ಉತ್ಸಾಹಿ ಯುವಕರ ಬೆನ್ನಿಗೆ ನಿಲ್ಲಲು ರೆಡಿಯಾದ್ರಾ ರಾಜಮೌಳಿ!

raj
Published on

ಲಾಕ್​ಡೌನ್​ನಿಂದಾಗಿ ಮನರಂಜನಾ ಕ್ಷೇತ್ರದಲ್ಲಿ ಬಹುದೊಡ್ಡ ಬೆಳವಣಿಗೆ ಆಗಿದೆಯೆಂದರೆ ಅದು ಓಟಿಟಿ ಕ್ಷೇತ್ರದಲ್ಲಿ ಮಾತ್ರ. ಇಷ್ಟು ದಿನ ಅದೊಂದು ವೇದಿಕೆ ಎಂಬುದಷ್ಟೇ ಎಲ್ಲರಿಗೂ ಗೊತ್ತಿತ್ತು. ಆದರೆ, ಅದರ ಬಳಕೆ ಬಗ್ಗೆ ಅಷ್ಟಾಗಿ ಯಾರೂ ತಿಳಿದುಕೊಂಡಿರಲಿಲ್ಲ. ಶೂಟಿಂಗ್​ ಸ್ಥಗಿತ, ಸದ್ಯಕ್ಕೆ ಸಿನಿಮಾ ಇಲ್ಲ ಎಂದಾಗ ಚಿತ್ರ ನಿರ್ಮಾಪಕರು ಓಟಿಟಿ ಬಗ್ಗೆಯೇ ಹೆಚ್ಚು ಮುಖಮಾಡಿದರು. ಸದ್ಯಕ್ಕೆ ಹೆಚ್ಚೆಚ್ಚು ಜನಪ್ರಿಯವಾಗಿ ಮುನ್ನುಗ್ಗುತ್ತಿದೆ. ಇಷ್ಟೆಲ್ಲ ಬೆಳವಣಿಗೆಯ ನಡುವೆಯೇ ಖ್ಯಾತ ನಿರ್ದೇಶಕ ರಾಜಮೌಳಿ ಸಹ ಓಟಿಟಿ ವೇದಿಕೆಯತ್ತ ದೃಷ್ಟಿ ಹಾಯಿಸಿದ್ದಾರೆ.

ಸದ್ಯ, ಆರ್​ಆರ್​ಆರ್​ ಸಿನಿಮಾ ಕೆಲಸಗಳ ಜತೆಗೆ ಮಹೇಶ್​ ಬಾಬು ಚಿತ್ರದ ಸ್ಕ್ರಿಪ್ಟಿಂಗ್​ ಕೆಲಸಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಅವುಗಳ ಜತೆಯಲ್ಲಿಯೇ ಇದೀಗ ಓಟಿಟಿಯತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಾಗಂತ ಅಲ್ಲಿಯೂ ನಿರ್ದೇಶನ ಮಾಡಲಿದ್ದಾರಾ ರಾಜಮೌಳಿ ಎಂದುಕೊಳ್ಳಬೇಡಿ. ಬದಲಿಗೆ ಓಟಿಟಿ ವೇದಿಕೆಯಲ್ಲಿ ಒಂದಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದೆ ಬಂದಿದ್ದಾರೆ.

ಇದರಲ್ಲಿ ಬಹುತೇಕ ಪ್ರತಿಭಾನ್ವಿತರಿಗೆ ಅವಕಾಶ ನೀಡುವ ಯೋಜನೆ ಹಾಕಿರುವ ರಾಜಮೌಳಿ, ಈಗಾಗಲೇ ಒಂದಷ್ಟು ಕಥೆಗಳನ್ನು ಕೇಳಿದ್ದಾರೆ. ಅದರಲ್ಲಿ ಒಂದಷ್ಟು ಅಂತಿಮ ಮಾಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಕನ್ನಡದಲ್ಲಿ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ತಮ್ಮ ಪಿಆರ್​ಕೆ ಪ್ರೊಡಕ್ಷನ್​ ಕಂಪನಿಯ ಮೂಲಕ ಹೊಸಬರನ್ನು ಆಹ್ವಾನಿಸಿ ಸಿನಿಮಾ ಸಿದ್ಧಪಡಿಸುತ್ತಿದ್ದಾರೆ. ಇದೀಗ ಅದೇ ಮಾದರಿಯಲ್ಲಿ ರಾಜಮೌಳಿ ಸಹ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net