

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್‍ನಲ್ಲಿ ಸ್ವಜನಪಕ್ಷಪಾತದ ಕುರಿತಾಗಿ ಸಾಕಷ್ಟು ಚರ್ಚೆಗಳಾಗಿದ್ದು, ಈ ಪೈಕಿ ಕರಣ್ ಜೋಹರ್ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಬಾಲಿವುಡ್‍ನಲ್ಲಿ ಕರಣ್ ನೆಪೋಟಿಸಂನ ಪ್ರೋತ್ಸಾಹಿಸುತ್ತಿದ್ದು, ಸ್ಟಾರ್ ಮಕ್ಕಳಿಗೆ ಮಾತ್ರ ಮಣೆ ಹಾಕುತ್ತಾರೆ ಎಂಬ ಆರೋಪವಿದೆ. ಅಷ್ಟೇ ಅಲ್ಲ, ಇದೇ ವಿಷಯವಾಗಿ ಅವರು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಟ್ರೋಲ್ ಆಗುತ್ತಿದ್ದಾರೆ.
ಕರಣ್ ಜೋಹರ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟು ಟ್ರೋಲ್ ಮಾಡಲಾಗುತ್ತಿದೆ ಎಂದರೆ, ಇದರಿಂದ ಅವರು ಬೇಸತ್ತು ಖಿನ್ನತೆಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಇದೆಲ್ಲದರಿಂದ ಬೇಸತ್ತಿರುವ ಅವರು, ಯಾರ ಜತೆಗೂ ಮಾತನಾಡುತ್ತಿಲ್ಲ ಮತ್ತು ಇದೇ ವಿಷಯವಾಗಿ ಕೊರಗಿ ಅಳುತ್ತಿದ್ದಾರೆ ಎಂದು ಅವರ ಆಪ್ತರು ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ.
ಪರಿಸ್ಥಿತಿ ಹೀಗಿರುವಾಗ, ಬುಧವಾರ ನಟಿ ನೀತು ಕಪೂರ್ (ರಣಬೀರ್ ಕಪೂರ್ ಅವರ ತಾಯಿ) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ರಣಬೀರ್ ಒಂದು ಸಣ್ಣ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಕರಣ್ ಸಹ ಭಾಗಿಯಾಗಿದ್ದು, ನಗುಮೊಗದಿಂದ ಕಾಣಿಸಿಕೊಂಡಿದ್ದಾರೆ. ಯಾವಾಗ ಕರಣ್, ನೀತು ಹುಟ್ಟುಹಬ್ಬದಲ್ಲಿ ಕಾಣಿಸಿಕೊಂಡರೋ, ಆ ನಂತರ ಇನ್ನಷ್ಟು ಟ್ರೋಲ್‍ಗೆ ಒಳಗಾಗಿದ್ದಾರೆ.
`ಕರಣ್ ಜೋಹರ್ ಖಿನ್ನತೆಗೆ ಒಳಗಾಗಿದ್ದಾರೆ, ಮನೆಯಲ್ಲಿ ಕೂತು ಅಳುತ್ತಿದ್ದಾರೆ ಎಂಬಂತಹ ಸುದ್ದಿಗಳನ್ನು ಕೇಳಿತ್ತಿದ್ದೇವೆ. ಆದರೆ, ಕರಣ್ ಈ ಫೋಟೋಗಳಲ್ಲಿ ಅಳುತ್ತಿರುವುದು ಕಾಣುತ್ತಲೇ ಇಲ್ಲವಲ್ಲಾ?' ಎಂದು ಕೆಲವರು ಪ್ರಶ್ನಿಸಿದ್ದಾರೆ. `ಕರಣ್‍ಗೆ ಮಾತಾಡುವುದಕ್ಕೂ ಆಗುತ್ತಿಲ್ಲ ಎಂದು ಆಪ್ತರು ಹೇಳುತ್ತಿರುವಾಗ, ಅವರು ಮಾತ್ರ ಪಾರ್ಟಿ ಮಾಡಿಕೊಂಡು ಮಜಾ ಮಾಡುತ್ತಿದ್ದಾರೆ' ಎಂದು ಇನ್ನೂ ಕೆಲವರು ಕಾಲೆಳೆದಿದ್ದಾರೆ. `ಕರಣ್ ಮುಖದಲ್ಲಿ ಸ್ವಲ್ಪವೂ ಪಶ್ಚಾತ್ತಾಮ ಪಾಣಿಸುತ್ತಿಲ್ಲ. ಇದು ಕರಣ್ ಅವರಿಂದ ಇನ್ನೊಂದು ಚೀಪ್ ಆದ ಸ್ಟಂಟ್' ಎಂದು ಇನ್ನೊಂದಿಷ್ಟು ಜನ ಝಾಡಿಸಿದ್ದಾರೆ.
ಒಟ್ಟಿನಲ್ಲಿ ಕರಣ್ ಒಂದಲ್ಲಾ ಒಂದು ಕಾರಣಕ್ಕೆ ಟ್ರೋಲ್ ಆಗುತ್ತಲೇ ಇದ್ದಾರೆ. ಇಷ್ಟು ದಿನ ಮನೆಯಲ್ಲಿ ಸುಮ್ಮನೇ ಇದ್ದ ಕರಣ್, ಇದೀಗ ನೀತೂ ಕಪೂರ್ ಅವರ ಹುಟ್ಟುಹಬ್ಬದ ಪಾರ್ಟಿಗೆ ಹೋಗಿ ಇನ್ನಷ್ಟು ಕೆಟ್ಟವರಾಗಿದ್ದಾರೆ. ಇದಕ್ಕೆಲ್ಲಾ ಅವರಿಂದ ಏನು ಸಮಜಾಯಿಷಿ ಬರುತ್ತದೋ ಗೊತ್ತಿಲ್ಲ.