ಈ ಒಂದು ಕಾರಣಕ್ಕಾ ಸುಶೀಲ್​ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದು?

Susheel
Published on

ಕಿರುತೆರೆ ನಟ ಸುಶೀಲ್​ ಗೌಡ ನೇಣಿಗೆ ಶರಣಾದ ಬೆನ್ನಲ್ಲೇ, ಅವರ ಸಾವಿಗೆ ಕಾರಣವೇನು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದ್ದೆ. ಸಿರೀಯಲ್​ಗಳಲ್ಲಿ ನಟನೆ, ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ, ಜೀವನ ನಿರ್ವಹಣೆಗೆ ಜಿಮ್​ ತರಬೇತುದಾರ ಕೆಲಸ ಇನ್ನೇನು ಬೇಕಿತ್ತು ಈ ನಟನಿಗೆ ಎಂದು ಸಾಕಷ್ಟು ಮಂದಿ ಅನಿಸಿದ್ದನ್ನು ಹೇಳುತ್ತಿದ್ದಾರೆ. ಆದರೆ, ಕಳೆದ ಮೂರು ತಿಂಗಳಿಂದ ಒಂದಷ್ಟು ನೋವು ಸುಶೀಲ್​ ಅವರನ್ನು ಬಾಧಿಸಿತ್ತಂತೆ. ಜೀವನವೇ ಬೇಸರ ಎನ್ನುವಷ್ಟರ ಮಟ್ಟಿಗೆ ನೊಂದಿದ್ದರಂತೆ.

ಸುಶೀಲ್​ ಸಿನಿಮಾ ಮತ್ತು ಕಿರುತೆರೆ ನಟನೆ ಜತೆಗೆ ಜಿಮ್​ ಟ್ರೇನರ್​ ಆಗಿ ಕೆಲಸ ಮಾಡುತ್ತಿದ್ದರು. ಹೀಗಿರುವಾಗಲೇ ಆರ್ಥಿಕವಾಗಿಯೂ ಸುಶೀಲ್​ ಸಂಕಷ್ಟದಲ್ಲಿದ್ದರಂತೆ. ಆ ಒಂದು ಕಾರಣದಿಂದಲೇ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಶೀಲ್​ ಆಪ್ತವಲಯ ಹೇಳಿಕೊಂಡಿದೆ.

ಯುವನಟ ಸುಶೀಲ್​ ಇದೀಗ ತಾನೇ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಒಳ್ಳೊಳ್ಳೆ ಅವಕಾಶಗಳೂ ಅವರನ್ನು ಅರಸಿ ಬರುತ್ತಿದ್ದವು. ಅದರಂತೆ, ದುನಿಯಾ ವಿಜಯ್​ ನಿರ್ದೇಶನದ ‘ಸಲಗ’ ಚಿತ್ರದಲ್ಲಿ ಕಟ್ಟುಮಸ್ತಾದ ಪೊಲೀಸ್​ ಪಾತ್ರದ ಹುಡುಕಾಟದಲ್ಲಿದ್ದ ವಿಜಯ್​ಗೆ, ಮೊದಲು ಕಾಣಿಸಿದ್ದು ಸುಶೀಲ್​. ಕರೆದು ಅವರಿಂದ ಆ ಪಾತ್ರ ಮಾಡಿಸಿದ್ದರು. ಹೀಗಿರುವಾಗಲೇ ಕರೊನಾ ಲಾಕ್​ಡೌನ್​ ಶುರುವಾದ ಬಳಿಕ ಸಿನಿಮಾರಂಗ ಸ್ತಬ್ಧವಾಯಿತು. ಜಿಮ್​ಗಳು ತೆರೆಯದಂತೆ ಕಟ್ಟಪ್ಪಣೆ ವಿಧಿಸಲಾಯಿತು. ಇದೆಲ್ಲವೂ ಸುಶೀಲ್​ ಅವರನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗಿಸಿದವು.

ಇತ್ತೀಚಿನ ಕೆಲ ದಿನಗಳಿಂದ ಇಂಡುವಾಳು ಗ್ರಾಮದ ಸ್ನೇಹಿತನ ಮನೆಯಲ್ಲಿ ವಾಸವಿದ್ದ ಸುಶೀಲ್​, ಕೊನೆಗೆ ಅದೇ ಗ್ರಾಮದ ಮನೆಯಲ್ಲಿ ನೇಣಿಗೆ ಶರಣಾಗಿ, ಎಲ್ಲರಿಗೂ ಶಾಕ್​ ನೀಡಿದ್ದರು. ಮಾನಸಿಕ ಖಿನ್ನತೆಯೂ ಸುಶೀಲ್​ ಆತ್ಮಹತ್ಯೆಗೆ ಕಾರಣ ಎಂಬ ಮಾತು ಅವರದೇ ಆಪ್ತವಲಯದಿಂದ ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net