ವಿಡಿಯೋಗಳು ಸುಳ್ಳು ಹೇಳ್ತವಾ? ಕಂಗನಾಗೆ ಪೂಜಾ ಪ್ರಶ್ನೆ

Final - Pooja and Kangana
Published on

ಬಾಲಿವುಡ್‍ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಚರ್ಚೆ ಸದ್ಯಕ್ಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಈ ಮುನ್ನ ಬೇರೆಯವರು ಈ ವಿಷಯದ ಬಗ್ಗೆ ಸಾಕಷ್ಟು ಮಾತಾಡಿದ್ದರು. ಇದೀಗ ಪೂಜಾ ಭಟ್ ಮತ್ತು ಕಂಗನಾ ರಣಾವತ್ ನಡುವೆ, ಇದೇ ವಿಷಯವಾಗಿ ವಾರ್ ಶುರುವಾಗಿದೆ.

ಅದಕ್ಕೆ ಕಾರಣ, ಪೂಜಾ ಭಟ್ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ನೆಪೋಟಿಸಂ ಬಗ್ಗೆ ಒಂದಿಷ್ಟು ಬರೆದುಕೊಂಡಿದ್ದರು. ಕಂಗನಾ ಅವರನ್ನು ಚಿತ್ರರಂಗಕ್ಕೆ `ಗ್ಯಾಂಗ್‍ಸ್ಟರ್' ಮೂಲಕ ಪರಿಚಯಿಸಿದ್ದು ತಮ್ಮ ತಂದೆ ಮಹೇಶ್ ಭಟ್ ಮತ್ತು ಚಿಕ್ಕಪ್ಪ ಮುಕೇಶ್ ಭಟ್. ಬಹುಶಃ ಇಡೀ ಚಿತ್ರರಂಗದಲ್ಲಿ ಹೊಸಬರನ್ನು ಯಾರಾದರೂ ಅತೀ ಹೆಚ್ಚು ಪರಿಚಯಿಸಿದ್ದಾರೆ ಎಂದರೆ, ಅದು ವಿಶೇಶ್ ಫಿಲಂಸ್ ಎಂದು ಅಭಿಪ್ರಾಯಪಟ್ಟಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ ಅವರ ಮಾಧ್ಯಮ ತಂಡ, `ಯಾರಾದರೂ ಹೊಸಬರನ್ನು ಪರಿಚಯಿಸುತ್ತಾರೆ ಎಂದರೆ, ಅದಕ್ಕೆ ಕಾರಣ ಹಣ ಉಳಿಸುವುದು. ಹೊಸಬರಿಗೆ ಹೆಚ್ಚು ಕೊಡುವ ಅವಶ್ಯಕತೆ ಇಲ್ಲ. ಹಾಗೆಯೇ ಅವರು ಹೇಳಿದಂತೆ ಕೇಳಿಕೊಂಡು ಬಿದ್ದಿರುತ್ತಾರೆ. ಅದೇ ಕಾರಣಕ್ಕೆ, ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ. ಮೇಲಾಗಿ ಕಂಗನಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ನಿರ್ದೇಶಕ ಅನುರಾಗ್ ಬಸು ಹೊರತು, ವಿಶೇಶ್ ಫಿಲಂಸ್ ಅಲ್ಲ' ಎಂಬರ್ಥದಲ್ಲಿ ಉತ್ತರ ನೀಡಿತ್ತು.

ಈಗ ಕಂಗನಾ ಅವರ ತಂಡದ ಹೇಳಿಕೆಗೆ ಪೂಜಾ ಭಟ್ ಪ್ರತ್ಯುತ್ತರ ನೀಡಿದ್ದಾರೆ. 2006ರಲ್ಲಿ ನಡೆದ ಒಂದು ಪ್ರಶಸ್ತಿ ಪ್ರದಾನ ಸಮಾರಂಭದ ವಿಡಿಯೋ ಹಂಚಿಕೊಂಡಿದ್ದಾರೆ. `ಗ್ಯಾಂಗ್‍ಸ್ಟರ್' ಚಿತ್ರದಲ್ಲಿನ ಅಭಿನಯಕ್ಕಾಗಿ ಕಂಗನಾಗೆ ಫಿಲಂಫೇರ್‍ನಿಂದ ಬೆಸ್ಟ್ ಡೆಬ್ಯು ಅವಾರ್ಡ್ ಸಿಕ್ಕಿತ್ತು. ಈ ಸಮಾರಂಭದಲ್ಲಿ ಕಂಗನಾ, ಮಹೇಶ್ ಹಾಗೂ ಮುಕೇಶ್ ಭಟ್ ಅವರನ್ನು ಹಾಡಿ ಹೊಗಳಿದ್ದರು. ತಮ್ಮಂತಹ ಹೊಸಬರಿಗೆ ಅವಕಾಶ ನೀಡಿದ್ದಿಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ವೇದಿಕೆಗೆ ಹೋಗುವ ಸಂದರ್ಭದಲ್ಲಿ ಮಹೇಶ್ ಭಟ್ ಅವರನ್ನು ತಬ್ಬಿಕೊಂಡು ಕೃತಜ್ಞತೆ ಹೇಳಿದ್ದರು.

ಈಗ ಆ ಹಳೆಯ ವಿಡಿಯೋವನ್ನು ಪೂಜಾ ಹೊಸದಾಗಿ ಬಿಡುಗಡೆ ಮಾಡಿದ್ದಾರೆ. ಕಂಗನಾ ಹಳೆಯದನ್ನು ಮರೆತು, ಸುಳ್ಳು ಹೇಳುತ್ತಿರಬಹುದು. ಆದರೆ, ವಿಡಿಯೋಗಳು ಸುಳ್ಳು ಹೇಳುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. `ನನಗೆ ಸುಮ್ಮನೆ ಏನೇನೋ ಮಾತಾಡಿ ಅಭ್ಯಾಸವಿಲ್ಲ. ಸಾಕ್ಷಿ ಸಮೇತ ಮಾತನಾಡುವುದಕ್ಕೆ ಇಷ್ಟಪಡುತ್ತೇನೆ' ಎಂದು ಅವರು ಹೇಳುವುದರ ಜತೆಗೆ, ವಿಡಿಯೋ ತುಣುಕನ್ನು ಸಹ ಪೋಸ್ಟ್ ಮಾಡಿದ್ದಾರೆ.

ಪೂಜಾ ಭಟ್ ಅವರ ಈ ಪೋಸ್ಟ್‍ನಿಂದ ಕಂಗನಾ ಸಹಜವಾಗಿಯೇ ಕೆರಳಿರುತ್ತಾರೆ. ಸದ್ಯದಲ್ಲೇ ಇದಕ್ಕೆ ಏನಾದರೊಂದು ಪ್ರತಿಕ್ರಿಯೆ ಕೊಟ್ಟೇ ಕೊಡುತ್ತಾರೆ ಎಂದು ಬಾಲಿವುಡ್ ಮಂದಿ ಕಾಯುತ್ತಲೇ ಇದ್ದಾರೆ. ಕಂಗನಾ ಮುಂದಿನ ಹೆಜ್ಜೆ ಏನಿರಬಹುದು? ವೇಯ್ಟ್ ಆ್ಯಂಡ್ ಸೀ ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net