ಹೊಸ ವರ್ಷಕ್ಕೆ ಒಂದೇ ವಾರ, ಹೊಸ ಹರ್ಷಕ್ಕೂ ಮೂಗುದಾರ; ಪಬ್, ಬಾರ್​-ರೆಸ್ಟೋರೆಂಟ್​ಗಳಿಗೆ ಪೊಲೀಸರ ಖಡಕ್​ ಎಚ್ಚರಿಕೆ

Police
Published on

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಇನ್ನೊಂದೇ ವಾರ ಇರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಹಲವು ಸಿದ್ಧತೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ನಗರದ ಪೊಲೀಸರು ಹೊಸ ಹರ್ಷಕ್ಕೆ ಮೂಗುದಾರ ಹಾಕಲು ಮುಂದಾಗಿದ್ದು, ನಗರದ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್​ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್​ ಅಲೆ, ಒಮಿಕ್ರಾನ್​ ಹಾವಳಿ ನಡುವೆಯೇ ಹೊಸ ವರ್ಷದ ಸಂಭ್ರಮಾಚರಣೆ ಕೂಡ ಗರಿಗೆದರುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಬೆಂಗಳೂರು ಪೊಲೀಸರು, ಸಂಬಂಧಪಟ್ಟ ಎಲ್ಲ ಉದ್ಯಮಿಗಳನ್ನು ಕರೆಸಿ ಸೂಚನೆ ನೀಡುವ ಜತೆಗೆ, ಅದನ್ನು ಪಾಲಿಸುವಲ್ಲಿ ತಪ್ಪಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ರಾಜಧಾನಿಯಲ್ಲಿ ಆಯಾ ವಿಭಾಗದ ಉಪ ಪೊಲೀಸ್ ಆಯುಕ್ತರು ತಮ್ಮ ವ್ಯಾಪ್ತಿಯ ಪಬ್, ಬಾರ್ ಆ್ಯಂಡ್​ ರೆಸ್ಟೋರೆಂಟ್ ಮಾಲೀಕರನ್ನು ಕರೆಸಿ ಸಭೆ ನಡೆಸಿ, ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ ಜಡಿಯುವ ಜತೆಗೆ ಪಬ್, ಬಾರ್ ಆ್ಯಂಡ್​ ರೆಸ್ಟೊರೆಂಟ್ ಪರವಾನಗಿ ಕೂಡ ರದ್ದು ಮಾಡುವುದಾಗಿ ಖಡಕ್​ ಆಗಿ ಹೇಳಿದ್ದಾರೆ. ಮಾತ್ರವಲ್ಲ, ಯಾರೇ ಡ್ರಗ್ಸ್ ಮಾರಾಟ ಮಾಡುವುದು ಗಮನಕ್ಕೆ ಬಂದರೆ ಅಥವಾ ಮಾದಕ ವಸ್ತುಗಳನ್ನು ಸೇವಿಸುವುದು ಕಂಡುಬಂದರೆ ಮಾಹಿತಿ ನೀಡುವಂತೆಯೂ ತಿಳಿಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಡಿಸಿಪಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ನಿಗಾ ವಹಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಈ ಸಭೆಗಳನ್ನು ನಡೆಸಲಾಗುತ್ತಿದೆ. ಆಯುಕ್ತರ ಆದೇಶದ ಮೇರೆಗೆ ಪ್ರತಿ ವಿಭಾಗದಲ್ಲಿ ಮೂರು ವಿಶೇಷ ತಂಡಗಳನ್ನು ರಚನೆ ಮಾಡಿರುವ ಡಿಸಿಪಿಗಳು, ಈ ಸಭೆಗಳನ್ನು ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net