿಂದೆ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಅವರ ಅಧಿಕೃತ ನಿವಾಸದಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕೆಲವು ಹೇಳಿಕೆಗಳಿವೆ ಎಂದಿದೆ,(ಏಜೆನ್ಸೀಸ್).