

ಬೆಂಗಳೂರು : ಜಾಗತಿಕ ಪಿಡುಗಾದ ಸೈಬರ್ ಅಪರಾಧದ ತಡೆಗೆ ಬೆಂಗಳೂರು ನಗರ ಪೊಲೀಸರು "ಗೋಲ್ಡನ್ ಅವರ್' ಬಳಸಿಕೊಂಡು ಗ್ರಾಹಕರ ಹಣ ಕಳ್ಳರ ಕೈ ಸೇರದಂತೆ ಹೊಸ ಪ್ಲಾನ್ ಮಾಡಿದ್ದಾರೆ. ಅದುವೇ "ಬ್ಯಾಂಕ್ ಅಕೌಂಟ್ ಬ್ಲಾಕಿಂಗ್ ಸಿಸ್ಟಂ' ! ಸೈಬರ್ ಕಳ್ಳರ ಮಾಯಾಜಾಲಕ್ಕೆ ಒಳಗಾಗಿ ಹಣ ಕಳೆದುಕೊಂಡವರು ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್ 112 ಆಥವಾ ನಮ್ಮ 100ಗೆ ಕರೆ ಮಾಡಿದರೆ ಗ್ರಾಹಕರ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಆಗಿರುವ ಖಾತೆಯನ್ನು ಬ್ಲಾಕ್ ಮಾಡಿಸಿ, ಹಣವನ್ನು ಹಿಂಪಡೆಯಲಾಗುತ್ತಿದೆ. ಇದೇ ರೀತಿ 48 ಕೋಟಿ ರೂ.ಗಳನ್ನು ಸೈಬರ್ ಕಳ್ಳರಿಂದ ವಾಪಸ್ ಪಡೆಯುವಲ್ಲಿ ಬೆಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ವಿಜಯವಾಣಿ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್, ಸೈಬರ್ ಕಳ್ಳರು ಅಮಾಯಕರಿಗೆ ಬ್ಯಾಂಕ್ ಅಧಿಕಾರಿಗಳು, ಮೊಬೈಲ್ ಸಿಮ್ ಕಂಪನಿ, ಲಕ್ಕಿ ಡ್ರಾ ಹೆಸರಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆ ವಿವರ, ಕ್ರೆಡಿಟ್, ಡೆಬಿಟ್ ಕಾರ್ಡ್ ವಿವರ ಅಥವಾ ವ್ಯಾಲೆಟ್ ಮಾಹಿತಿ ಪಡೆದು ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಇದು ದೊಡ್ಡ ಸವಾಲಾಗಿದೆ. ಇದನ್ನು ತಪ್ಪಿಸಲು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವಿಣ್ ಸೂದ್ ಸೂಚಿಸಿದರು. ಈ ನಿಟ್ಟಿನಲ್ಲಿ ಕಮಾಂಡ್ ಸೆಂಟರ್ನಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದಿದ್ದಾರೆ.
ಸಾರ್ವಜನಿಕರು ಯಾಮಾರಿ ಸೈಬರ್ ಕಳ್ಳರಿಂದ ವಂಚನೆಗೆ ಒಳಗಾದ ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ 112 ಅಥವಾ ನಮ್ಮ 100ಗೆ ಕರೆ ಮಾಡಬೇಕು. ಕೃತ್ಯ ನಡೆದ ಕೆಲವೇ ಸಮಯ ಅಂದರೆ ಗೋಲ್ಡನ್ ಅವರ್ಅನ್ನು ಬಳಸಿಕೊಂಡು ಕಮಾಂಡ್ ಸೆಂಟರ್ ಸಿಬ್ಬಂದಿ ಕಳ್ಳರ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿಸುತ್ತಾರೆ. ಆನಂತರ ಸೂಕ್ತ ದಾಖಲೆ ಒದಗಿಸಿ ಬ್ಯಾಂಕ್ನಿಂದ ಹಣವನ್ನು ವಾಪಸ್ ಪಡೆದು ಸಂಬಂಧಪಟ್ಟವರಿಗೆ ಹಿಂತಿರುಗಿಸಲಾಗುತ್ತದೆ. ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು, ಪರಿಣಾಮಕಾರಿ ಕೆಲಸವಾಗುತ್ತಿದೆ. ಇದರ ಸಾಧಕಬಾಧಕಗಳ ಚರ್ಚೆ ನಡೆಸಿ ದೊಡ್ಡ ಮಟ್ಟದಲ್ಲಿ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಕಮಲ್ ಪಂತ್ ತಿಳಿಸಿದ್ದಾರೆ.
