ಪ್ರಭಾಸ್ ಹೊಸ ಚಿತ್ರದ ಪೋಸ್ಟರ್ ಹೀಗಿದೆ ನೋಡಿ ...

Final - Radhe Shyam
Published on

ಪ್ರಭಾಸ್ ಅಭಿನಯದ `ರಾಧೇ ಶ್ಯಾಮ್' ಚಿತ್ರದ ಚಿತ್ರೀಕರಣ ಲಾಕ್‍ಡೌನ್‍ಗೂ ಮುನ್ನವೇ ಪ್ರಾರಂಭವಾಗಿತ್ತು. ಇನ್ನೇನು ಚಿತ್ರೀಕರಣ ಫುಲ್ ಜೂಮ್‍ನಲ್ಲಿ ಮುಗಿದು, ಚಿತ್ರ ಇದೇ ವರ್ಷ ಬಿಡುಗಡೆಯಾಗಿ ಬಿಡುತ್ತದೆ ಎಂದು ಅವರ ಅಭಿಮಾನಿಗಳೆಲ್ಲಾ ಖುಷಿಯಾಗಿರುವಾಗಲೇ, ಲಾಕ್‍ಡೌನ್ ಬಂತು.

ಆಗ ನಿಂತ ಚಿತ್ರೀಕರಣ, ಇನ್ನೂ ಶುರುವಾಗಿಲ್ಲ. ಅಷ್ಟೇ ಅಲ್ಲ, ಯಾವಾಗ ಶುರುವಾಗುತ್ತದೆ ಎಂದೂ ಗೊತ್ತಿಲ್ಲ. ಚಿತ್ರೀಕರಣ ಶುರುವಾದರೂ ಈ ವರ್ಷ ಚಿತ್ರ ಬಿಡುಗಡೆಯಾಗುತ್ತದೆ ಎಂದು ಪ್ರಭಾಸ್ ಅವರ ಅಭಿಮಾನಿಗಳಿಗೆ ನಂಬಿಕೆ ಇಲ್ಲ. ಇನ್ನೇನಿದ್ದರೂ ಚಿತ್ರ ಮುಂದಿನ ವರ್ಷವೇ ಗ್ಯಾರಂಟಿ ಎಂದು ಎಲ್ಲರೂ ಬೇಸರದಲ್ಲಿರುವಾಗಲೇ, ಚಿತ್ರತಂಡದವರು ಸ್ವಲ್ಪ ಮಟ್ಟಿಗೆ ಅಭಿಮಾನಿಗಳ ಮನಸ್ಸು ಖುಷಿಪಡಿಸಿದ್ದಾರೆ.

ಹೇಗೆ ಎನ್ನುತ್ತೀರಾ? ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ. ಚಿತ್ರ ಪ್ರಾರಂಭವಾಗಿ ಹಲವು ತಿಂಗಳುಗಳಾದರೂ, ಚಿತ್ರ ಹೇಗಿರುತ್ತದೆ ಎಂದು ಚಿತ್ರತಂಡದವರು ಹೇಳಿರಲಿಲ್ಲ. ಅಷ್ಟೇ ಅಲ್ಲ, ಒಂದೇ ಒಂದು ಝಲಕ್ ಸಹ ಬಿಟ್ಟಿರಲಿಲ್ಲ. ಇದೀಗ ಚಿತ್ರತಂಡದವರು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಈ ರೊಮ್ಯಾಂಟಿಕ್ ಪೋಸ್ಟರ್‍ನಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಕೈಹಿಡಿದು ಡ್ಯಾನ್ಸ್ ಮಾಡುತ್ತಿರುವ ಭಂಗಿ ಇದೆ. ಸಾಮಾನ್ಯವಾಗಿ ಪ್ರಭಾಸ್ ಚಿತ್ರದ ಪೋಸ್ಟರ್‍ಗಳೆಂದರೆ, ಅವರು ರಗ್ಗಡ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದೇ ಮೊದಲ ಬಾರಿಗೆ ಅವರನ್ನು ರೊಮ್ಯಾಂಟಿಕ್ ಲುಕ್‍ನಲ್ಲಿ ನೋಡಿ ಅವರ ಅಭಿಮಾನಿಗಳು ಸಹ ಬಹಳ ಖುಷಿಯಾಗಿದ್ದಾರೆ.

ಈ ಹಿಂದೆ `ಜಿಲ್' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ರಾಧಾಕೃಷ್ಣ ಕುಮಾರ್, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ವಂಶಿ, ಪ್ರಮೋದ್ ಮತ್ತು ಪ್ರಸೀದಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಎಲ್ಲಾ ಸರಿ, `ರಾಧೇ ಶ್ಯಾಮ್' ಚಿತ್ರದ ಕಥೆ ಏನು? ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಆದರೆ, ಚಿತ್ರತಂಡದವರು ಈ ವಿಷಯವಾಗಿ ಇದುವರೆಗೂ ಯಾವುದೇ ವಿಷಯವನ್ನೂ ಬಹಿರಂಗಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಇದೊಂದು ಪ್ರೀರಿಯಡ್ ಚಿತ್ರವಂತೆ. ಈ ಚಿತ್ರದಲ್ಲಿ ಪ್ರಭಾಸ್ ಅವರ ಪಾತ್ರ ಏನಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಆದರೆ, ಉತ್ತರಕ್ಕಾಗಿ ಮುಂದಿನ ವರ್ಷದವರೆಗೂ ಕಾಯದೇ ಬೇರೆ ದಾರಿ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net