ನೀರು ಕೇಳಿದರೆ ಮೂತ್ರ ಕುಡಿಸಿದ ಆರೋಪ ಹೊತ್ತ ಎಸ್​ಐ ಸಸ್ಪೆಂಡ್​

New Project (36)
Published on

ಬೆಂಗಳೂರು: ಎಫ್​ಐಆರ್​ ದಾಖಲಿಸದೆ ಯುವಕನೊಬ್ಬನನ್ನು ಠಾಣೆಗೆ ಕರೆದೊಯ್ದು ಥಳಿಸಿದ್ದಲ್ಲದೆ, ಮೂತ್ರ ಕುಡಿಸಿದ್ದರೆಂದು ಆರೋಪಿಸಲಾಗಿದ್ದ ನಗರದ ಬ್ಯಾಟರಾಯನಪುರ ಠಾಣೆಯ ಸಬ್​ ಇನ್​ಸ್ಪೆಕ್ಟರ್​ ಕೆ.ಎನ್​.ಹರೀಶ್​​ರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ನೆರೆಮನೆಯವರ ಜತೆಗಿನ ಜಗಳಕ್ಕೆ ಸಂಬಂಧಿಸಿದಂತೆ ಪಾದರಾಯನಪುರ ನಿವಾಸಿ ತೌಸೀಫ್​ ಪಾಷಾ ಎಂಬ ಯುವಕನನ್ನು ಡಿಸೆಂಬರ್​ 2 ರ ಮಧ್ಯರಾತ್ರಿ 1 ಗಂಟೆಗೆ ಠಾಣೆಗೆ ಕರೆದೊಯ್ದ ಹರೀಶ್,​ ಚಿತ್ರಹಿಂಸೆ ನೀಡಿದ್ದರು. ಎಫ್​ಐಆರ್​ ದಾಖಲಿಸದೆ ಮನಸೋಇಚ್ಛೆ ಥಳಿಸಿದ್ದರು. ಕುಡಿಯಲು ನೀರು ಕೇಳಿದರೆ ಬಾಟಲ್​ಗೆ ಮೂತ್ರ ತುಂಬಿ ಕೊಟ್ಟಿದ್ದರು. ಆತನ ಗಡ್ಡ ಬೋಳಿಸಿ ಅಮಾನವೀಯವಾಗಿ ವರ್ತಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ತೌಸೀಫ್​​ ಹೇಳಿಕೆಯುಳ್ಳ ವಿಡಿಯೋ ​ಕೂಡ ಒಂದು ವೈರಲ್​ ಆಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಟರಾಯನಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಡಿಸಿಪಿ ಸಂಜಯ್​ ಪಾಟೀಲ್​ ಸೂಚನೆ ಮೇರೆಗೆ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿದ್ದು, ಕರ್ತವ್ಯ ಲೋಪಕ್ಕಾಗಿ ಸಬ್ ಇನ್ಸ್‌ಪೆಕ್ಟರ್ ಹರೀಶ್​​ರನ್ನು ಸಸ್ಪೆಂಡ್​ ಮಾಡಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net