48.24 ಕೋಟಿ ರೂ. ಸೇಫ್ : 2020ರ ಡಿಸೆಂಬರ್ 22 ರಿಂದ 2021 ರ ಮೇವರೆಗೆ 3,175 ಹಣಕಾಸು ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1,312 ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿ ವಂಚಕರ ಕೈಸೇರುತ್ತಿದ್ದ 48.24 ಕೋಟಿ ರೂ.ಗಳನ್ನು ವಾಪಸ್ ಪಡೆಯಲಾಗಿದೆ. ಈ ಮೂಲಕ ಹಣಕಾಸು ವಂಚನೆ ಜಾಲಕ್ಕೆ ಒಂದಿಷ್ಟು ಬ್ರೇಕ್ ಹಾಕಲಾಗಿದೆ. ಕಳೆದ 6 ತಿಂಗಳಲ್ಲಿ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಅತಿ ಹೆಚ್ಚು ಹಣಕಾಸು ವಂಚನೆ ಪ್ರಕರಣ ದಾಖಲಾಗಿದ್ದು, 615 ಬ್ಯಾಂಕ್ ಖಾತೆ ಬ್ಲಾಕ್ ಮಾಡಲಾಗಿದೆ. ಕೇಂದ್ರ ವಿಭಾಗದದಲ್ಲಿ 79 ಖಾತೆ ಮಾತ್ರ ಜಪ್ತಿ ಮಾಡಲಾಗಿದೆ ಎಂದು ಪಂತ್ ತಿಳಿಸಿದ್ದಾರೆ.
ಏನಿದು ಬ್ಯಾಂಕ್ ಅಕೌಂಟ್ ಬ್ಲಾಕ್ ಸಿಸ್ಟಂ ? : ಸೈಬರ್ ಕ್ರೈಂ ತಡೆಗಟ್ಟುವ ನಿಟ್ಟಿನಲ್ಲಿ ಆರ್ಬಿಐ, ಎಲ್ಲ ಬ್ಯಾಂಕ್ ಅಧಿಕಾರಿಗಳ ಜೊತೆ ಸಭೆ ನಡೆಸಿದೆ. ಎಲ್ಲ ಬ್ಯಾಂಕ್ಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ನಗರ ಪೊಲೀಸ್ ವಿಭಾಗದ ಕಮಾಂಡ್ ಸೆಂಟರ್ನಲ್ಲಿ ವಿಶೇಷ ತಂಡ ರಚನೆ ಮಾಡಿದ್ದು, ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಾರೆ. ಸೈಬರ್ ಕಳ್ಳರಿಂದ ವಂಚನೆಗೆ ಒಳಗಾದವರು ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್ 112 ಅಥವಾ ನಮ್ಮ 100ಗೆ ಕರೆ ಮಾಡಿದರೆ ಪ್ರಾಥಮಿಕ ಮಾಹಿತಿ ಪಡೆದು ಪೊಲೀಸರು, ಸಂಬಂಧಪಟ್ಟ ಬ್ಯಾಂಕ್ಗೆ ಇಮೇಲ್ನಲ್ಲಿ ವಿವರ ಕಳುಹಿಸುತ್ತಾರೆ. ಸೈಬರ್ ಕಳ್ಳರು ಹಣ ಡ್ರಾ ಮಾಡುವ ಮೊದಲು ಖಾತೆಯನ್ನು ಬ್ಯಾಂಕ್ ಅಧಿಕಾರಿಗಳು ಬ್ಲಾಕ್ ಮಾಡುತ್ತಾರೆ. ಆನಂತರ ದೂರು, ಸೂಕ್ತ ದಾಖಲೆ ಪಡೆದು ಎಫ್ಐಆರ್ ಮಾಡಿ ಕಾನೂನು ಪ್ರಕಾರ ಬ್ಯಾಂಕಿಗೆ ಮಾಹಿತಿ ರವಾನಿಸಿ ಹಣ ವಾಪಸ್ ಪಡೆದು, ಕೋರ್ಟ್ ಮೂಲಕ ಗ್ರಾಹಕರಿಗೆ ನೀಡಲಾಗುತ್ತದೆ.
ಪೊಲೀಸರು ಈ ವ್ಯವಸ್ಥೆಯ ಅಡಿಯಲ್ಲಿ ಬೆಂಗಳೂರಿನಲ್ಲಿ ವಿಭಾಗಶಃ ಸೈಬರ್ ಕಳ್ಳರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿರುವ ಅಂಕಿಅಂಶಗಳು ಹೀಗಿವೆ - ಕೇಂದ್ರ ವಿಭಾಗ - 79, ಉತ್ತರ ವಿಭಾಗ - 521, ಆಗ್ನೇಯ ವಿಭಾಗ - 595, ದಕ್ಷಿಣ ವಿಭಾಗ - 615, ವೈಟ್ಫೀಲ್ಡ್ ವಿಭಾಗ - 439, ಪೂರ್ವ ವಿಭಾಗ - 439, ಪಶ್ಚಿಮ ವಿಭಾಗ - 351, ಈಶಾನ್ಯ ವಿಭಾಗ - 106.